ಬುಧವಾರ, ಏಪ್ರಿಲ್ 14, 2021
24 °C
ಉಕ್ರೇನ್‌ನ ಎಲಿನಾ ಸ್ವಿಟೋಲಿನಾಗೆ ನಿರಾಸೆ

ವಿಂಬಲ್ಡನ್ ಟೆನಿಸ್ ಟೂರ್ನಿ: ಫೈನಲ್‌ಗೆ ಸಿಮೋನಾ ಹಲೆಪ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಸಿಮೋನಾ ಹಲೆಪ್ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತು ಪ್ರವೇಶಿಸಿದರು. ಈ ಮೂಲಕ ಆಲ್‌ ಇಂಗ್ಲೆಂಡ್‌ನಲ್ಲಿ ಫೈನಲ್ ಪ್ರವೇಶಿಸಿದ ರೊಮೇನಿಯಾದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡರು. 

ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಹಲೆಪ್ 6–1, 6–3ರಲ್ಲಿ ಗೆಲುವು ಸಾಧಿಸಿದರು. 27 ವರ್ಷದ ಈ ಆಟಗಾರ್ತಿಗೆ ಇಲ್ಲಿ ಏಳನೇ ಶ್ರೇಯಾಂಕ ನೀಡಲಾಗಿತ್ತು. ಕಳೆದ ವರ್ಷದ ಫ್ರೆಂಚ್ ಓಪನ್ ಪ್ರಶಸ್ತಿಯನ್ನೂ ಅವರು ತಮ್ಮದಾಗಿಸಿಕೊಂಡಿದ್ದರು. 

‘ಮಾನಸಿಕವಾಗಿ ಮತ್ತು ದೈಹಿಕವಾಗಿ ಫಿಟ್ ಆಗಿದ್ದುದರಿಂದ ಪಂದ್ಯ ಗೆಲ್ಲಲು ಸಾಧ್ಯವಾಯಿತು. ಎದುರಾಳಿಯ ವಿರುದ್ಧ ಸಮರ್ಥವಾಗಿ ಆಡಿದ್ದೇನೆ ಮತ್ತು ಉತ್ತಮ ರಣತಂತ್ರಗಳನ್ನು ಬಳಸಿದ್ದೇನೆ ಎಂಬ ವಿಶ್ವಾಸವಿದೆ’ ಎಂದು ಹಲೆಪ್ ಹೇಳಿದರು.

2014ರ ವಿಂಬಲ್ಡನ್‌ನ ಸೆಮಿಫೈನಲ್‌ನಲ್ಲಿ ಸೋತಿದ್ದ ಹಲೆಪ್‌ ಈ ಬಾರಿ ಆರಂಭದಿಂದಲೇ ಅಮೋಘ ಆಟವಾಡಿದ್ದರು. ವೀನಸ್ ವಿಲಿಯಮ್ಸ್ ಎದುರು ಮೂರನೇ ಸುತ್ತಿನಲ್ಲಿ ಗೆದ್ದಿದ್ದ ಶಾಲಾ ಬಾಲಕಿ ಕೊಕೊ ಗಾಫ್‌ ಎದುರು ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದಿದ್ದರು.

ಭರ್ಜರಿ ಆರಂಭ:ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಸೆಮಿಫೈನಲ್ ಪ್ರವೇಶಿಸಿದ ಉಕ್ರೇನ್‌ನ ಮೊದಲ ಮಹಿಳೆ ಎಂಬ ಖ್ಯಾತಿ ಗಳಿಸಿರುವ ಸ್ವಿಟೋಲಿನಾ ಪಂದ್ಯದ ಆರಂಭದಲ್ಲಿ ಭರ್ಜರಿ ಆಟವಾಡಿದರು. ಹೀಗಾಗಿ ಮೊದಲ ಎರಡು ಗೇಮ್‌ಗಳನ್ನು ಮುಗಿಸಲು 20 ನಿಮಿಷ ಬೇಕಾಯಿತು. ಈ ಗೇಮ್‌ಗಳಲ್ಲಿ ಮುನ್ನಡೆ ಸಾಧಿಸಿದ ಹಲೆಪ್ ನಂತರ ಸುಲಭವಾಗಿ ಗೆಲುವಿನ ತೋರಣ ಕಟ್ಟಿದರು.

ಕೋರಿ ಗಾಫ್‌ ಗೆಳತಿಯೂ ಕಣದಲ್ಲಿ
ಜೆನಿಫರ್ ಕ್ಯಾಪ್ರಿಯಾಟಿ ನಂತರ ವಿಂಬಲ್ಡನ್‌ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ ಆಟಗಾರ್ತಿ ಎಂಬ ದಾಖಲೆ ಬರೆದ 15ರ ಹರಯದ ಕೋರಿ ಗಾಫ್ (ಕೊಕೊ ಗಾಫ್) ಕಳೆದ ವಾರ ಅಚ್ಚರಿ ಮೂಡಿಸಿದ್ದರು. ಟೂರ್ನಿಯ ಜೂನಿಯರ್ ವಿಭಾಗದಲ್ಲಿ ಆಡಿದ ಅತಿ ಕಿರಿಯ ಆಟಗಾರ್ತಿ ಎಂಬ ಹೆಸರು ಗಳಿಸಿದ್ದಳು. ಆಕೆಯ ಗೆಳತಿ, ಜೆಕ್ ಗಣರಾಜ್ಯದ ಲಿಂಡಾ ಫುವಿಟ್ರೋವ ಜೂನಿಯರ್ ಗಮನ ಸೆಳೆದಳು.

ಮೇ ತಿಂಗಳಲ್ಲಿ 14ನೇ ವಯಸ್ಸಿಗೆ ಕಾಲಿಟ್ಟ ಲಿಂಡಾ ಇತ್ತೀಚಿನ ವರೆಗೂ ಹೆಸರಾಂತ ಆಟಗಾರರ ಆಟೊಗ್ರಾಫ್‌ಗಾಗಿ ಆಲ್ ಇಂಗ್ಲೆಂಡ್‌ ಅಂಗಣದಲ್ಲಿ ಕಾಯುತ್ತಿದ್ದಳು. ಆದರೆ ಈಗ ಅದೇ ಜಾಗದಲ್ಲಿ ಸ್ಪರ್ಧಾ ಕಣಕ್ಕೆ ಇಳಿದಿದ್ದಾಳೆ.

’ಶಾಲೆಯಲ್ಲಿ ಪಾಠ ಮತ್ತು ಪರೀಕ್ಷೆಗಳಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದೆ. ಆದರೂ ಟೆನಿಸ್ ಆಡಲು ಸಾಕಷ್ಟು ಸಮಯ ತೆಗೆದಿರಿಸುತ್ತಿದ್ದೆ. ಆಟ ಮತ್ತು ಪಾಠವನ್ನು ಸರಿದೂಗಿಸಲು ಸಾಧ್ಯವಾಗುತ್ತಿತ್ತು. ಉತ್ತಮ ಅಂಕಗಳೂ ಬರುತ್ತಿದ್ದವು’ ಎಂದು ಆಕೆ ಸುದ್ದಿಸಂಸ್ಥೆಗೆ ತಿಳಿಸಿದಳು. 

‘ರೋಜರ್ ಫೆಡರರ್, ರಫೆಲ್ ನಡಾಲ್, ವಿಕ್ಟೋರಿಯಾ ಅಜರೆಂಕಾ ಮುಂತಾದವರನ್ನು ಭೇಟಿಯಾಗಿ ಮಾತನಾಡಲು ಅವಕಾಶ ಲಭಿಸಿದ್ದು ಖುಷಿ ನೀಡಿದೆ’ ಎಂದೂ ಲಿಂಡಾ ಹೇಳಿದಳು.

ಜೂನಿಯರ್ ವಿಭಾಗದಲ್ಲಿ 31ನೇ ರ‍್ಯಾಂಕಿಂಗ್ ಹೊಂದಿರುವ ಲಿಂಡಾ ಈ ಬಾರಿ ಫ್ರೆಂಚ್‌ ಓಪನ್‌ನ ಜೂನಿಯರ್ ವಿಭಾಗದಲ್ಲೂ ಆಡಿದ್ದರು. ಬುಧವಾರ ನಡೆದಿದ್ದ ಮೂರನೇ ಸುತ್ತಿನ ಪಂದ್ಯದಲ್ಲಿ ಇಂಡೊನೇಷ್ಯಾದ 16 ವರ್ಷದ ಪ್ರಿಸ್ಕಾ ಮಡೆಲಿನ್ ಎದುರು 4–6, 6–3, 6–3ರಲ್ಲಿ ಸೋತಿದ್ದರು.

‘ವಿಂಬಲ್ಡನ್ ಅತ್ಯಂತ ಗೌರವದ ಟೂರ್ನಿ. ಈ ಟೂರ್ನಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ಆದ್ದರಿಂದ ಇಲ್ಲಿ ಆಡಲು ಅವಕಾಶ ಸಿಕ್ಕಿದ್ದೇ ಭಾರಿ ಸಂತಸದ ವಿಷಯ’ ಎಂದಳು.

ಫೆಡರರ್ –ನಡಾಲ್ ಕದನ ಕುತೂಹಲ
ಪುರುಷರ ಸೆಮಿಫೈನಲ್ ಹಣಾಹಣಿ ಶುಕ್ರವಾರ ನಡೆಯಲಿದ್ದು ಮೊದಲ ಪಂದ್ಯ ನೊವಾಕ್ ಜೊಕೊವಿಚ್ ಮತ್ತು ಬಾಟಿಸ್ಟಾ ಆಗಟ್ ನಡುವೆ ನಡೆಯಲಿದೆ. ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಈ ಇಬ್ಬರು ಮೂರು ಬಾರಿ ಸೆಣಸಿದ್ದು ಎಲ್ಲ ಪಂದ್ಯಗಳಲ್ಲೂ ಜೊಕೊವಿಚ್‌ ಗೆದ್ದಿದ್ದಾರೆ. ಎರಡನೇ ಪಂದ್ಯದಲ್ಲಿ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಸೆಣಸಲಿದ್ದಾರೆ. ವಿಂಬಲ್ಡನ್‌ನಲ್ಲಿ 11 ವರ್ಷಗಳ ನಂತರ ಇವರಿಬ್ಬರು ಮುಖಾಮುಖಿ ಆಗುತ್ತಿರುವುದರಿಂದ ಈ ಕದನವು ಕುತೂಹಲ ಕೆರಳಿಸಿದೆ.

ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಮುಖಾಮುಖಿಯ ಪ್ರಮುಖ ಅಂಶಗಳು
* ಫೆಡರರ್ ಮತ್ತು ನಡಾಲ್ ಒಟ್ಟಾರೆ 13 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ನಡಾಲ್ 10ರಲ್ಲಿ ಗೆಲುವು ಸಾಧಿಸಿದ್ದಾರೆ.

* ಈ ವರ್ಷದ ಫ್ರೆಂಚ್ ಓಪನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನಡಾಲ್ 6–3, 6–4, 6–2ರಲ್ಲಿ ಗೆದ್ದಿದ್ದರು. 2017ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಫೆಡರರ್‌ 6–4, 3–6, 6–1, 3–6, 6–3ರಲ್ಲಿ ಗೆದ್ದಿದ್ದರು.

* 2014ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಇವರಿಬ್ಬರು ಮುಖಾಮುಖಿಯಾದಾಗ ಗೆಲುವು ನಡಾಲ್ ಪಾಲಾಗಿತ್ತು. 7–6 (7/4), 6–3, 6–3ರಲ್ಲಿ ಅವರು ಜಯಿಸಿದ್ದರು. 2012ರ ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್‌ನಲ್ಲಿ ನಡಾಲ್ 6–7 (5/7), 6–2, 7–6 (7/5), 6–4ರಲ್ಲಿ ಗೆದ್ದಿದ್ದರು.

* 2011ರ ಫ್ರೆಂಚ್ ಓಪನ್‌ ಟೂರ್ನಿಯಲ್ಲಿ ನಡಾಲ್ 7–5, 7–6 (7–3), 5–7, 6–1 ಸೆಟ್‌ಗಳಿಂದ ಗೆಲುವು ಸಾಧಿಸಿದ್ದರು. 2009ರ ಆಸ್ಟ್ರೇಲಿಯಾ ಓಪನ್‌ನಲ್ಲಿ ನಡಾಲ್ 7–5, 3–6, 7–6 (7/3), 3–6, 6–2ರ ಗೆಲುವು ದಾಖಲಿಸಿದ್ದರು.

* 2008ರ ವಿಂಬಲ್ಡನ್‌ನಲ್ಲಿ ನಡಾಲ್ 6–4, 6–4, 6–7 (5/7), 6–7(8/10), 9–7ರಲ್ಲಿ ಗೆದ್ದಿದ್ದರು. ಅದೇ ವರ್ಷದ ಫ್ರೆಂಚ್ ಓಪನ್‌ನಲ್ಲಿ ನಡಾಲ್ 6–1, 6–3, 6–0ಯಿಂದ ಗೆದ್ದಿದ್ದರು. 2007ರ ವಿಂಬಲ್ಡನ್‌ನಲ್ಲಿ ಫೆಡರರ್ ಗೆದ್ದಿದ್ದರು. ಸ್ಕೋರ್‌: 7–6 (9/7), 4–6, 7–6 (7/3), 2–6, 6–2. ಅದೇ ವರ್ಷದ ಫ್ರೆಂಚ್ ಓಪನ್‌ ಟೂರ್ನಿಯಲ್ಲಿ ನಡಾಲ್ 6–3, 4–6, 6–3, 6–4ರಲ್ಲಿ ಗೆದ್ದಿದ್ದರು.

* 2006ರ ವಿಂಬಲ್ಡನ್‌ನಲ್ಲಿ ಫೆಡರರ್ 6–0, 7–6 (7/5), 6–7 (2/7), 6–3ರ ಜಯ ಸಾಧಿಸಿದ್ದರು. ಫ್ರೆಂಚ್ ಓಪನ್‌ನಲ್ಲಿ ನಡಾಲ್ 1–6, 6–1, 6–4, 7–6 (7/4)ರಲ್ಲಿ ಗೆದ್ದಿದ್ದರು. 2005ರ ಫ್ರೆಂಚ್ ಓಪನ್‌ನ ಸೆಮಿಫೈನಲ್‌ನಲ್ಲಿ ನಡಾಲ್ 6–3, 4–6, 6–4, 6–3ರಲ್ಲಿ ಗೆದ್ದಿದ್ದರು.

*
ಇದು, ಅತ್ಯಂತ ಖುಷಿಯ ಗಳಿಗೆ. ನನ್ನ ವೃತ್ತಿಜೀವನದ ಅತ್ಯಂತ ಮಹತ್ವದ ಫಲಿತಾಂಶವಿದು. ಆದ್ದರಿಂದ ತುಂಬ ರೋಮಾಂಚಗೊಂಡಿದ್ದೇನೆ.
-ಸಿಮೋನಾ ಹಲೆಪ್, ರೊಮೇನಿಯಾದ ಆಟಗಾರ್ತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು