ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಜಿಲ್ಲಾಡಳಿತ ಪಣ

ಐದು ಲಕ್ಷ ಬೀಜದುಂಡೆ, 12 ಲಕ್ಷ ಸಸಿ ನಾಟಿಗೆ ನಿರ್ಧಾರ, ಆಡಳಿತದ ಜೊತೆ ಕೈ ಜೋಡಿಸಲು ಮನವಿ
Last Updated 5 ಜೂನ್ 2018, 12:38 IST
ಅಕ್ಷರ ಗಾತ್ರ

ಹಾವೇರಿ: ಅತ್ತ ಮಲೆನಾಡು, ಇತ್ತ ಬಯಲು ಸೀಮೆಯ ಮಧ್ಯೆ ನಳನಳಿಸಿ ಕಂಗೊಳಿಸಬೇಕಿದ್ದ ‘ಹಾವೇರಿ’, ಕಳೆದ ನಾಲ್ಕು ವರ್ಷಗಳ ಬರದಿಂದ ಬಳಲಿದ್ದಾಳೆ. ಈಚೆಗೆ ಸುರಿದ ಮುಂಗಾರು ಪೂರ್ವ ಮಳೆ ಸ್ವಲ್ಪ ಭರವಸೆ ಮೂಡಿಸಿದೆ. ಆದರೆ, ಇದಕ್ಕೂ ಮೊದಲೇ ಭೌಗೋಳಿಕವಾಗಿ ಹಸಿರಿಲ್ಲದೇ (ಶೇ 8.5 ಮಾತ್ರ ಅರಣ್ಯ ಪ್ರದೇಶ) ಸೊರಗಿದ್ದಳು. ಮನುಕುಲ– ಜೀವ ಸಂಕುಲದ ಭವಿಷ್ಯಕ್ಕಾಗಿ ಆಕೆಗೆ ‘ಜೀವಕಳೆ’ ನೀಡಲು ಕಳೆದೆರಡು ವರ್ಷದಿಂದ ಜಿಲ್ಲಾಡಳಿತ ಗುರಿ ಇರಿಸಿಕೊಂಡಿದೆ.

ಆಕೆಗೆ ಹಸಿರು ತೊಡಿಸುವ (ಶೇ 33 ರಷ್ಟು ಅರಣ್ಯ) ಪ್ರಯತ್ನಕ್ಕೆ ಜಿಲ್ಲಾಡಳಿತ ಹೆಜ್ಜೆ ಇಟ್ಟಿದ್ದು, ಮುಂಗಾರಿನೊಂದಿಗೆ ಬರುವ ಪರಿಸರ ದಿನಾಚರಣೆಯೊಂದಿಗೆ (ಜೂನ್ 5) ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದೆ. ಈ ಬಾರಿ ಹಸಿರು ನಾಟಿಯೊಂದಿಗೆ ‘ಪ್ಲಾಸ್ಟಿಕ್ ಮುಕ್ತ ಹಾವೇರಿ’ಯು ಜಿಲ್ಲಾಡಳಿತದ ಧ್ಯೇಯವಾಗಿದೆ.

ಈ ಬಾರಿ ವಿಶ್ವ ಪರಿಸರ ದಿನಾಚರಣೆಯನ್ನು ಸಮಾಜದ ಸಹಭಾಗಿತ್ವದಲ್ಲಿ ನಡೆಸುವ ಗುರಿ ನಿಗದಿ ಪಡಿಸಲಾಗಿದೆ. ಅದಕ್ಕಾಗಿ ಜಿಲ್ಲಾಡಳಿತ ಆವರಣ ಸೇರಿದಂತೆ ಎಲ್ಲ ಇಲಾಖೆ, ಗ್ರಾಮ ಪಂಚಾಯ್ತಿ ಕಚೇರಿಗಳ ಆವರಣದಲ್ಲಿ ಒಟ್ಟು 50 ಸಾವಿರ ಸಸಿಗಳನ್ನು ನೆಡುವ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದರು.

ಜಿಲ್ಲೆಯ 224 ಗ್ರಾಮ ಪಂಚಾಯ್ತಿಗಳಿಗೆ ತಲಾ 200ರಂತೆ ಸಸಿಗಳನ ನೀಡುವುದು, ತಾಲ್ಲೂಕು ಕೇಂದ್ರದಲ್ಲಿ ಸಾವಿರ ಹಾಗೂ ಜಿಲ್ಲಾಡಳಿತ ಆವರಣದಲ್ಲಿ ಎರಡು ಸಾವಿರ ಸಸಿ ನೆಡುವ ಗುರಿಯನ್ನು ಅವರು ಇಟ್ಟುಕೊಂಡಿದ್ದಾರೆ.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸಾಮಾಜಿಕ ಅರಣ್ಯ ವಿಭಾಗದಿಂದ 3.75 ಲಕ್ಷ ಸಸಿಗಳನ್ನು ರೈತರಿಗೆ ವಿತರಿಸಲು ಯೋಜಿಸಲಾಗಿದೆ. ನರೇಗಾ ಯೋಜನೆಯಡಿ ತಗಲುವ ವೆಚ್ಚವನ್ನು ಸಹ ಕೃಷಿಕರಿಗೆ ನೀಡಲಾಗುತ್ತಿದೆ. ಪ್ರಾದೇಶಿಕ ಅರಣ್ಯ ವಿಭಾಗದಿಂದಲೂ ಸುಮಾರು 8.5 ಲಕ್ಷ ಸಸಿಗಳನ್ನು ನೆಡುವುದು ಸೇರಿದಂತೆ ಈ ಬಾರಿ ಒಟ್ಟು 12.5 ಲಕ್ಷ ಸಸಿಗಳ ನಾಟಿಗೆ ಇಲಾಖೆ ಕಾರ್ಯಕ್ರಮ ರೂಪಿಸಿದೆ.

ಕಳೆದ ಬಾರಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಮೂಲಕ 2 ಲಕ್ಷ ಬೀಜದುಂಡೆ (ಸೀಡ್ ಬಾಲ್)ತಯಾರಿಸಲಾಗಿತ್ತು. ಈ ಬಾರಿ ಜಿಲ್ಲಾಡಳಿತವು 5 ಲಕ್ಷ ಬೀಜದುಂಡೆಗಳನ್ನು ತಯಾರಿಸಲು ಉದ್ದೇಶಿಸಿದೆ.

ಪ್ಲಾಸ್ಟಿಕ್ ಮುಕ್ತ: ಪ್ಲಾಸ್ಟಿಕ್ ಮುಕ್ತ ಹಾವೇರಿ ನಿರ್ಮಿಸುವ ನಿಟ್ಟಿನಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮತ್ತು ಸರಬರಾಜಿಗೆ ತಡೆ ಹಾಕುವ ಹಾಗೂ ಪ್ಲಾಸ್ಟಿಕ್ ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿದೆ. ಅದಕ್ಕಾಗಿ ಆಯ್ದ ಸಾರ್ವಜನಿಕ ಸ್ಥಳಗಳನ್ನು ‘ಪ್ಲಾಸ್ಟಿಕ್ ಮುಕ್ತ’ ಮಾಡುವ ಯೋಜನೆ ರೂಪಿಸಿದೆ.

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಜನದಟ್ಟಣೆಯ ಸ್ಥಳಗಳಲ್ಲಿ ಆಶಾ, ಅಂಗನವಾಡಿ, ಎನ್‌ಸಿಸಿ, ಎನ್‌ಎಸ್‌ಎಸ್‌ ಹಾಗೂ ಶಾಲಾ –ಕಾಲೇಜು ವಿದ್ಯಾರ್ಥಿಗಳ ಮೂಲಕ ಸ್ವಚ್ಛತೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವಿಧೆಡೆ ಪ್ಲಾಸ್ಟಿಕ್ ನಿಷೇಧ ಕುರಿತು ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಿದೆ. ಕಳೆದ ಬಾರಿಯಂತೆ ಈ ವರ್ಷವೂ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತಿತರರು ಹುಟ್ಟು ಹಬ್ಬ ಆಚರಿಸುವ ಸಂದರ್ಭದಲ್ಲಿ ಸಸಿ ನೆಡುವ ಜಾಗೃತಿ ಮೂಡಿಸುವ ಯೋಜನೆ ರೂಪಿಸಲಾಗಿದೆ. ಅಲ್ಲದೇ, ಪರಿಸರ ದಿನಾಚರಣೆಯಂದು ಮಣ್ಣಿನ ಕುಡಿಕೆಯಲ್ಲಿ ನೀರು ಕುಡಿಯುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗಿದೆ.

ಭವಿಷ್ಯಕ್ಕಾಗಿ ‘ಭೂ ತಾಯಿಯನ್ನು ರಕ್ಷಿಸಿ’

ತಮ್ಮ ಕುಟುಂಬ ಮತ್ತು ಮಕ್ಕಳಿಗಾಗಿ ನಿವೇಶನ, ಮನೆ, ವಾಹನ ಮತ್ತಿತರ ಆಸ್ತಿಗಳನ್ನು ಮಾಡಿಕೊಳ್ಳುವ ನಾಗರಿಕರು ‘ಭೂ ತಾಯಿ’ಯನ್ನೇ ಉಳಿಸಿಕೊಳ್ಳದಿದ್ದರೆ ಹೇಗೆ? ಆಗ ಉಳಿದೆಲ್ಲವೂ ಶೂನ್ಯವಾಗುತ್ತದೆ. ಹೀಗಾಗಿ ಮೊದಲಿಗೆ ನಿಮ್ಮ ಪರಿಸರದ ಸ್ವಚ್ಛತೆ ಮತ್ತು ಸಂರಕ್ಷಣೆ
ಕಾಯ್ದುಕೊಳ್ಳಿ. ಎಲ್ಲಿಯೂ ಪ್ಲಾಸ್ಟಿಕ್, ಗುಟ್ಕಾ ಸ್ಯಾಚೆಟ್ ಮತ್ತಿತರ ಮಣ್ಣಿನಲ್ಲಿ ಕರಗದ ವಸ್ತುಗಳ ಬಳಕೆ ಕಡಿಮೆ ಮಾಡಿ. ಅಲ್ಲದೇ ಕಂಡಲ್ಲಿ ಅವುಗಳನ್ನು ಎಸೆಯಬೇಡಿ ಎಂದು ಪರಿಸರ ಪ್ರೇಮಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಈ ಪೈಕಿ ‘ಗುಟ್ಕಾವಾಲಾ’ಗಳು ಸಾರ್ವಜನಿಕ ಸ್ಥಳಗಳಲ್ಲಿ ಕಂಡ ಕಂಡಲ್ಲಿ ಉಗುಳದೇ, ಸ್ಯಾಚೆಟ್‌ಗಳನ್ನು ಸಿಕ್ಕ ಸಿಕ್ಕಲ್ಲಿ ಎಸೆಯದೇ ಪರಿಸರ ಸಂರಕ್ಷಣೆಗೆ ಕಾಳಜಿ ವಹಿಸಬೇಕಾಗಿದೆ. ಏಕೆಂದರೆ, ನಗರ ಹಾಗೂ ಪಟ್ಟಣದ ಸ್ಥಳೀಯಾಡಳಿತ ಸಂಸ್ಥೆಗಗಳು ಚರಂಡಿ ಸ್ವಚ್ಛಗೊಳಿಸುವ ವೇಳೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ಯಾಸ್ಟಿಕ್ ದೊರೆತಿದ್ದರೆ, ಎರಡನೇ ಅತಿ ಹೆಚ್ಚು ಸ್ಯಾಚೆಟ್‌ಗಳೇ ಸಿಕ್ಕಿವೆ. ಇವುಗಳು ಚರಂಡಿ, ರಾಜಕಾಲುವೆ, ಕಸದ ಜೊತೆ ಸೇರಿ ನಗರದ ನೀರಿನ ಹರಿವಿಗೆ ಅಡ್ಡಿಮಾಡುವುದಲ್ಲದೇ, ನಗರವನ್ನೇ ರಾಡಿ ಮಾಡಿವೆ.

ಹಾವೇರಿ ಜಿಲ್ಲೆಯ ಮಾಹಿತಿ

ಒಟ್ಟು ಭೌಗೋಳಿಕ ಕ್ಷೇತ್ರ–4.85 ಲಕ್ಷ ಹೆಕ್ಟೇರ್
ಅರಣ್ಯ ಪ್ರದೇಶ– 47.45 ಸಾವಿರ ಹೆಕ್ಟೇರ್ಸಾ
ಗುವಳಿ ಕ್ಷೇತ್ರ–3.76 ಲಕ್ಷ ಹೆಕ್ಟೇರ್
ನೀರಾವರಿ ಪ್ರದೇಶ– 98.44 ಸಾವಿರ ಹೆಕ್ಟೇರ್
ಒಟ್ಟು ಜನಸಂಖ್ಯೆ–15.97 ಲಕ್ಷ (2011ರ ಜನಗಣತಿ)
ಒಟ್ಟು ರೈತ ಕುಟುಂಬಗಳು– 2.18 ಲಕ್ಷ
ವಾಡಿಕೆ ಮಳೆ–792.7 ಮಿ.ಮೀ.
ಮಳೆ ಮಾಪನ ಕೇಂದ್ರಗಳು– 239

**
ಪರಿಸರದ ಸಂರಕ್ಷಣೆ ಹಾಗೂ ಹೆಚ್ಚಳವು ನಮ್ಮ ಗುರಿಯಾಗಿದ್ದು, ಈ ಬಾರಿ ಪ್ಲಾಸ್ಟಿಕ್ ಮುಕ್ತ ಹಾವೇರಿಯ ಯೋಜನೆ ರೂಪಿಸಿದ್ದೇವೆ
- ಡಾ.ವೆಂಕಟೇಶ್ ಎಂ.ವಿ. ಜಿಲ್ಲಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT