ಬುಧವಾರ, ಆಗಸ್ಟ್ 4, 2021
27 °C
ಆ್ಯಂಡಿ ಮರ್ರೆ, ವೀನಸ್‌ ವಿಲಿಯಮ್ಸ್‌ಗೆ ಸೋಲು

ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿ: ಜ್ವೆರೆವ್‌, ವಾವ್ರಿಂಕಾ ಶುಭಾರಂಭ

ಎಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಯುವ ಆಟಗಾರ ಅಲೆಕ್ಸಾಂಡರ್‌ ಜ್ವೆರೆವ್‌ ಅವರು ಫ್ರೆಂಚ್ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಥೀಮ್‌ ಎದುರು ಸೋತಿದ್ದ ಜ್ವೆರೆವ್‌ ಇಲ್ಲಿ 7–5, 6–2, 6–4ರಿಂದ ಡೆನ್ನಿಸ್‌ ನೊವಾಕ್‌ ಎದುರು ಮೊದಲ ಸುತ್ತಿನ ಜಯ ಗಳಿಸಿದರು.

ಆರನೇ ಶ್ರೇಯಾಂಕದ ಜರ್ಮನಿ ಆಟಗಾರ ಜ್ವೆರೆವ್‌ ಅವರಿಗೆ 91ನೇ ರ‍್ಯಾಂಕಿನ ಡೆನ್ನಿಸ್‌ ಅವರಿಂದ ಹೆಚ್ಚು ಪ್ರತಿರೋಧ ಬರಲಿಲ್ಲ. ಎರಡು ವಾರಗಳ ಹಿಂದೆ ಅಮೆರಿಕ ಓಪನ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಡೊಮಿನಿಕ್‌ ಥೀಮ್‌ ಎದುರು ಜ್ವೆರೆವ್‌ ಪರಾಭವಗೊಂಡಿದ್ದರು.

ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌ನ ಸ್ಟ್ಯಾನ್‌ ವಾವ್ರಿಂಕಾ ಅವರು 6–1, 6–3, 6–2ರಿಂದ ಬ್ರಿಟನ್‌ನ ಆ್ಯಂಡಿ ಮರ್ರೆ ಅವರಿಗೆ ಆಘಾತ ನೀಡಿದರು. 97 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

ತಲಾ ಮೂರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ಇಬ್ಬರು ಆಟಗಾರರು (ಮರ್ರೆ ಹಾಗೂ ವಾವ್ರಿಂಕಾ) ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಮೊದಲ ಸುತ್ತಿನಲ್ಲೇ  ಮುಖಾಮುಖಿಯಾಗಿದ್ದು 21 ವರ್ಷಗಳ ಬಳಿಕ ಇದೇ ಮೊದಲು. 1999ರಲ್ಲಿ ಯೆವೆಜೆನಿ ಕ್ಯಾಫಲ್ನಿಕೊವ್‌ ಹಾಗೂ ಮೈಕೆಲ್‌ ಚಾಂಗ್‌ ಸೆಣಸಿದ್ದರು.

ವೀನಸ್‌ ನಿರ್ಗಮನ: ಅಮೆರಿಕದ ಮಹಿಳಾ ಸಿಂಗಲ್ಸ್ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ಅವರು ಈ ವರ್ಷದ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಮತ್ತೊಮ್ಮೆ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಸಿಮೊನ್‌ ಮ್ಯಾಥ್ಯೂ ಅಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಅವರು 4–6, 4–6ರಿಂದ ಅನ್ನಾ ಕರೋಲಿನಾ ಸ್ಮಿಡ್ಲೊವಾ ಅವರಿಗೆ ಶರಣಾದರು. ಆಸ್ಟ್ರೇಲಿಯಾ ಹಾಗೂ ಅಮೆರಿಕ‌ ಓಪನ್‌ ಟೂರ್ನಿಗಳಲ್ಲೂ ವೀನಸ್‌ ಅವರಿಗೆ ಮೊದಲ ಸುತ್ತಿನ ತಡೆ ದಾಟಲಾಗಿರಲಿಲ್ಲ.

ಮೂರನೇ ಸುತ್ತಿಗೆ ಕ್ವಿಟೊವಾ: ಏಳನೇ ಶ್ರೇಯಾಂಕದ ಆಟಗಾರ್ತಿ ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೊವಾ ಅವರು ಟೂರ್ನಿಯ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು. ಎರಡನೇ ಸುತ್ತಿನ ಪಂದ್ಯದಲ್ಲಿ 6–3, 7–5ರಿಂದ ಓಸಿಯಾನೇ ದೊಡಿನ್ ಎದುರು ಗೆದ್ದರು.

ಮುಂದಿನ ಪಂದ್ಯದಲ್ಲಿ ಅವರು ಇಟಲಿಯ ಜಾಸ್ಮಿನ್‌ ಪಾವೊಲಿನಿ ಅಥವಾ ಸ್ಪೇನ್‌ನ ಅಲಿಯೊನಾ ಬೊಸ್ಲೊವಾ ಎದುರು ಸೆಣಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು