ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀ ಕ್ವಾರ್ಟರ್‌ಗೆ ಫೆಡರರ್‌, ಜೊಕೊವಿಚ್‌

ಸಿನ್ಸಿನಾಟಿ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ: ಒಸಾಕಗೆ ಗೆಲುವು
Last Updated 15 ಆಗಸ್ಟ್ 2019, 14:44 IST
ಅಕ್ಷರ ಗಾತ್ರ

ಸಿನ್ಸಿನಾಟಿ: ಟೆನಿಸ್‌ ಲೋಕದ ದಿಗ್ಗಜರಾದ ರೋಜರ್‌ ಫೆಡರರ್‌ ಮತ್ತು ನೊವಾಕ್‌ ಜೊಕೊವಿಚ್‌ ಅವರು ಸಿನ್ಸಿನಾಟಿ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಸೆಂಟರ್‌ ಕೋರ್ಟ್‌ನಲ್ಲಿ ಬುಧವಾರ ರಾತ್ರಿ ನಡೆದ 32ರ ಘಟ್ಟದ ಹಣಾಹಣಿಯಲ್ಲಿ ಸ್ವಿಟ್ಜರ್‌ಲೆಂಡ್‌ನ ಫೆಡರರ್‌ 6–3, 6–4 ನೇರ ಸೆಟ್‌ಗಳಿಂದ ಅರ್ಜೆಂಟೀನಾದ ವುವಾನ್‌ ಇಗ್ನ್ಯಾಷಿಯೊ ಲೊಂಡೆರೊ ಎದುರು ಗೆದ್ದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಫೆಡರರ್‌ ಈ ಹೋರಾಟದಲ್ಲಿ ತಾವು ಮಾಡಿದ ಎಲ್ಲಾ ಸರ್ವ್‌ಗಳನ್ನೂ ಉಳಿಸಿಕೊಂಡರು. ಒಂಬತ್ತು ಏಸ್‌ಗಳನ್ನು ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು.

ಇನ್ನೊಂದು ಪೈಪೋಟಿಯಲ್ಲಿ ಸರ್ಬಿಯಾದ ಆಟಗಾರ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಜೊಕೊವಿಚ್‌ 7–5, 6–1ರಲ್ಲಿ ಅಮೆರಿಕದ ಸ್ಯಾಮ್‌ ಕ್ವೆರಿ ಎದುರು ಗೆದ್ದರು.

ಗುರುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೊಸ್‌ 7–6, 6–7, 2–6ರಲ್ಲಿ ರಷ್ಯಾದ ಕರೆನ್‌ ಕಚನೋವ್‌ ಎದುರು ನಿರಾಸೆ ಕಂಡರು.

ಎರಡನೇ ಸೆಟ್‌ ಸೋತ ನಂತರ ಅಂಗಳದ ಹೊರಗೆ ಹೋದ ಕಿರ್ಗಿಯೊಸ್‌ ಎರಡು ರ‍್ಯಾಕೆಟ್‌ಗಳನ್ನು ನೆಲಕ್ಕೆ ಬಡಿದು ಮುರಿದು ಹಾಕಿದರು. ಚೇರ್‌ ಅಂಪೈರ್‌ ಫರ್ಗ್ಯೂಸ್‌ ಮರ್ಫಿ ಹೊರಗೆ ಹೋಗದಂತೆ ಎಚ್ಚರಿಸಿದರೂ ಕಿರ್ಗಿಯೊಸ್‌ ಕೇಳಲಿಲ್ಲ.

ಇತರ ಪಂದ್ಯಗಳಲ್ಲಿ ರಾಬರ್ಟೊ ಬಟಿಸ್ಟಾ ಅಗಟ್‌ 6–3, 3–6, 6–1ರಲ್ಲಿ ಫ್ರಾನ್ಸೆಸ್‌ ತಿಯಾಫ್‌ ಎದುರೂ, ಲುಕಾಸ್‌ ಪೌವಿಲ್‌ 6–4, 6–4ರಲ್ಲಿ ಡೆನಿಶ್‌ ಶಪೊವಲೊವ್‌ ಮೇಲೂ, ಆ್ಯಡ್ರಿಯನ್‌ ಮನ್ನಾರಿನೊ 6–1, 6–3ರಲ್ಲಿ ಮಿಖಾಯಿಲ್‌ ಕುಕುಸ್ಕಿನ್‌ ವಿರುದ್ಧವೂ, ಮಿಯೊಮಿರ್‌ ಕೆಕಮನೊವಿಚ್ 6–7, 6–2, 6–4ರಲ್ಲಿ ಅಲೆಕ್ಸಾಂಡರ್‌ ಜ್ವೆರೆವ್‌ ಎದುರೂ, ಡೇವಿಡ್‌ ಗೊಫಿನ್‌ 6–1, 7–5ರಲ್ಲಿ ಗುಯಿಡೊ ಪೆಲ್ಲಾ ವಿರುದ್ಧವೂ ಗೆದ್ದರು.

16ರ ಘಟ್ಟಕ್ಕೆ ಒಸಾಕ: ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಜಪಾನ್‌ನ ನವೊಮಿ ಒಸಾಕ 16ರ ಘಟ್ಟಕ್ಕೆ ಲಗ್ಗೆ ಇಟ್ಟರು.

ಗುರುವಾರ ನಡೆದ ಎರಡನೇ ಸುತ್ತಿನ ಪೈಪೋಟಿಯಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಒಸಾಕ 7–6, 2–6, 6–2ರಲ್ಲಿ ಅಲಿಯಾಕ್ಸಾಂಡ್ರ ಸಸನೊವಿಚ್‌ ಎದುರು ಗೆದ್ದರು.

ಸ್ಲೋನ್‌ ಸ್ಟೀಫನ್ಸ್‌ 2–6, 6–4, 6–3ರಲ್ಲಿ ಯೂಲಿಯಾ ಪುಟಿನ್‌ತ್ಸೆವಾ ಎದುರೂ, ಸೋಫಿಯಾ ಕೆನಿನ್‌ 6–4, 6–1ರಲ್ಲಿ ಜರಿನಾ ದಿಯಾಸ್‌ ಮೇಲೂ, ಮ್ಯಾಡಿಸನ್‌ ಕೀಸ್‌ 6–4, 6–1ರಲ್ಲಿ ಡರಿಯಾ ಕಸತ್ಕಿನಾ ವಿರುದ್ಧವೂ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT