ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಪ್ರತಿಭೆ: ಎಮಾ ರಡುಕಾನುಗೆ ಲಿವರ್‌ಪೂಲ್‌ ಮ್ಯಾನೇಜರ್‌ ಬಣ್ಣನೆ

Last Updated 15 ಸೆಪ್ಟೆಂಬರ್ 2021, 7:04 IST
ಅಕ್ಷರ ಗಾತ್ರ

ಲಂಡನ್/ನ್ಯೂಯಾರ್ಕ್‌: ಟೆನಿಸ್‌ ಯುವರಾಣಿ ಎಮಾ ರಡುಕಾನು ಅವರನ್ನು 'ಶತಮಾನದ ಪ್ರತಿಭೆ' ಎಂದು ಲಿವರ್‌ಪೂಲ್‌ ಫುಟ್ಬಾಲ್‌ ಕ್ಲಬ್‌ನ ಮ್ಯಾನೇಜರ್‌ ಜರ್ಜೆನ್‌ ಕ್ಲೋಪ್‌ ಶ್ಲಾಘಿಸಿದ್ದಾರೆ.

'ಫೈನಲ್‌ ಪಂದ್ಯವನ್ನು ವೀಕ್ಷಿಸಿದೆ. ಮನಸ್ಸಿಗೆ ನಾಟಿದ ಪಂದ್ಯವಾಗಿತ್ತು. ಬಹಳ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ಮಹಿಳಾ ವಿಭಾಗದ ಟೆನಿಸ್‌ ಪಂದ್ಯವೊಂದನ್ನು ಪೂರ್ತಿ ನೋಡಿ ಬಹಳ ಸಮಯವೇ ಆಗಿತ್ತು. ಅಂತಿಮ ಹಣಾಹಣಿ ಅದ್ಭುತವಾಗಿತ್ತು. ಪಂದ್ಯದುದ್ದಕ್ಕು ಕಂಡುಕೊಂಡ ವೇಗ ಬಹಳ ಪ್ರಭಾವಶಾಲಿಯಾಗಿತ್ತು. ನಿಜಕ್ಕೂ ಪ್ರತಿಭಾವಂತರ ಪಂದ್ಯವಿದು' ಎಂದು ಜರ್ಜೆನ್‌ ಕ್ಲೋಪ್‌ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

18 ಮತ್ತು 19 ವರ್ಷದ ಇಬ್ಬರು ಹುಡುಗಿಯರು ಪಂದ್ಯವಿಡೀ ಪ್ರಭಾವಶಾಲಿಯಾಗಿ ಮೆರೆದರು. ಟ್ರೋಫಿ ಸ್ವೀಕಾರದ ಸಂದರ್ಭದಲ್ಲೂ ಅದೇ ಕ್ರೀಡಾಸ್ಪೂರ್ತಿ ಉಭಯ ತಾರೆಯರಲ್ಲಿತ್ತು. ಇಬ್ಬರ ಮಾತುಗಳು ಮಾರ್ಮಿಕವಾಗಿದ್ದವು ಎಂದು ಜರ್ಜೆನ್‌ ಕ್ಲೋಪ್‌ ಹೇಳಿದರು.

ಯುಎಸ್‌ ಓಪನ್‌ 2021 ವಿಜೇತೆ ಎಮಾ ಬಗ್ಗೆ ವಿಶೇಷವಾಗಿ ಮಾತನಾಡಿದ ಕ್ಲೋಪ್‌, ಕಠಿಣ ಪರಿಶ್ರಮದಿಂದ ಸಣ್ಣ ವಯಸ್ಸಿಗೆ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಗೆದ್ದಿದ್ದಾಳೆ. ನಿಜಕ್ಕೂ ಎಮಾ ರಡುಕಾನು ಶತಮಾನದ ಪ್ರತಿಭೆ. ಕಠಿಣ ಪರಿಶ್ರಮವಿರದಿದ್ದರೆ ಯಶಸ್ಸು ಸಿಗುತ್ತಿರಲಿಲ್ಲ. ಪಂದ್ಯದ ವೇಳೆ ಆಕೆಯ ಮುಗುಳ್ನಗು ಕ್ರೀಡಾ ಮೆರುಗನ್ನು ತಂದಿತ್ತು ಎಂದು ಬಣ್ಣಿಸಿದರು.

ನ್ಯೂಯಾರ್ಕ್‌ನಲ್ಲಿ ಶನಿವಾರ ರಾತ್ರಿ ನಡೆದ ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಎಮಾ ರಡುಕಾನು ತಮಗಿಂತ ಒಂದು ವರ್ಷ ದೊಡ್ಡವರಾದ ಕೆನಡಾದ ಲೇಲಾ ಫರ್ನಾಂಡಸ್ ಅವರನ್ನು 6–4, 6–3ರಲ್ಲಿ ಮಣಿಸಿದ್ದರು. ಈ ಮೂಲಕ ಇತಿಹಾಸ ಬರೆದಿದ್ದರು.

1977ರ ವಿಂಬಲ್ಡನ್‌ ಟೂರ್ನಿಯ ಚಾಂಪಿಯನ್ ಆದ ವರ್ಜೀನಿಯಾ ವೇಡ್ ಅವರ ನಂತರ ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಪ್ರಶಸ್ತಿ ಗಳಿಸಿದ ಬ್ರಿಟನ್‌ನ ಮೊದಲ ಮಹಿಳೆ ರಡುಕಾನು. ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಅರ್ಹತಾ ಸುತ್ತಿನಲ್ಲಿ ಆಡಿ ಪ್ರಶಸ್ತಿ ಗಳಿಸಿದ ಮೊದಲ ಟೆನಿಸ್ ಪಟು ಎಂಬ ಹೆಗ್ಗಳಿಕೆಯೂ ರಡುಕಾನು ಅವರದ್ದಾಗಿದೆ.

ರಾಯಿಟರ್ಸ್‌ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT