ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್‌ ಟೆನಿಸ್‌: ಇಗಾ ಸ್ವಟೆಕ್‌ ಮುಡಿಗೆ ಕಿರೀಟ

ಫೈನಲ್‌ನಲ್ಲಿ ಆನ್ಸ್‌ ಜಬೇರ್‌ಗೆ ನಿರಾಸೆ
Last Updated 11 ಸೆಪ್ಟೆಂಬರ್ 2022, 12:35 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ವಿಶ್ವದ ಅಗ್ರ ರ‍್ಯಾಂಕ್‌ನ ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಟೆಕ್‌ ಅವರು ಅಮೆರಿಕ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್ ಆದರು.

ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಅವರು 6–2, 7–6 (7–5) ರಲ್ಲಿ ಟ್ಯುನೀಷಿಯಾದ ಆನ್ಸ್‌ ಜಬೇರ್‌ ಅವರನ್ನು ಮಣಿಸಿದರು. ವೃತ್ತಿಜೀವನದ ಮೂರನೇ ಗ್ರ್ಯಾನ್‌ಸ್ಲಾಮ್‌ ಗೆದ್ದ ಸ್ವಟೆಕ್‌, ಅಮೆರಿಕ ಓಪನ್‌ನಲ್ಲಿ ಚಾಂಪಿಯನ್‌ ಆದ ಪೋಲೆಂಡ್‌ನ ಮೊದಲ ಆಟಗಾರ್ತಿ ಎನಿಸಿಕೊಂಡರು.

ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದ ಪ್ರೇಕ್ಷಕರ ಮುಂದೆ ಸೊಗಸಾದ ಆಟವಾಡಿದ 21 ವರ್ಷದ ಸ್ವಟೆಕ್‌, ಒಂದು ಗಂಟೆ 52 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಜೂನ್‌ನಲ್ಲಿ ಫ್ರೆಂಚ್ ಓಪನ್‌ ಗೆದ್ದಿದ್ದ ಅವರು ಈ ವರ್ಷದ ಎರಡನೇ ಗ್ರ್ಯಾನ್‌ಸ್ಲಾಮ್‌ ಗೆಲ್ಲಲು ಯಶಸ್ವಿಯಾದರು.

ಪೋಲೆಂಡ್‌ನ ಆಟಗಾರ್ತಿಗೆ ಫೈನಲ್‌ನಲ್ಲಿ ದೊರೆತ ಸತತ 10ನೇ ಗೆಲುವು ಇದು. ಮೂರು ವರ್ಷಗಳ ಹಿಂದೆ ಸ್ವಿಟ್ಜರ್‌ಲೆಂಡ್‌ನ ಲುಗಾನೊದಲ್ಲಿ ನಡೆದಿದ್ದ ಡಬ್ಲ್ಯುಟಿಎ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸೋತ ಬಳಿಕ ಆಡಿದ ಎಲ್ಲ ಫೈನಲ್‌ಗಳಲ್ಲೂ ಅವರು ಗೆದ್ದಿದ್ದಾರೆ.

‘ಇಲ್ಲಿ ಪ್ರಶಸ್ತಿ ಗೆಲ್ಲುವ ಖಚಿತತೆ ಇರಲಿಲ್ಲ. ಆದರೂ ಅದರಲ್ಲಿ ಯಶಸ್ವಿಯಾಗಿರುವುದು ಅಚ್ಚರಿ ಉಂಟುಮಾಡಿದೆ. ಈ ಸಾಧನೆ ಸಂತಸ ನೀಡಿದೆ’ ಎಂದು ಸ್ವಟೆಕ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT