ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಫೈನಲ್‌ ಪ್ರವೇಶಿಸಿದ ಜೊಕೊವಿಚ್‌

Last Updated 21 ಜೂನ್ 2020, 6:21 IST
ಅಕ್ಷರ ಗಾತ್ರ

ಜಾದರ್, ಕ್ರೊವೇಷ್ಯಾ: ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಅಮೋಘ ಆಟದ ಮೂಲಕ ಇಲ್ಲಿನ ವಿಸನ್‌ಜಿಕ್‌ ಟೆನಿಸ್‌ ಸಂಕೀರ್ಣದಲ್ಲಿ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು.

ತಾವೇ ಆಯೋಜಿಸಿರುವ ಏಡ್ರಿಯಾ ಟೂರ್ ಪ್ರದರ್ಶನ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ನೊವಾಕ್‌, ಫೈನಲ್‌ಗೆ ಲಗ್ಗೆ ಇಟ್ಟರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್‌ 4–3, 4–1ರಲ್ಲಿ ಸರ್ಬಿಯಾದವರೇ ಆದ ಪೆಡ್ಜಾ ಕ್ರಿಸ್ಟಿನ್‌ ಹಾಗೂ 4–1, 4–3ರಲ್ಲಿ ಕ್ರೊವೇಷ್ಯಾದ ಬೊರ್ನಾ ಕೊರಿಕ್‌ ಅವರನ್ನು ಮಣಿಸಿ ಸಂಭ್ರಮಿಸಿದರು.

ಕ್ರಿಸ್ಟಿನ್‌ ಎದುರಿನ ಪಂದ್ಯದಲ್ಲಿ ನೊವಾಕ್‌ ಅವರು ಮೂರು ಸೆಟ್‌ ಪಾಯಿಂಟ್‌ ಕಾಪಾಡಿಕೊಂಡರು.

‘ಟೆನಿಸ್‌ ಸೊಬಗನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ಧನ್ಯವಾದಗಳು. ಅವರಿಗೆ ಭರಪೂರ ಮನರಂಜನೆ ನೀಡಿದ್ದೇವೆ ಎಂಬ ವಿಶ್ವಾಸ ನನಗಿದೆ’ ಎಂದು ಜೊಕೊವಿಚ್‌, ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಏಡ್ರಿಯಾ ಟೂರ್‌ನ ಎರಡನೇ ಲೆಗ್‌ನ ಟೂರ್ನಿ ಇದಾಗಿದೆ. ಹೋದ ವಾರಾಂತ್ಯದಲ್ಲಿ ಬೆಲ್‌ಗ್ರೇಡ್‌ನಲ್ಲಿ ಆಯೋಜನೆಯಾಗಿದ್ದ ಆರಂಭಿಕ ಲೆಗ್‌ನ ಟೂರ್ನಿಯಲ್ಲಿ ಆಸ್ಟ್ರಿಯಾದ ಡಾಮಿನಿಕ್‌ ಥೀಮ್‌ ಅವರು ಚಾಂಪಿಯನ್‌ ಆಗಿದ್ದರು.

ಇದೇ ತಿಂಗಳ 27 ಮತ್ತು 28ರಂದು ಮೊಂಟೆನೆಗ್ರೊದಲ್ಲಿ ನಿಗದಿಯಾಗಿದ್ದ ಮೂರನೇ ಲೆಗ್‌ನ ಟೂರ್ನಿಯನ್ನು ಕೊರೊನಾ ಬಿಕ್ಕಟ್ಟಿನ ಕಾರಣ ರದ್ದು ಮಾಡಲಾಗಿದೆ. ನಾಲ್ಕನೇ ಲೆಗ್‌ನ ಟೂರ್ನಿಯು ಜುಲೈ 3 ಮತ್ತು 4ರಂದು ಬೋಸ್ನಿಯಾದ ಬಾಂಜಾ ಲುಕಾದಲ್ಲಿ ನಡೆಯಲಿದೆ.

ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಒಟ್ಟು ಎಂಟು ಮಂದಿ ಕಣಕ್ಕಿಳಿಯಲಿದ್ದಾರೆ. ಇವರನ್ನು ಎರಡು ಗುಂಪುಗಳನ್ನಾಗಿ ವಿಭಾಗಿಸಲಾಗುತ್ತದೆ. ಒಂದು ಸೆಟ್‌ನ ಆಟವು‌ ಏಳು ಗೇಮ್‌ಗಳಿಗೆ (ಬೆಸ್ಟ್‌ ಆಫ್‌ ಸೆವೆನ್‌) ಸೀಮಿತವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT