ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪ್ರಶಸ್ತಿ ಸುತ್ತಿಗೆ ಸಾಕೇತ್‌–ರಾಮ್‌ಕುಮಾರ್ ಜೋಡಿ

ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್‌ ಟೆನಿಸ್ ಟೂರ್ನಿ: ಸೆಮಿಫೈನಲ್‌ಗೆ ವುಕಿಚ್‌–ಬೋರ್ನಾ ಗೋಜೊ
Last Updated 18 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಸಾಕೇತ್ ಮೈನೇನಿ ಮತ್ತು ರಾಮ್‌ಕುಮಾರ್ ರಾಮನಾಥನ್ ಜೋಡಿ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿ–2ರ ಡಬಲ್ಸ್ ವಿಭಾಗದ ಪ್ರಶಸ್ತಿ ಸುತ್ತು ಪ್ರವೇಶಿಸಿದರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಸೆಮಿಫೈನಲ್‌ನಲ್ಲಿ ಸಾಕೇತ್‌–ರಾಮ್‌ಕುಮಾರ್ ಜೋಡಿ ಶುಕ್ರವಾರ ಫ್ರಾನ್ಸ್‌ನ ಎನ್ಜೊ ಕಾಕಾರ್ಡ್ ಮತ್ತು ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಹ್ಯಾರಿಸ್‌ ಜೋಡಿಯನ್ನು 6–1, 7–6 (3)ರಲ್ಲಿ ಮಣಿಸಿದರು. ಫೈನಲ್‌ನಲ್ಲಿ ಅವರಿಗೆ ಭಾರತದ ಅರ್ಜುನ್ ಖಾಡೆ ಮತ್ತು ಆಸ್ಟ್ರಿಯಾದ ಅಲೆಕ್ಸಾಂಡರ್ ಎರ್ಲರ್‌ ಎದುರಾಳಿಗಳು.

ಅಗ್ರ ಶ್ರೇಯಾಂಕದ ಅರ್ಜುನ್ ಮತ್ತು ಎರ್ಲರ್‌ ಜೋಡಿ ಭಾರತದವರೇ ಆದ ಶ್ರೀರಾಮ್ ಬಾಲಾಜಿ ಮತ್ತು ವಿಷ್ಣುವರ್ಧನ್ ವಿರುದ್ಧ 6-4, 4-6, 10-3ರಲ್ಲಿ ಜಯ ಗಳಿಸಿದರು.

ವುಕಿಚ್‌–ಬೋರ್ನಾ ಗೋಜೊ ನಾಲ್ಕರ ಘಟ್ಟಕ್ಕೆ
ಸಿಂಗಲ್ಸ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವುಕಿಚ್ ಮತ್ತು ಕ್ರೊವೇಷ್ಯಾದ ಬೋರ್ನಾ ಗೋಜೊ ಸೆಮಿಫೈನಲ್ ಪ್ರವೇಶಿಸಿದರು. ಫ್ರಾನ್ಸ್‌ನ ಎನ್ಜೊ ಕಾಕಾರ್ಡ್ ಹಾಗೂ ಬಲ್ಗೇರಿಯಾದ ದಿಮಿತರ್ ಕುಜ್ಮನೊವ್ ಕೂಡ ನಾಲ್ಕರ ಘಟ್ಟಕ್ಕೆ ಲಗ್ಗೆ ಇರಿಸಿದರು.

ತಮ್ಮದೇ ದೇಶದ ಮ್ಯಾಕ್ಸ್ ಪರ್ಸೆಲ್ ಎದುರಿನ ಪಂದ್ಯದಲ್ಲಿ ಅಲೆಕ್ಸಾಂಡರ್ ವುಕಿಚ್6-4, 2-6, 6-4ರಲ್ಲಿ ಜಯ ಸಾಧಿಸಿದರು. ಕಳೆದ ವಾರ ನಡೆದ ಮೊದಲನೇ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಬೊರ್ನಾ ಗೋಜೊ ಸ್ವಿಟ್ಜರ್ಲೆಂಡ್‌ನ ಆ್ಯಂಟೊನಿ ಬೆಲಿಯರ್‌ ಎದುರು 6-4, 7-6 (3)ರಲ್ಲಿ ಗೆಲುವು ಸಾಧಿಸಿದರು.

ಮೂರನೇ ಶ್ರೇಯಾಂಕದ ಎನ್ಜೊ ಸ್ವಿಟ್ಜರ್ಲೆಂಡ್‌ನ ಜೊಹಾನ್ ನಿಕಲ್ಸ್ ಎದುರು6-1, 6-2ರಲ್ಲಿ ಜಯ ಗಳಿಸಿದರೆ ಕುಜ್ಮನೊವ್ 6-4, 6-2ರಲ್ಲಿ ಗೆದ್ದರು.

ಫಲಿತಾಂಶಗಳು
ಸಿಂಗಲ್ಸ್ ಕ್ವಾರ್ಟರ್ ಫೈನಲ್:
ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವುಕಿಚ್‌ಗೆ ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಎದುರು 6-4, 2-6, 6-4ರಲ್ಲಿ ಜಯ; ಬಲ್ಗೇರಿಯಾದ ದಿಮಿತರ್ ಕುಜ್ಮನೊವ್‌ಗೆ ಫ್ರಾನ್ಸ್‌ನ ಮಥಿಯಾಸ್ ಬಾರ್ಗ್‌ ವಿರುದ್ಧ 6-4, 6-2ರಲ್ಲಿ ಜಯ; ಫ್ರಾನ್ಸ್‌ನ ಎನ್ಜೊ ಕಾಕಾರ್ಡ್‌ಗೆ ಸ್ವಿಟ್ಜರ್ಲೆಂಡ್‌ನ ಜೊಹಾನ್ ನಿಕಲ್ಸ್ ಎದುರು 6-1, 6-2ರಲ್ಲಿ ಗೆಲುವು; ಕ್ರೊವೇಷ್ಯಾದ ಬೋರ್ನಾ ಗೋಜೊಗೆ ಸ್ವಿಟ್ಜರ್ಲೆಂಡ್‌ನ ಅ್ಯಂಟಾಯ್ನ್ ಬೆಲಿಯರ್‌ ಎದುರು 6-4, 7-6 (3)ರಲ್ಲಿ ಗೆಲುವು.

ಡಬಲ್ಸ್‌: ಆಸ್ಟ್ರಿಯಾದ ಅಲೆಕ್ಸಾಂಡರ್ ಎರ್ಲರ್‌–ಭಾರತದ ಅರ್ಜುನ್ ಖಾಡೆಗೆ ಶ್ರೀರಾಮ್‌ ಬಾಲಾಜಿ–ವಿಷ್ಣುವರ್ಧನ್ ವಿರುದ್ಧ 6-4, 4-6, 10-3ರಲ್ಲಿ ಜಯ; ಭಾರತದ ಸಾಕೇತ್ ಮೈನೇನಿ–ರಾಮ್‌ಕುಮಾರ್ ರಾಮನಾಥನ್‌ಗೆ ಫ್ರಾನ್ಸ್‌ನ ಎನ್ಜೊ ಕಾಕಾರ್ಡ್‌–ಆಸ್ಟ್ರೇಲಿಯದ ಆ್ಯಂಡ್ರ್ಯೂ ಹ್ಯಾರಿಸ್‌ ವಿರುದ್ಧ 6-1, 7-6 (3)ರಲ್ಲಿ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT