ಏಷ್ಯನ್ ಕ್ರೀಡಾಕೂಟ ಟೆನಿಸ್‌: ಅಂಕಿತಾ ರೈನಾಗೆ ಕಂಚು

4
ಫೈನಲ್‌ ಪ್ರವೇಶಿಸಿದ ರೋಹನ್‌–ದಿವಿಜ್‌ ಜೋಡಿ

ಏಷ್ಯನ್ ಕ್ರೀಡಾಕೂಟ ಟೆನಿಸ್‌: ಅಂಕಿತಾ ರೈನಾಗೆ ಕಂಚು

Published:
Updated:
Deccan Herald

‍ಪಲೆಂಬಂಗ್‌: ಭಾರತದ ಟೆನಿಸ್‌ ತಾರೆ ಅಂಕಿತಾ ರೈನಾ ಅವರು ಏಷ್ಯನ್‌ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್‌ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಭಾರತದ ಭರವಸೆಯಾಗಿರುವ ರೋಹನ್‌ ಬೋಪಣ್ಣ ಮತ್ತು ದಿವಿಜ್‌ ಶರಣ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಅಂಕಿತಾ 4–6, 6–7ರ ನೇರ ಸೆಟ್‌ಗಳಿಂದ ಚೀನಾದ ಜಾಂಗ್‌ ಶೂಯಿ ಎದುರು ಸೋತರು. ಈ ಹೋರಾಟ 2 ಗಂಟೆ 11 ನಿಮಿಷ ನಡೆಯಿತು. ಅಂಕಿತಾ ಅವರು ಕೂಟದಲ್ಲಿ ಪದಕ ಗೆದ್ದ ಭಾರತದ ಎರಡನೆ ಟೆನಿಸ್‌ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಸಾನಿಯಾ ಮಿರ್ಜಾ ಮೊದಲು ಈ ಸಾಧನೆ ಮಾಡಿದ್ದರು. 

ಕೂಟದಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಶೂಯಿಗೆ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 189ನೆ ಸ್ಥಾನದಲ್ಲಿರುವ ಅಂಕಿತಾ ಪ್ರಬಲ ಪೈಪೋಟಿ ನೀಡಿ ಗಮನ ಸೆಳೆದರು.

ಮೊದಲ ಸೆಟ್‌ನ ಆರಂಭದ ಎಂಟು ಗೇಮ್‌ಗಳಲ್ಲಿ ಅಬ್ಬರದ ಆಟ ಆಡಿದ ಅಂಕಿತಾ ನಂತರ ಮಂಕಾದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 34ನೆ ಸ್ಥಾನದಲ್ಲಿರುವ ಶೂಯಿ ಸತತ ಎರಡು ಗೇಮ್‌ ಜಯಿಸಿ ಸೆಟ್‌ ತಮ್ಮದಾಗಿಸಿಕೊಂಡರು.

77 ನಿಮಿಷಗಳ ಎರಡನೆ ಸೆಟ್‌ನಲ್ಲಿ ಉಭಯ ಆಟಗಾರ್ತಿಯರು ತುರುಸಿನ ಪೈಪೋಟಿ ನಡೆಸಿದರು. ‘ಟೈ ಬ್ರೇಕರ್‌’ನಲ್ಲಿ ಶೂಯಿ ದಿಟ್ಟ ಆಟ ಆಡಿ ಗೆಲುವಿನ ಸಿಹಿ ಸವಿದರು.

ಪುರುಷರ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ಕರ್ನಾಟಕದ ರೋಹನ್‌ ಮತ್ತು ದಿವಿಜ್‌ 4–6, 6–3, 10–8ರಲ್ಲಿ ಜಪಾನ್‌ನ ಶಿಂಬಾಕುರೊ ಮತ್ತು ಉಯೆಸುಗಿ ಕೈಟೊ ಅವರನ್ನು ಮಣಿಸಿದರು.

ಬೋಪಣ್ಣ ಮತ್ತು ದಿವಿಜ್‌ ಅವರು ಮೊದಲ ಸೆಟ್‌ನಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲಿಲ್ಲ. ಹಲವು ತಪ್ಪುಗಳನ್ನು ಮಾಡಿದ ಭಾರತದ ಜೋಡಿ ಸೆಟ್‌ ಕೈಚೆಲ್ಲಿತು.

ಎರಡನೆ ಸೆಟ್‌ನಲ್ಲಿ ರೋಹನ್‌ ಮತ್ತು ದಿವಿಜ್‌ ಆಟ ರಂಗೇರಿತು. ಶರವೇಗದ ಸರ್ವ್‌ ಮತ್ತು ಚುರುಕಿನ ಡ್ರಾಪ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ 1–1ರಲ್ಲಿ ಸಮಬಲ ಸಾಧಿಸಿದರು.

ಮೂರನೆ ಸೆಟ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. ಕೊನೆಯಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಿದ ಭಾರತದ ಜೋಡಿ ಗೆಲುವಿನ ತೋರಣ ಕಟ್ಟಿತು.

ಸೆಮಿಗೆ ಪ್ರಜ್ಞೇಶ್‌: ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿರುವ ಪ್ರಜ್ಞೇಶ್‌ ಗುಣೇಶ್ವರನ್‌ ಸೆಮಿಫೈನಲ್‌ ಪ್ರವೇಶಿಸಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಜ್ಞೇಶ್‌ 6–7, 6–4, 7–6ರಲ್ಲಿ ದಕ್ಷಿಣ ಕೊರಿಯಾದ ಕ್ವೊನೊ ಸೂನ್‌ವೂ ಎದುರು ಗೆದ್ದರು.

ಮಿಶ್ರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ರೋಹನ್‌ ಮತ್ತು ಅಂಕಿತಾ 4–6, 6–1, 6–10ರಲ್ಲಿ ಇಂಡೊನೇಷ್ಯಾದ ಕ್ರಿಸ್ಟೋಫರ್‌ ಬೆಂಜಮಿನ್‌ ರಂಗ್‌ಕತ್‌ ಮತ್ತು ಅಲದಿಲಾ ಸುತ್‌ಜಿಯಾದಿ ಎದುರು ಸೋತರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !