ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಿತಾ ರೈನಾ ಮುಡಿಗೆ ಕಿರೀಟ

ಐಟಿಎಫ್‌ ಸಿಂಗಪುರ ಓಪನ್‌ ಟೆನಿಸ್‌ ಟೂರ್ನಿ
Last Updated 20 ಜನವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಬಲಿಷ್ಠ ಆಟಗಾರ್ತಿಯ ಎದುರು ದಿಟ್ಟ ಆಟ ಆಡಿದ ಭಾರತದ ಅಂಕಿತಾ ರೈನಾ, ಐಟಿಎಫ್‌ ಸಿಂಗಪುರ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅಂಕಿತಾ 6–3, 6–2 ನೇರ ಸೆಟ್‌ಗಳಿಂದ ಅಗ್ರಶ್ರೇಯಾಂಕದ ಆಟಗಾರ್ತಿ ಅರಾಂತಕ್ಷ ರುಷ್‌ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ ಒಂದು ಗಂಟೆ 23 ನಿಮಿಷ ನಡೆಯಿತು.

ಈ ಋತುವಿನಲ್ಲಿ ಅಂಕಿತಾ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ. ವೃತ್ತಿ ಬದುಕಿನಲ್ಲಿ ಜಯಿಸಿದ ಎಂಟನೇ ಟ್ರೋಫಿ ಇದು.

ಆ ಬಾರಿಯ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಅರ್ಹತಾ ಹಂತದಲ್ಲಿ ಆಡಿ ಗಮನ ಸೆಳೆದಿದ್ದ ಭಾರತದ ಆಟಗಾರ್ತಿ, ಅರಂತಾಕ್ಷ ಎದುರಿನ ಹಣಾಹಣಿಯಲ್ಲಿ ಮಿಂಚಿನ ಸಾಮರ್ಥ್ಯ ತೋರಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 174ನೇ ಸ್ಥಾನದಲ್ಲಿರುವ ಅಂಕಿತಾ, ಮೊದಲ ಸೆಟ್‌ನ ಆರಂಭದಿಂದಲೇ ಅಬ್ಬರಿಸಿದರು. ಶರವೇಗದ ಸರ್ವ್‌ ಮತ್ತು ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 122ನೇ ಸ್ಥಾನ ಹೊಂದಿರುವ ಅರಾಂತಕ್ಷ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ಮೊದಲ ಎರಡು ಗೇಮ್‌ಗಳಲ್ಲಿ ಎದುರಾಳಿಯಿಂದ ಅಲ್ಪ ಪ್ರತಿರೋಧ ಎದುರಿಸಿದ ಅಂಕಿತಾ ನಂತರ ಆಧಿಪತ್ಯ ಸಾಧಿಸಿದರು. ತಮ್ಮ ಸರ್ವ್‌ ಉಳಿಸಿಕೊಳ್ಳುವ ಜೊತೆಗೆ ಸುಲಭವಾಗಿ ಎದುರಾಳಿಯ ಸರ್ವ್‌ಗಳನ್ನು ಮುರಿದು ಅಭಿಮಾನಿಗಳನ್ನು ರಂಜಿಸಿದರು. ಭಾರತದ ಆಟಗಾರ್ತಿಯರ ಬೇಸ್‌ಲೈನ್‌ ಮತ್ತು ಗ್ರೌಂಡ್‌ಸ್ಟ್ರೋಕ್‌ ಹೊಡೆತಗಳಿಗೆ ನಿರುತ್ತರರಾದ ಅರಾಂತಕ್ಷ ಸೋಲಿಗೆ ಶರಣಾದರು.

ಇದಕ್ಕೂ ಮುನ್ನ ನಡೆದಿದ್ದ ಪಂದ್ಯಗಳಲ್ಲಿ ಅಂಕಿತಾ, ಉಜ್‌ಬೆಕಿಸ್ತಾನದ ಸಬಿನಾ ಶರಿಪೋವಾ ಮತ್ತು ಸ್ವಿಟ್ಜರ್‌ಲೆಂಡ್‌ನ ಕಾನಿ ಪೆರಿನ್‌ ವಿರುದ್ಧ ಗೆದ್ದಿದ್ದರು.

‘ಟೂರ್ನಿಗೂ ಮುನ್ನ ಕಠಿಣ ಅಭ್ಯಾಸ ನಡೆಸಿದ್ದೆ. ತಾಲೀಮಿನ ವೇಳೆ ಶರವೇಗದ ಸರ್ವ್‌ಗಳನ್ನು ಸಿಡಿಸುವುದಕ್ಕೆ ಹೆಚ್ಚು ಒತ್ತು ನೀಡಿದ್ದೆ. ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಅರ್ಹತಾ ಹಂತದಲ್ಲಿ ಆಡಿದ್ದರಿಂದ ವಿಶ್ವಾಸ ಹೆಚ್ಚಿತ್ತು’ ಎಂದು ಅಂಕಿತಾ ಹೇಳಿದ್ದಾರೆ.

‘ಟೂರ್ನಿಯಲ್ಲಿ ಬಲಿಷ್ಠ ಆಟಗಾರ್ತಿಯರು ಭಾಗವಹಿಸಿದ್ದರು. ಹೀಗಾಗಿ ಎಲ್ಲಾ ಪಂದ್ಯಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರುವತ್ತ ಚಿತ್ತ ಹರಿಸಿದ್ದೆ. ಹೀಗಾಗಿ ಇಲ್ಲಿ ಪ್ರಶಸ್ತಿ ಗೆಲ್ಲುವುದಕ್ಕೆ ಸಾಧ್ಯವಾಯಿತು’ ಎಂದು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT