ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್ ಟೆನಿಸ್: ಒಸಾಕ–ಅಜರೆಂಕಾ ಫೈನಲ್ ಹಣಾಹಣಿ

ಅಮೆರಿಕ ಓಪನ್: ಬೆಲಾರಸ್ ಆಟಗಾರ್ತಿಗೆ ಮಣಿದ ಸೆರೆನಾ; ಅಮೆರಿಕದ ಜೆನಿಫರ್ ಬ್ರಾಡಿಗೆ ನಿರಾಸೆ
Last Updated 11 ಸೆಪ್ಟೆಂಬರ್ 2020, 12:23 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಆರು ಬಾರಿಯ ಚಾಂಪಿಯನ್‌, ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎಂದೇ ಬಿಂಬಿತರಾಗಿದ್ದ ಅಮೆರಿಕದ ಸೆರೆನಾ ವಿಲಿಯಮ್ಸ್, ಅಮೆರಿಕ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದರು. ಗುರುವಾರ ರಾತ್ರಿ ನಡೆದ ಮಹಿಳೆಯರ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಬೆಲಾರಸ್‌ನ ವಿಕ್ಟೋರಿಯ ಆಜರೆಂಕಾ 1–6, 6–3, 6–3ರಲ್ಲಿ ಸೆರೆನಾ ಅವರನ್ನು ಮಣಿಸಿದರು.

ಮಹಿಳಾ ವಿಭಾಗದ ಮತ್ತೊಂದು ಸೆಮಿಫೈನಲ್‌ನಲ್ಲಿ ಎರಡು ಬಾರಿಯ ಗ್ರ್ಯಾನ್‌ಸ್ಲಾಂ ವಿಜೇತೆ ಜಪಾನ್‌ನ ನವೊಮಿ ಒಸಾಕ 7-6(1) 3-6 6-3ರಲ್ಲಿ ಅಮೆರಿಕದ ಜೆನಿಫರ್ ಬ್ರಾಡಿ ವಿರುದ್ಧ ಗೆದ್ದು ಎರಡನೇ ಬಾರಿ ಅಮೆರಿಕ ಓಪನ್‌ನ ಫೈನಲ್ ಪ್ರವೇಶಿಸಿದರು.‌

24ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದು ಮಾರ್ಗರೆಟ್ ಸ್ಮಿತ್ ಕೋರ್ಟ್ ಅವರ ದಾಖಲೆ ಸಮಗಟ್ಟುವ ಕನಸಿನೊಂದಿಗೆ ಕಣಕ್ಕೆ ಇಳಿದಿದ್ದ ಸೆರೆನಾ ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದು ಸಂಭ್ರಮಿಸಿದ್ದರು. ಆದರೆ ಮುಂದಿನ ಎರಡು ಸೆಟ್‌ಗಳಲ್ಲಿ ಅಜರೆಂಕಾ ಪುಟಿದೆದ್ದು ಮೂರನೇ ಬಾರಿ ಫೈನಲ್‌ಗೆ ಲಗ್ಗೆ ಇರಿಸಿದರು. ಎಡ ಹಿಂಗಾಲಿನಲ್ಲಿ ನೋವು ಕಾಣಿಸಿಕೊಂಡಿದ್ದ ಸೆರೆನಾ ಮೂರನೇ ಸೆಟ್‌ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.

’ಮಾನಸಿಕವಾಗಿ ಸಮರ್ಥಳಾಗಿದ್ದೆ. ಇದುವೇ ಈ ಪಂದ್ಯದಲ್ಲಿ ನನ್ನ ಗೆಲುವಿನ ಗುಟ್ಟು‘ ಎಂದು2012 ಮತ್ತು 2013ರ ಫೈನಲ್‌ನಲ್ಲಿ ಸೆರೆನಾಗೆ ಮಣಿದಿದ್ದ ಅಜರೆಂಕಾ ಅಭಿಪ್ರಾಯಪ್ಟಟರು.

ಆರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಆರಂಭದಲ್ಲಿ ಸೆರೆನಾ ಚುರುಕಿನ ಆಟವಾಡಿ ಎದುರಾಳಿಯನ್ನು ಕಂಗೆಡಿಸಿದರು. ಅಜರೆಂಕಾ ನಾಲ್ಕು ಡಬಲ್ ಫಾಲ್ಟ್‌ಗಳನ್ನು ಎಸಗಿದರು. 15ರಲ್ಲಿ ಆರು ಮೊದಲ ಸರ್ವ್ ಪಾಯಿಂಟ್‌ಗಳನ್ನು ಮಾತ್ರ ಉಳಿಸಿಕೊಳ್ಳಲು ಅವರು ಯಶಸ್ವಿಯಾದರು. 10 ಅನ್‌ಫೋರ್ಸ್‌ಡ್ ಎರರ್‌ಗಳನ್ನು ಮಾಡಿದ ಅವರು ಆರಂಭದಲ್ಲೇ 1–4ರ ಹಿನ್ನಡೆಯಿಂದ ತೀವ್ರ ನಿರಾಸೆಗೆ ಒಳಗಾದರು.

ಏಳು ವರ್ಷಗಳಲ್ಲಿ ಮೊದಲ ಸೆಮಿಫೈನಲ್ ಪಂದ್ಯ ಆಡಿದ ಅಜರೆಂಕಾ ಎರಡನೇ ಸೆಟ್‌ನಲ್ಲಿ ಭಾರಿ ತಿರುಗೇಟು ನೀಡಿದರು. ಬೇಸ್‌ಲೈನ್‌ನಲ್ಲಿ ನಿಂತು ಮೋಹಕ ಬ್ಯಾಕ್‌‌ಹ್ಯಾಂಡ್ ಹೊಡೆತಗಳ ಮೂಲಕಮೂರನೇ ಶ್ರೇಯಾಂಕಿತೆ ಸೆರೆನಾ ಅವರ ಸರ್ವ್‌ಗಳನ್ನು ಮುರಿದ ಅವರು ಆರಂಭದಲ್ಲಿ 3–2ರ ಮುನ್ನಡೆ ಸಾಧಿಸಿದ ನಂತರ ಹಿಡಿತ ಬಿಗಿ ಮಾಡಿದರು.

ಸರ್ವ್‌ಗಳನ್ನು ನಿಧಾನಕ್ಕೆ ಸುಧಾರಿಸಿಕೊಂಡ ಅಜರೆಂಕಾ ನಿರ್ಣಾಯಕ ಸೆಟ್‌ನಲ್ಲಿ ಬಹುಪಾಲು ಪಾಯಿಂಟ್‌ಗಳನ್ನು ಮೊದಲ ಸರ್ವ್‌ ನಲ್ಲೇ ಗಳಿಸಿಕೊಂಡರು. ಕೇವಲ ಒಂದು ಅನ್‌ಫೋರ್ಸ್‌ಡ್ ಎರರ್ ಮಾಡಿದ ಅವರು ಬಲಿಷ್ಠ ಏಸ್‌ನೊಂದಿಗೆ ಸೆಟ್ ಹಾಗೂ ಪಂದ್ಯ ಗೆದ್ದುಕೊಂಡರು.

ಒಸಾಕ ಭರ್ಜರಿ ಆಟ

ಕ್ವಾರ್ಟರ್ ಫೈನಲ್ ವರೆಗೂ ಒಂದು ಸೆಟ್ ಕೂಡ ಕಳೆದುಕೊಳ್ಳದೆ ಒಸಾಕ ಎದುರಿನ ಪಂದ್ಯಕ್ಕೆ ಸಜ್ಜಾದ ಬ್ರಾಡಿ ನಿರಾಳವಾಗಿ ಆಡಿದ್ದರು. ಆದರೆ ನಾಲ್ಕನೇ ಶ್ರೇಯಾಂಕಿತೆ ಒಸಾಕ ಅವರ ಬಲಶಾಲಿ ಹೊಡೆತಗಳ ಮುಂದೆ ಕಂಗೆಟ್ಟರು. 35 ವಿನ್ನರ್‌ಗಳೊಂದಿಗೆ ಮುನ್ನಡೆದ ಒಸಾಕ 17 ಅನ್‌ಫೋರ್ಸ್‌ಡ್ ಎರರ್‌ ಮಾಡಿದ್ದರು. ಮೊದಲ ಸೆಟ್‌ನ ಒಂದು ಹಂತದಲ್ಲಿ ಇಬ್ಬರೂ 3–3ರ ಸಮಬಲ ಸಾಧಿಸಿದ್ದರು. ನಂತರ ಒಸಾಕ 5–4ರಲ್ಲಿ ಮುನ್ನಡೆದರು. ಟೈಬ್ರೇಕರ್‌ಗೆ ಸಾಗಿದ ಸೆಟ್‌ನಲ್ಲಿ ಕೊನೆಗೂ ಒಸಾಕ ಗೆದ್ದರು.

ಎರಡನೇ ಸೆಟ್‌ನ ಮೊದಲ ನಾಲ್ಕು ಪಾಯಿಂಟ್‌ಗಳನ್ನು ಗಳಿಸಿದ ಬ್ರಾಡಿ ನಂತರ 5–3ರಲ್ಲಿ ಮುನ್ನಡೆದರು. ಅದೇ ಲಯದಲ್ಲಿ ಆಟ ಮುಂದುವರಿಸಿ ಸೆಟ್ ಗೆದ್ದುಕೊಂಡರು. ಮೂರನೇ ಸೆಟ್‌ನಲ್ಲಿ ಒಸಾಕ ಅಮೋಘ ಆಟವಾಡಿದರು. ಆರಂಭದಲ್ಲಿ 4–1ರಲ್ಲಿ ಮುನ್ನಡೆದ ಅವರು ಸುಲಭವಾಗಿ ಸೆಟ್ ಗೆದ್ದು ಸಂಭ್ರಮಿಸಿದರು.ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT