ನಾಲ್ಕನೇ ಸುತ್ತಿಗೆ ರಾವನಿಕ್‌

7
ವಿಂಬಲ್ಡನ್‌ ಟೆನಿಸ್‌: ನೊವಾಕ್‌ ಜೊಕೊವಿಚ್‌ ಜಯದ ಓಟ

ನಾಲ್ಕನೇ ಸುತ್ತಿಗೆ ರಾವನಿಕ್‌

Published:
Updated:
ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಆಟದ ವೈಖರಿ ರಾಯಿಟರ್ಸ್‌ ಚಿತ್ರ

ಲಂಡನ್‌: ಅಮೋಘ ಆಟ ಆಡಿದ ಕೆನಡಾದ ಮಿಲೊಸ್‌ ರಾವನಿಕ್‌ ಅವರು ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.

ಆಲ್‌ ಇಂಗ್ಲೆಂಡ್‌ ಲಾನ್ ಟೆನಿಸ್‌ ಕ್ಲಬ್‌ನಲ್ಲಿ ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಹಣಾಹಣಿಯಲ್ಲಿ ರಾವನಿಕ್‌ 7–6, 4–6, 7–5, 6–2ರಲ್ಲಿ ಆಸ್ಟ್ರಿಯಾದ ಡೆನಿಸ್‌ ನೊವಾಕ್‌ ಅವರನ್ನು ಮಣಿಸಿದರು.

ನೊವಾಕ್‌ಗೆ ಜಯ: ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರೂ ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟರು.

ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಮೂರನೇ ಸುತ್ತಿನ ಪೈಪೋಟಿಯಲ್ಲಿ ನೊವಾಕ್‌ 4–6, 6–3, 6–2, 6–4ರಲ್ಲಿ ಕೈಲ್‌ ಎಡ್ಮಂಡ್‌ ವಿರುದ್ಧ ಗೆದ್ದರು.

ಮೊದಲ ಸೆಟ್‌ನಲ್ಲಿ ನಿರಾಸೆ ಕಂಡ ನೊವಾಕ್‌ ನಂತರದ ಮೂರು ಸೆಟ್‌ಗಳಲ್ಲೂ ಪ್ರಾಬಲ್ಯ ಮೆರೆದು ಗೆಲುವಿನ ತೋರಣ ಕಟ್ಟಿದರು.

ಇತರ ಪಂದ್ಯಗಳಲ್ಲಿ ಕೀ ನಿಶಿಕೋರಿ 6–1, 7–6, 6–4ರಲ್ಲಿ ನಿಕ್‌ ಕಿರ್ಗಿಯೊಸ್‌ ಎದುರೂ, ಕರೆನ್‌ ಕಚನೊವ್‌ 4–6, 4–6, 7–6, 6–2, 6–1ರಲ್ಲಿ ತಿಯಾಫ್‌ ಮೇಲೂ, ಅರ್ನೆಸ್ಟ್‌ ಗುಲ್ಬಿಸ್‌ 7–6, 4–6, 5–7, 6–3, 6–0ರಲ್ಲಿ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧವೂ ಗೆದ್ದರು.

ಕೆರ್ಬರ್‌ ಮಿಂಚು: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಏಂಜಲಿಕ್‌ ಕೆರ್ಬರ್‌ 16ರ ಘಟ್ಟ ಪ್ರವೇಶಿಸಿದರು.

ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಹಣಾಹಣಿಯಲ್ಲಿ ಕೆರ್ಬರ್‌ 6–2, 6–4ರಲ್ಲಿ ನವೊಮಿ ಒಸಾಕ ಅವರನ್ನು ಪರಾಭವಗೊಳಿಸಿದರು.

ಅಲಿಯಾಕ್ಸಾಂಡ್ರಾ ಸಸನೊವಿಚ್‌ 6–3, 6–1ರಲ್ಲಿ ಡೇರಿಯಾ ಗ್ಯಾವರಿಲೋವಾ ವಿರುದ್ಧ ಗೆದ್ದರು.

ಬಾಲಾಜಿ–ವಿಷ್ಣುವರ್ಧನ್‌ಗೆ ನಿರಾಸೆ: ಪುರುಷರ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಎನ್‌.ಶ್ರೀರಾಮ್‌ ಬಾಲಾಜಿ ಮತ್ತು ವಿಷ್ಣುವರ್ಧನ್‌ ಅವರು ಮೂರನೇ ಸುತ್ತಿನಲ್ಲಿ ನಿರಾಸೆ ಕಂಡರು.

ಬಾಲಾಜಿ ಮತ್ತು ವಿಷ್ಣು 6–7, 7–6, 6–7, 3–6ರಲ್ಲಿ ಬೆನ್‌ ಮೆಕ್‌ಲಾಚ್ಲನ್‌ ಮತ್ತು ಜಾನ್‌ ಲೆನ್ನಾರ್ಡ್‌ ಸ್ಟ್ರಫ್‌ ವಿರುದ್ಧ ಸೋತರು.

ದಿವಿಜ್‌ ಶರಣ್‌ ಮತ್ತು ನ್ಯೂಜಿಲೆಂಡ್‌ನ ಅರ್ಟೆಮ್‌ ಸಿಟಾಕ್‌ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಮೂರನೇ ಸುತ್ತಿನಲ್ಲಿ ದಿವಿಜ್‌ ಮತ್ತು ಅರ್ಟೆಮ್‌ 6–7, 4–6, 6–3, 7–6, 6–4ರಲ್ಲಿ ಹೋರಿಯಾ ಜೆಬಾಲ್ಲೊಸ್‌ ಮತ್ತು ಜೂಲಿಯಾ ಪೆರಾಲ್ಟಾ ವಿರುದ್ಧ ಗೆದ್ದರು.

ಇಂದು ಸೆರೆನಾ, ಫೆಡರರ್‌ ಪಂದ್ಯ: ಸೋಮವಾರದಿಂದ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿವೆ.

ಅಮೆರಿಕದ ಸೆರೆನಾ ವಿಲಿಯಮ್ಸ್‌, ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರು ಅಂಗಳಕ್ಕಿಳಿಯಲಿದ್ದಾರೆ.

ಸೆಂಟರ್‌ ಕೋರ್ಟ್‌ನಲ್ಲಿ ನಡೆಯುವ ಪಂದ್ಯದಲ್ಲಿ ಸೆರೆನಾ, ಎವಜೆನಿಯಾ ರೋಡಿನಾ ವಿರುದ್ಧ ಆಡಲಿದ್ದು ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಫೆಡರರ್‌ ಅವರಿಗೆ ಆ್ಯಡ್ರಿಯನ್‌ ಮನ್ನಾರಿಯೊ ಸವಾಲು ಎದುರಾಗಲಿದೆ. ಸ್ಪೇನ್‌ನ ರಫೆಲ್‌ ನಡಾಲ್‌, ಜಿರಿ ವೆಸ್ಲಿ ವಿರುದ್ಧ ಸೆಣಸಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !