ನ್ಯೂಯಾರ್ಕ್: ಅಗ್ರ ಟೆನಿಸ್ ಆಟಗಾರ ಯಾನಿಕ್ ಸಿನ್ನರ್ ಅವರು ತಮ್ಮ ಫಿಟ್ನೆಸ್ ಟ್ರೇನರ್ ಮತ್ತು ಫಿಸಿಯೋಥೆರಪಿಸ್ಟ್ ಅವರನ್ನು ಕಿತ್ತೊಗೆದಿದ್ದಾರೆ. ಮಾರ್ಚ್ ತಿಂಗಳಿನ ಎರಡು ಪರೀಕ್ಷೆಗಳಲ್ಲಿ ಅವರು ನಿಷೇಧಿತ ಪಟ್ಟಿಯಲ್ಲಿರುವ ಉದ್ದೀಪನ ಮದ್ದು ಸೇವಿಸಿದ್ದು ಧೃಡಪಟ್ಟ ಕೆಲದಿನಗಳ ನಂತರ ಇಟಲಿಯ ಆಟಗಾರ ಈ ಕ್ರಮ ಕೈಗೊಂಡಿದ್ದಾರೆ.
‘ಪ್ರಕರಣದಲ್ಲಿ ಅಮಾಯಕನೆಂದು ತಿಳಿದಿದ್ದರೂ, ತಮ್ಮ ತಪ್ಪಿಲ್ಲವೆಂದು ವಿಚಾರಣೆಯಲ್ಲಿ ಖಚಿತಪಡುವರೆಗೂ ತಾವು ಚಿಂತಾಕ್ರಾಂತರಾಗಿದ್ದಾಗಿ’ ಅವರು ಮೊದಲ ಬಾರಿ ಸಾರ್ವಜನಿಕ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಮೆರಿಕ ಓಪನ್‌ಗೆ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಠಿಯಲ್ಲಿ 23 ವರ್ಷ ವಯಸ್ಸಿನ ಸಿನ್ನರ್ ಈ ಹೇಳಿಕೆ ನೀಡಿದ್ದಾರೆ. ತಮ್ಮ ತಪ್ಪಿಲ್ಲವೆಂಬ ವರದಿ ಬಂದ ನಂತರ ನಿರಾಳರಾಗಿದ್ದಾಗಿಯೂ ಅವರು ಹೇಳಿದ್ದಾರೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಿನ್ನರ್ ಯಶಸ್ಸಿನ ಉತ್ತುಂಗಕ್ಕೆ ಏರುವ ವೇಳೆ ಫಿಟ್ನೆಸ್ ಟ್ರೇನರ್ ಉಂಬರ್ಟೊ ಫೆರೆರಾ ಮತ್ತು ಫಿಸಿಯೊ ಗಿಯಾಕೊಮಾ ನಲ್ಡಿ ಅವರು ಆಟಗಾರನ ಜೊತೆಗಿದ್ದರು. ಈ ಅವಧಿಯಲ್ಲಿ ಅವರು ವಿಶ್ವದ ಅಗ್ರ ಕ್ರಮಾಂಕಕ್ಕೆ ಏರಿದ್ದರು.
‘ಫಿಟ್ನೆಸ್ ಟ್ರೈನರ್ ಮತ್ತು ಫಿಸಿಯೋಥೆರಪಿಸ್ಟ್ ಜೊತೆ ಮುಂದುವರಿಯುವ ಬಗ್ಗೆ ನನಗೆ ವಿಶ್ವಾಸ ಇಲ್ಲ. ಈಗ ಉಸಿರಾಡಲು ಸ್ವಚ್ಛಗಾಳಿ ಬೇಕಾಗಿದೆ’ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಸಿನ್ನರ್ ಅವರು ಮದ್ದು ಪರೀಕ್ಷೆಯಲ್ಲಿಎರಡು ಬಾರಿ ಸಿಲುಕಿದ್ದಾರೆ ಎಂದು ಅಂತರರಾಷ್ಟ್ರೀಯ ಟೆನಿಸ್ ಇಂಟೆಗ್ರಿಟಿ ಏಜೆನ್ಸಿ (ಐಟಿಐಎ) ಹೇಳಿತ್ತು. ಒಂದು ಮಾದರಿಯನ್ನು ಇಂಡಿಯನ್ ವೆಲ್ಸ್ ಟೂರ್ನಿಯ ವೇಳೆ ಮತ್ತು ಇನ್ನೊಂದು ಮಾದರಿಯನ್ನು ಎಂಟು ದಿನಗಳ ನಂತರ ಪಡೆಯಲಾಗಿತ್ತು. ಆದರೆ ಫಿಸಿಯೋಥೆರಪಿಸ್ಟ್ ನಾಲ್ದಿ ಅವರಿಂದ ಮಸಾಜ್ ವೇಳೆ ನಿಷೇಧಿತ ಅನಾಬಾಲಿಕ್ ಸ್ಟಿರಾಯ್ಡ್ ಕ್ಲೊಸ್ಟೆಬೊಲ್ ಅಚಾನಕ್ ಆಗಿ ಅವರ ದೇಹ ಸೇರಿತ್ತು ಎಂಬ ನಿರ್ಧಾರಕ್ಕೆ ಬರಲಾಗಿತ್ತು.
ಅಮೆರಿಕ ಓಪನ್ ಟೂರ್ನಿ ಫ್ಲಷಿಂಗ್ ಮಿಡೋಸ್‌ನಲ್ಲಿ ಸೋಮವಾರ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.