ಶನಿವಾರ, ಜುಲೈ 24, 2021
23 °C

ಮ್ಯಾಚ್‌ ಫಿಕ್ಸಿಂಗ್‌: ಟೆನಿಸ್‌ ಅಂಪೈರ್‌ ಅಮಾನತು

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಮ್ಯಾಚ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಹಗರಣಕ್ಕೆ ಸಂಬಂಧಿಸಿದಂತೆ ಅಂಪೈರ್‌ ಅಲೆಕ್ಸಿ‌ ಇಜೊಟೊವ್‌ ಹಾಗೂ ಟೂರ್ನಿಯ ನಿರ್ದೇಶಕ ಆ್ಯಂಟೊನಿಸ್‌ ಕಲೈಟ್‌ಜಾಕಿಸ್‌‌ ಅವರನ್ನು ಅಮಾನತು ಮಾಡಲಾಗಿದೆ.

ಟೆನಿಸ್‌ ಇಂಟಿಗ್ರಿಟಿ ಯೂನಿಟ್ (ಟಿಐಯು)‌ ಗುರುವಾರ ಈ ತೀರ್ಮಾನ ಕೈಗೊಂಡಿದೆ.

‘ಬೆಲಾರಸ್‌ನ ಅಲೆಕ್ಸಿ ಅವರು ಮೂರು ವರ್ಷ ಟೆನಿಸ್‌ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಜೊತೆಗೆ ₹7.49 ಲಕ್ಷ ದಂಡವನ್ನೂ ಕಟ್ಟಬೇಕು’ ಎಂದು ಟಿಐಯು ಹೇಳಿದೆ.

2019ರ ನವೆಂಬರ್‌ನಲ್ಲಿ ಬೆಲಾರಸ್‌ನಲ್ಲಿ ನಡೆದಿದ್ದ ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯಲ್ಲಿ ಅಲೆಕ್ಸಿ ಅವರು ‘ಚೇರ್‌ ಅಂಪೈರ್‌’ ಆಗಿ ಕೆಲಸ ಮಾಡಿದ್ದರು.

‘ಪಂದ್ಯದ ವೇಳೆ ತಮಗೆ ನೀಡಿರುವ ‘ಸ್ಕೋರಿಂಗ್‌ ಡಿವೈಸ್‌’ನಲ್ಲಿ ತಡವಾಗಿ ಸ್ಕೋರ್‌ ನಮೂದಿಸುವ ಮೂಲಕ ಬೆಟ್ಟಿಂಗ್‌ಗೆ ಸಹಕರಿಸಬೇಕು. ಅದಕ್ಕೆ ಪ್ರತಿಯಾಗಿ ಹಣ ನೀಡುವುದಾಗಿ ವ್ಯಕ್ತಿಯೊಬ್ಬರು ಅಲೆಕ್ಸಿಗೆ ಆಮಿಷ ಒಡ್ಡಿದ್ದರು. ಈ ಕುರಿತು ಅವರು ನಮಗೆ ಮಾಹಿತಿ ನೀಡಿರಲಿಲ್ಲ. ಬದಲಾಗಿ ಪಂದ್ಯದ ಸ್ಕೋರ್‌ ತಿರುಚುವಂತೆ ಇತರ ಅಂಪೈರ್‌ಗಳಿಗೂ ಮನವಿ ಮಾಡಿದ್ದರು’ ಎಂದು ಟಿಐಯು ತಿಳಿಸಿದೆ.

ಗ್ರೀಸ್‌ನಲ್ಲಿ ನಡೆದಿದ್ದ ಐಟಿಎಫ್‌ ಟೂರ್ನಿಗಳ ವೇಳೆ ಟೂರ್ನಿಯ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದ ಆ್ಯಂಟೊನಿಸ್‌ ಅವರು ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದರು. ವ್ಯಕ್ತಿಯೊಬ್ಬರು ತಮಗೆ ಆಮಿಷ ಒಡ್ಡಿದ್ದರ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ.

ಹೀಗಾಗಿ ಅವರನ್ನು 20 ತಿಂಗಳ ಕಾಲ ಅಮಾನತು ಮಾಡಲಾಗಿದೆ. ಜೊತೆಗೆ ₹4.49 ಲಕ್ಷ ದಂಡ ವಿಧಿಸಲಾಗಿದೆ.

ಆನ್‌ಲೈನ್‌ ಬೆಟ್ಟಿಂಗ್‌ ಖಾತೆ ಹೊಂದಿದ್ದ 37 ವರ್ಷ ವಯಸ್ಸಿನ ಆ್ಯಂಟೊನಿಸ್‌ ಅವರು 2013ರಿಂದ 2016ರವರೆಗೂ ಇದರಲ್ಲಿ ಸಕ್ರಿಯರಾಗಿದ್ದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು