ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಕೀಸ್‌ ಮುಡಿಗೆ ಕಿರೀಟ

Last Updated 8 ಏಪ್ರಿಲ್ 2019, 16:01 IST
ಅಕ್ಷರ ಗಾತ್ರ

ಚಾರ್ಲ್ಸ್‌ಟನ್, ಅಮೆರಿಕ: ತವರಿನ ಅಭಿಮಾನಿಗಳ ಎದುರು ಅಪೂರ್ವ ಆಟ ಆಡಿದ ಮ್ಯಾಡಿಸನ್‌ ಕೀಸ್‌, ಡಬ್ಲ್ಯುಟಿಎ ಚಾರ್ಲ್ಸ್‌ಟನ್ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ರಾತ್ರಿ ನಡೆದ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅಮೆರಿಕದ ಮ್ಯಾಡಿಸನ್‌ 7–6, 6–3 ನೇರ ಸೆಟ್‌ಗಳಿಂದ ಡೆನ್ಮಾರ್ಕ್‌ನ ಕ್ಯಾರೊಲಿನ್‌ ವೋಜ್ನಿಯಾಕಿ ಅವರನ್ನು ಪರಾಭವಗೊಳಿಸಿದರು.‌ ಈ ಮೂಲಕ ವೃತ್ತಿಬದುಕಿನ ನಾಲ್ಕನೇ ಪ್ರಶಸ್ತಿ ಜಯಿಸಿದರು. ‘ಕ್ಲೇ ಕೋರ್ಟ್‌’ನಲ್ಲಿ ಮ್ಯಾಡಿಸನ್‌ ಗೆದ್ದ ಮೊದಲ ಟ್ರೋಫಿ ಇದಾಗಿದೆ.

ವೋಜ್ನಿಯಾಕಿ ಎದುರು ಆಡಿದ್ದ ಹಿಂದಿನ ಎರಡು ಪಂದ್ಯಗಳಲ್ಲೂ ಸೋತಿದ್ದ ಕೀಸ್‌, ಭಾನುವಾರ ಮಿಂಚಿದರು.

ವೊಲ್ವೊ ಕಾರ್‌ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯ ಮೊದಲ ಸೆಟ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಇಬ್ಬರೂ ಸರ್ವ್‌ ಉಳಿಸಿಕೊಂಡಿದ್ದರಿಂದ ಸೆಟ್‌ ‘ಟೈ ಬ್ರೇಕರ್‌’ಗೆ ಸಾಗಿತು. ನಿರ್ಣಾಯಕ ಘಟ್ಟದಲ್ಲಿ ಕೀಸ್‌ ಒತ್ತಡ ಮೀರಿ ನಿಂತು ಆಡಿದರು. ಐದನೇ ಶ್ರೇಯಾಂಕದ ಆಟಗಾರ್ತಿ ವೋಜ್ನಿಯಾಕಿ ‘ಡಬಲ್‌ ಫಾಲ್ಟ್‌’ ಎಸಗಿದ್ದು ಅಮೆರಿಕದ ಆಟಗಾರ್ತಿಗೆ ವರದಾನವಾಯಿತು.

ಎಂಟನೇ ಶ್ರೇಯಾಂಕದ ಆಟಗಾರ್ತಿ ಕೀಸ್‌, ಎರಡನೇ ಸೆಟ್‌ನಲ್ಲಿ ಮೋಡಿ ಮಾಡಿದರು. ಆರನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದು 4–2 ಮುನ್ನಡೆ ಗಳಿಸಿದರು. ನಂತರವೂ ಪರಿಣಾಮಕಾರಿ ಸಾಮರ್ಥ್ಯ ತೋರಿ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT