ಭಾನುವಾರ, ಸೆಪ್ಟೆಂಬರ್ 22, 2019
27 °C
ಅಮೆರಿಕ ಓಪನ್‌ ಟೆನಿಸ್‌: ನಡಾಲ್‌, ಫೆಡರರ್‌ ಕ್ವಾರ್ಟರ್‌ಫೈನಲ್‌ಗೆ

ಅಮೆರಿಕ ಓಪನ್‌: ಒಸಾಕಾ ಪರಾಭವ

Published:
Updated:
Prajavani

ನ್ಯೂಯಾರ್ಕ್‌(ಎಎಫ್‌ಪಿ): ಅಗ್ರ ಶ್ರೇಯಾಂಕದ ಹಾಗೂ ಹಾಲಿ ಚಾಂಪಿಯನ್‌ ನವೊಮಿ ಒಸಾಕಾ, ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಆಘಾತ ಅನುಭವಿಸಿದ್ದಾರೆ. ಅರ್ಥರ್‌ ಆ್ಯಷ್‌ ಅಂಗಣದಲ್ಲಿ ನಡೆದ ಪ್ರಿಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸ್ವಿಸ್‌ ಆಟಗಾರ್ತಿ ಬೆಲಿಂಡಾ ಬೆನ್ಸಿಸ್‌ ಎದುರು 5–7, 4–6 ಸೆಟ್‌ಗಳಿಂದ ಅವರು ಮಣಿದರು.

ಈ ಸೋಲಿನೊಂದಿಗೆ ಒಸಾಕಾ ಅವರು ವಿಶ್ವ ರ‍್ಯಾಂಕಿಂಗ್‌ನ ಅಗ್ರಸ್ಥಾನ ವನ್ನು ಕಳೆದುಕೊಳ್ಳುವುದು ಖಚಿತವಾಗಿದೆ. ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಮಹಿಳಾ ಸಿಂಗಲ್ಸ್ ಅಗ್ರಸ್ಥಾನಕ್ಕೇರಲಿದ್ದಾರೆ.

22 ವರ್ಷದ ಬೆನ್ಸಿಸ್‌ ಅವರು ಈ ವರ್ಷದಲ್ಲಿ ಮೂರನೇ ಬಾರಿ ಒಸಾಕಾಗೆ ಸೋಲಿನ ರುಚಿ ತೋರಿಸಿದ್ದಾರೆ. ಅದ್ಭುತ ಲಯದಲ್ಲಿರುವ ಅವರು ಇಂಡಿಯನ್‌ ವೆಲ್ಸ್ ಹಾಗೂ ಮ್ಯಾಡ್ರಿಡ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದರು. 16ರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಕ್ರೊವೇಷ್ಯಾದ ಡೊನ್ನಾ ವೆಕಿಕ್‌, ಜರ್ಮನಿಯ ಜೂಲಿಯಾ ಜಾರ್ಜಸ್‌ ಅವರನ್ನು 6–7, 7–5, 6–3ರಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟರು.

ಮಹಿಳಾ ಸಿಂಗಲ್ಸ್ ಇತರ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಬೆಲ್ಜಿಯಂನ ಎಲಿಸ್‌ ಮೆರ್ಟೆನ್ಸ್ ಅವರು ಅಮೆರಿಕದ ಕ್ರಿಸ್ಟಿ ಅಹನ್‌ ಎದುರು 6–1, 6–1ರಿಂದ, ಬಿಯಾಂಕಾ ಆ್ಯಂಡ್ರಿಸ್ಕ್ಯೂ ಅವರು ಟೇಲರ್‌ ಟೌನ್‌ಸೆಂಡ್‌ ವಿರುದ್ಧ 6–1, 4–6, 6–2ರಿಂದ, ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಪೆಟ್ರಾ ಮಾರ್ಟಿಕ್‌ ಮೇಲೆ 6–3, 6–4ರಿಂದ ಗೆದ್ದು ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟರು.

ಪುರುಷರ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಜಯಿಸಿದ ಪ್ರಮುಖ ಆಟಗಾರರಾದ ರಫೆಲ್‌ ನಡಾಲ್‌ ಹಾಗೂ ರೋಜರ್‌ ಫೆಡರರ್‌ ಅವರೂ ಎಂಟರ ಘಟ್ಟ ತಲುಪಿದರು. ನಡಾಲ್‌ ಅವರು ಮರಿನ್‌ ಸಿಲಿಚ್‌ ವಿರುದ್ಧ 6–3, 3–6, 6–1, 6–2ರಿಂದ ಗೆದ್ದರು. ಫೆಡರರ್‌ ಅವರಿಗೆ ಡೇವಿಡ್‌ ಗಫಿನ್‌ ವಿರುದ್ಧ 6–2, 6–2, 6–0ರಿಂದ ಸುಲಭ ಜಯ ಒಲಿಯಿತು.

Post Comments (+)