ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಪ್ರಿ ಕ್ವಾರ್ಟರ್‌ಗೆ ಅಲ್ಕರಾಜ್‌, ಇಗಾ

ಕೊಕೊ ಗಾಫ್‌, ರೂನ್‌ಗೆ ಗೆಲುವು
Published 3 ಜೂನ್ 2023, 19:26 IST
Last Updated 3 ಜೂನ್ 2023, 19:26 IST
ಅಕ್ಷರ ಗಾತ್ರ

ಪ್ಯಾರಿಸ್‌: ಸೊಗಸಾದ ಆಟದ ಮೂಲಕ ಎದುರಾಳಿಯನ್ನು ನಿಬ್ಬೆರಗಾಗಿಸಿದ ವಿಶ್ವದ ಅಗ್ರ ರ್‍ಯಾಂಕ್‌ನ ಆಟಗಾರ ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌, ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಫಿಲಿಪ್‌ ಶಾಟ್ರಿಯೆರ್‌ ಕೋರ್ಟ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಹಣಾಹಣಿಯಲ್ಲಿ ಅವರು 6-1, 6-4, 6-2 ರಿಂದ ಕೆನಡದಾ ಡೆನಿಸ್‌ ಶಪೊವೊಲೊವ್‌ ವಿರುದ್ಧ ಗೆದ್ದರು.

ಚೊಚ್ಚಲ ಫ್ರೆಂಚ್‌ ಓಪನ್ ಕಿರೀಟದ ನಿರೀಕ್ಷೆಯಲ್ಲಿರುವ ಅಲ್ಕರಾಜ್‌, ಎದುರಾಳಿಗೆ ಮರುಹೋರಾಟ ನಡೆಸಲು ಅಲ್ಪವೂ ಅವಕಾಶ ನೀಡದೆ 2 ಗಂಟೆ 10 ನಿಮಿಷಗಳಲ್ಲಿ ಗೆಲುವು ಸಾಧಿಸಿದರು.

16ರ ಘಟ್ಟದ ಪಂದ್ಯದಲ್ಲಿ ಅವರು ಇಟಲಿಯ ಲೊರೆನ್ಜೊ ಮುಸೆಟ್ಟಿ ವಿರುದ್ಧ ಪೈಪೋಟಿ ನಡೆಸುವರು. ಮುಸೆಟ್ಟಿ 6-1, 6-2, 6-4 ರಿಂದ ಬ್ರಿಟನ್‌ನ ಕ್ಯಾಮರಾನ್‌ ನೋರಿ ಅವರನ್ನು ಮಣಿಸಿದರು.

ಮೂರನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಡೆನ್ಮಾರ್ಕ್‌ನ ಉದಯೋನ್ಮುಖ ಪ್ರತಿಭೆ ಹೋಲ್ಗರ್‌ ರೂನ್‌ 6–4, 6–1, 6–3 ರಿಂದ ಅರ್ಜೆಂಟೀನಾದ ಗೆನಾರೊ ಅಲ್ಬರ್ಟೊ ಒಲಿವಿಯೆರಿ ಅವರನ್ನು ಸೋಲಿಸಿದರು. ನಾರ್ವೆಯ ಕ್ಯಾಸ್ಪರ್‌ ರೂಡ್‌ 4-6, 6-4, 6-1, 6-4 ರಲ್ಲಿ ಚೀನಾದ ಜಾಂಗ್ ಜಿಜೆನ್‌ ವಿರುದ್ಧ ಗೆದ್ದರು.

ಬ್ರೆಜಿಲ್‌ ಆಟಗಾರ ಥಿಯಾಗೊ ಸಿಬೋತ್ ವೈಲ್ಡ್ ಅವರ ಕನಸಿನ ಓಟಕ್ಕೆ ಮೂರನೇ ಸುತ್ತಿನಲ್ಲಿ ತೆರೆಬಿತ್ತು. ಐದು ಸೆಟ್‌ಗಳ ದೀರ್ಘ ಹೋರಾಟದಲ್ಲಿ ಜಪಾನ್‌ನ ಯೊಶಿಹಿಟೊ ನಿಶಿಯೊಕ 3-6, 7-6, 2-6, 6-4, 6-0 ರಿಂದ ವೈಲ್ಡ್‌ ಅವರನ್ನು ಮಣಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 172ನೇ ಸ್ಥಾನದಲ್ಲಿರುವ ವೈಲ್ಡ್‌, ಮೊದಲ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಆಟಗಾರ ಡೇನಿಯಲ್‌ ಮೆಡ್ವೆಡೆವ್‌ಗೆ ಆಘಾತ ನೀಡಿದ್ದರು.

ಶ್ವಾಂಟೆಕ್‌ ಮುನ್ನಡೆ: ಅಗ್ರಶ್ರೇಯಾಂಕದ ಅಟಗಾರ್ತಿ ಪೋಲೆಂಡ್‌ನ ಇಗಾ ಶ್ವಾಂಟೆಕ್‌ ಮತ್ತು ಆರನೇ ಶ್ರೇಯಾಂಕದ ಆಟಗಾರ್ತಿ ಅಮೆರಿಕದ ಕೊಕೊ ಗಾಫ್‌ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದ 16ರ ಘಟ್ಟ ಪ್ರವೇಶಿಸಿದರು.

ಕಳೆದ ಬಾರಿಯ ಚಾಂಪಿಯನ್‌ ಇಗಾ 6–0, 6–0 ರಲ್ಲಿ ಚೀನಾದ ವಾಂಗ್‌ ಕ್ಸಿನ್‌ಯು ವಿರುದ್ಧ ಸುಲಭವಾಗಿ ಗೆದ್ದರು. 51 ನಿಮಿಷಗಳ ಹಣಾಹಣಿಯಲ್ಲಿ ಇಗಾ ಪೂರ್ಣ ಪ್ರಭುತ್ವ ಮೆರೆದರು.

ಅರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಲಯ ಕಂಡುಕೊಂಡ ಗಾಫ್‌ ಅವರು 6–7, 6–1, 6–1 ರಲ್ಲಿ ಮಿರಾ ಆ್ಯಂಡ್ರೀವಾ ಅವರನ್ನು ಮಣಿಸಿದರು.

ಹಿಂದೆಸರಿದ ಎಲೆನಾ ರಿಬಾಕಿನಾ ಪ್ಯಾರಿಸ್‌
ವಿಂಬಲ್ಡನ್‌ ಚಾಂಪಿಯನ್‌ ಕಜಕಸ್ತಾನದ ಎಲೆನಾ ರಿಬಾಕಿನಾ ಅನಾರೋಗ್ಯದಿಂದಾಗಿ ಫ್ರೆಂಚ್‌ ಓಪನ್‌ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಮೊದಲ ಎರಡು ಸುತ್ತಿನಲ್ಲಿ ಗೆಲುವು ಸಾಧಿಸಿದ್ದ ನಾಲ್ಕನೇ ಶ್ರೇಯಾಂಕದ ಎಲೆನಾ ಶನಿವಾರ ಮೂರನೇ ಸುತ್ತಿನಲ್ಲಿ ಸ್ಪೇನ್‌ನ ಸಾರಾ ಸೊರಿಬ್ಸ್‌ ಬಾರ್ಮೊ ಅವರನ್ನು ಎದುರಿಸಬೇಕಿತ್ತು. ‌ ಕಳೆದ ತಿಂಗಳು ನಡೆದ ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ 23 ವರ್ಷದ ಎಲೆನಾ ಈ ಟೂರ್ನಿಯ ಪ್ರಬಲ ಸ್ಪರ್ಧಿಯಾಗಿದ್ದರು. ‘ನಾನು ಜ್ವರದಿಂದ ಬಳಲುತ್ತಿದ್ದೇನೆ. ಎರಡು ದಿನಗಳಿಂದ ಸರಿಯಾಗಿ ನಿದ್ದೆ ಮಾಡಿಲ್ಲ. ಅಭ್ಯಾಸದ ವೇಳೆ ಉಸಿರಾಡಲು ಕಷ್ಟವಾಯಿತು. ಹೀಗಾಗಿ ಸ್ಪರ್ಧೆಯಿಂದ ಹಿಂದೆ ಸರಿಯುವುದು ಅನಿವಾರ್ಯವಾಗಿದೆ’ ಎಂದು ಎಲೆನಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT