ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಗೆ ರಿಬಾಕಿನಾ, ಅಜರೆಂಕಾ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಕೋರ್ಡಗೆ ನಿರಾಸೆ
Last Updated 24 ಜನವರಿ 2023, 12:51 IST
ಅಕ್ಷರ ಗಾತ್ರ

ಮೆಲ್ಬರ್ನ್‌: ವಿಕ್ಟೋರಿಯಾ ಅಜರೆಂಕಾ ಮತ್ತು ಎಲೆನಾ ರಿಬಾಕಿನಾ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿ ಫೈನಲ್‌ ಪ್ರವೇಶಿಸಿದರು.

ಮಂಗಳವಾರ ನಡೆದ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಬೆಲಾರಸ್‌ನ ಅಜರೆಂಕಾ 6–4, 6–1 ರಲ್ಲಿ ಅಮೆರಿಕದ ಜೆಸ್ಸಿಕಾ ಪೆಗೂಲ ವಿರುದ್ಧ ಗೆದ್ದರು. ನಾಲ್ಕರಘಟ್ಟದ ಪಂದ್ಯದಲ್ಲಿ ಅವರು ಕಜಕಸ್ತಾನದ ರಿಬಾಕಿನಾ ಅವರ ಸವಾಲು ಎದುರಿಸುವರು. ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ರಿಬಾಕಿನಾ 6–2, 6–4 ರಲ್ಲಿ ಲಾತ್ವಿಯದ ಎಲೆನಾ ಒಸ್ಟಪೆಂಕೊ ಅವರನ್ನು ಮಣಿಸಿದರು.

33 ವರ್ಷದ ಅಜರೆಂಕಾ, ಇಲ್ಲಿ ಒಂದು ದಶಕದ ಬಿಡುವಿನ ಬಳಿಕ ಸೆಮಿ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. ಅವರು 2012 ಮತ್ತು 2013 ರಲ್ಲಿ ಚಾಂಪಿಯನ್‌ ಆಗಿದ್ದರು. 2020ರ ಅಮೆರಿಕ ಓಪನ್‌ ಟೂರ್ನಿಯ ಬಳಿಕ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ಸೆಮಿಫೈನಲ್‌ ಪ್ರವೇಶಿಸಿದ್ದು ಇದೇ ಮೊದಲು.

ಉತ್ತಮ ಲಯದಲ್ಲಿ ಆಡಿದ ಅಜರೆಂಕಾ ಮೊದಲ ಸೆಟ್‌ನಲ್ಲಿ ಆರಂಭದಲ್ಲೇ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ 3–0 ರಲ್ಲಿ ಮುನ್ನಡೆ ಪಡೆದರು. ಪೆಗೂಲ ಮರುಹೋರಾಟದ ಸೂಚನೆ ನೀಡಿದರಾದರೂ, ಅದಕ್ಕೆ ಅವಕಾಶ ನೀಡದ ಬೆಲಾರಸ್‌ನ ಆಟಗಾರ್ತಿ 6–4 ರಲ್ಲಿ ಸೆಟ್ ಗೆದ್ದರು. ಎರಡನೇ ಸೆಟ್‌ನಲ್ಲಿ ಅವರು ಎದುರಾಳಿಗೆ ಕೇವಲ ಒಂದು ಗೇಮ್‌ ಮಾತ್ರ ಬಿಟ್ಟುಕೊಟ್ಟರು.

ವಿಂಬಲ್ಡನ್‌ ಚಾಂಪಿಯನ್‌ ರಿಬಾಕಿನಾ ಅವರು ಮೆಲ್ಬರ್ನ್‌ ಪಾರ್ಕ್‌ನಲ್ಲಿ ಇದೇ ಮೊದಲ ಬಾರಿ ಸೆಮಿ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. ಎರಡೂ ಸೆಟ್‌ಗಳಲ್ಲಿ ಶಿಸ್ತಿನ ಆಟವಾಡಿ ಒಟ್ಟು 11 ಏಸ್‌ಗಳನ್ನು ಸಿಡಿಸಿದರು.

ಕೋರ್ಡಗೆ ನಿರಾಸೆ: ಅಮೆರಿಕದ ಸೆಬಾಸ್ಟಿಯನ್‌ ಕೋರ್ಡ ಅವರು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿ ಪ್ರವೇಶಿಸಲು ವಿಫಲರಾದರು. ರಷ್ಯಾದ ಕರೆನ್‌ ಕಚನೊವ್‌ ವಿರುದ್ಧದ ಕ್ವಾರ್ಟರ್‌ ಫೈನಲ್ ಪಂದ್ಯವನ್ನು ಮಣಿಕಟ್ಟಿನ ಗಾಯದ ಕಾರಣ ಅವರು ಅರ್ಧದಲ್ಲೇ ತ್ಯಜಿಸಿದರು. ಈ ವೇಳೆ ಕಚನೊವ್ 7–6, 6–3, 3–0 ರಲ್ಲಿ ಮುನ್ನಡೆಯಲ್ಲಿದ್ದರು.

ತಮ್ಮ ತಂದೆ ಮಾಡಿದ್ದ ಸಾಧನೆಯನ್ನು ಅನುಕರಿಸಬೇಕೆಂಬ ಸೆಬಾಸ್ಟಿಯನ್‌ ಅವರ ಕನಸು ಈ ಬಾರಿ ನನಸಾಗಲಿಲ್ಲ. ಸೆಬಾಸ್ಟಿಯನ್‌ ಅವರ ತಂದೆ ಪೆಟ್ರ್‌ ಕೋರ್ಡ 1998 ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದರು.

ಮೊದಲ ಸೆಟ್‌ಅನ್ನು ಟೈಬ್ರೇಕರ್‌ನಲ್ಲಿ ಗೆದ್ದ ಕಚನೊವ್‌, ಆ ಬಳಿಕ ಆಕ್ರಮಣಕಾರಿ ಆಟವಾಡಿದರು. ರಷ್ಯಾದ ಆಟಗಾರ 2022ರ ಅಮೆರಿಕ ಓಪನ್‌ ಟೂರ್ನಿಯಲ್ಲೂ ಸೆಮಿ ಪ್ರವೇಶಿಸಿದ್ದ ಸಾಧನೆ ಮಾಡಿದ್ದರು.

ಕಚನೊವ್ ಅವರು ಸೆಮಿಫೈನಲ್‌ನಲ್ಲಿ ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಸ್‌ ವಿರುದ್ಧ ಪೈಪೋಟಿ ನಡೆಸುವರು. ಸಿಟ್ಸಿಪಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ 6–3, 7–6, 6–4 ರಲ್ಲಿ ಜೆಕ್‌ ಗಣರಾಜ್ಯದ ಜಿರಿ ಲೆಹೆಲಾ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT