ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌: ನಾಲ್ಕನೇ ಸುತ್ತಿಗೆ ಸಬಲೆಂಕಾ

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ; ಪೆಗುಲಾಗೆ ನಿರಾಸೆ
Published 2 ಜೂನ್ 2023, 15:56 IST
Last Updated 2 ಜೂನ್ 2023, 15:56 IST
ಅಕ್ಷರ ಗಾತ್ರ

ಪ್ಯಾರಿಸ್‌: ವೇಗದ ಸರ್ವ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ವಿಶ್ವದ ಎರಡನೇ ರ್‍ಯಾಂಕ್‌ನ ಆಟಗಾರ್ತಿ ಅರಿನಾ ಸಬಲೆಂಕಾ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ನಾಲ್ಕನೇ ಸುತ್ತು ಪ್ರವೇಶಿಸಿದರು.

ಫಿಲಿಪ್‌ ಚಾಟ್ರಿಯೆರ್‌ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಬೆಲಾರಸ್‌ನ ಆಟಗಾರ್ತಿ 6–2, 6–2 ರಲ್ಲಿ ರಷ್ಯಾದ ಕಮಿಲಾ ರಖಿಮೋವಾ ಅವರನ್ನು ಮಣಿಸಿದರು.

ಇಲ್ಲಿ ಈ ಹಿಂದಿನ ಮೂರು ವರ್ಷಗಳಲ್ಲಿ ಮೂರನೇ ಸುತ್ತಿನ ತಡೆ ದಾಟುವಲ್ಲಿ ವಿಫಲರಾಗಿದ್ದ ಸಬಲೆಂಕಾ, 1 ಗಂಟೆ 7 ನಿಮಿಷಗಳಲ್ಲಿ ಗೆಲುವು ಸಾಧಿಸಿದರು. ಅವರು ಈ ಬಾರಿಯ ಟೂರ್ನಿಯಲ್ಲಿ ಒಂದೂ ಸೆಟ್‌ ಸೋತಿಲ್ಲ.

ಇನ್ನೊಂದು ಪಂದ್ಯದಲ್ಲಿ 2021ರ ರನ್ನರ್‌ ಅಪ್‌ ರಷ್ಯಾದ ಅನಸ್ತೇಸಿಯಾ ಪವ್ಲಿಚೆಂಕೋವಾ 4-6, 6-3, 6-0 ರಲ್ಲಿ ತಮ್ಮದೇ ದೇಶದ ಅನಸ್ತೇಸಿಯಾ ಪೊತಪೋವಾ ಅವರನ್ನು ಸೋಲಿಸಿದರು. ಮೊದಲ ಸೆಟ್‌ನಲ್ಲಿ ಸೋತ ಪವ್ಲಿಚೆಂಕೋವಾ, ಆ ಬಳಿಕ ಪುಟಿದೆದ್ದು ನಿಂತರು.

ಕಳೆದ ಬಾರಿಯ ಸೆಮಿಫೈನಲಿಸ್ಟ್‌ ರಷ್ಯಾದ ದರಿಯಾ ಕಸತ್‌ಕಿನಾ 6–0, 6–1 ರಲ್ಲಿ ಅಮೆರಿಕದ ಪೇಟನ್‌ ಸ್ಟಿಯರ್ನ್ಸ್‌ ವಿರುದ್ಧ ಸುಲಭ ಗೆಲುವು ಸಾಧಿಸಿದರು. ಈ ಪಂದ್ಯ ಕೇವಲ 55 ನಿಮಿಷಗಳಲ್ಲಿ ಕೊನೆಗೊಂಡಿತು.

ಪೆಗುಲಾಗೆ ಆಘಾತ: ವಿಶ್ವದ ಮೂರನೇ ರ್‍ಯಾಂಕ್‌ನ ಆಟಗಾರ್ತಿ ಅಮೆರಿಕದ ಜೆಸ್ಸಿಕಾ ಪೆಗುವಾ ಅವರು ಮೂರನೇ ಸುತ್ತಿನಲ್ಲಿ ನಿರ್ಗಮಿಸಿದರು. ವೈವಿಧ್ಯಮಯ ಹೊಡೆತಗಳ ಮೂಲಕ ಗಮನಸೆಳೆದ ಬೆಲ್ಜಿಯಂನ ಎಲೈಸ್‌ ಮಾರ್ಟೆನ್ಸ್‌  6–1, 6–3 ರಲ್ಲಿ ಪೆಗುಲಾ ಅವರನ್ನು ಮಣಿಸಿದರು. ಮಾರ್ಟೆನ್ಸ್‌ ಅವರ ಫೋರ್‌ಹ್ಯಾಂಡ್‌ ಹೊಡೆತಗಳು ಮತ್ತು ಡ್ರಾಪ್‌ ಶಾಟ್‌ಗಳಿಗೆ ಅಮೆರಿಕದ ಆಟಗಾರ್ತಿ ಕಂಗೆಟ್ಟರು.

ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಹಣಾಹಣಿಯಲ್ಲಿ ರಷ್ಯಾದ ಕರೆನ್‌ ಕಚನೋವ್ 6-4, 6-1, 3-6, 7-6  ರಲ್ಲಿ ಆಸ್ಟ್ರೇಲಿಯಾದ ಥನಸಿ ಕೊಕಿನಾಕಿಸ್‌ ವಿರುದ್ಧ ಜಯಿಸಿದರು. ಆರಂಭದಲ್ಲಿ ಉತ್ತಮ ಲಯದಲ್ಲಿದ್ದ ಕಚನೋಚ್‌ ಮೂರನೇ ಸೆಟ್‌ಅನ್ನು ಎದುರಾಳಿಗೆ ಒಪ್ಪಿಸಿದರು. ಟೈಬ್ರೇಕರ್‌ಗೆ ಸಾಗಿದ ನಾಲ್ಕನೇ ಸೆಟ್‌ ಗೆದ್ದು ಮುಂದಿನ ಹಂತ ಪ್ರವೇಶಿಸಿದರು.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಪಂದ್ಯಗಳಲ್ಲಿ ಅಮೆರಿಕದ ಟೇಲರ್‌ ಫ್ರಿಟ್ಜ್‌ 2-6, 6-4, 6-3, 6-4 ರಿಂದ ಫ್ರಾನ್ಸ್‌ನ ಆರ್ಥರ್‌ ರಿಂಡರ್‌ನೆಕ್‌ ವಿರುದ್ಧ; ಬಲ್ಗೇರಿಯದ ಗ್ರಿಗೊರ್‌ ದಿಮಿತ್ರೋವ್ 7-6, 6-3, 6-4 ರಿಂದ ಫಿನ್ಲೆಂಡ್‌ನ ಎಮಿಲ್ ರೂಸುವೊರಿ ವಿರುದ್ಧ; ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್ 6–4, 6–2, 6–1 ರಿಂದ ಸ್ಲೊವಾಕಿಯದ ಅಲೆಕ್ಸ್ ಮಾಲ್ಕನ್‌ ವಿರುದ್ಧ; ಅಮೆರಿಕದ ಫ್ರಾನ್ಸೆಸ್‌ ಟೈಫೊ 3-6, 6-3, 7-5, 6-2 ರಿಂದ ಅಸ್ಲಾನ್‌ ಕರತ್ಸೇವ್‌ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT