ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ಗೆ ನೊವಾಕ್‌ ಜೊಕೊವಿಚ್‌

ಬೆಲ್ಜಿಯಂ ಆಟಗಾರ ಡೇವಿಡ್‌ ಗಫಿನ್‌ ಪರಾಭವ
Last Updated 10 ಜುಲೈ 2019, 19:25 IST
ಅಕ್ಷರ ಗಾತ್ರ

ಲಂಡನ್‌: ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ, ಅಗ್ರಶ್ರೇಯಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ ಅವರು ಬುಧವಾರ ವಿಂಬಲ್ಡನ್‌ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದರು. ಒಂಬತ್ತನೇ ಬಾರಿ ಟೂರ್ನಿಯ ಸೆಮಿಫೈನಲ್‌ಗೆ ಅವರು ಪ್ರವೇಶಿಸಿದರು.

ವಿಶ್ವ ಕ್ರಮಾಂಕಕ್ಕೆ ತಕ್ಕ ಆಟವಾಡಿದ ಸರ್ಬಿಯಾದ ಆಟಗಾರ, ಬೆಲ್ಜಿಯಂ ಆಟಗಾರ ಡೇವಿಡ್‌ ಗಫಿನ್‌ ಅವರನ್ನು 6–4, 6–0, 6–2ರಿಂದ ಮಣಿಸಿದರು. ಜೊಕೊವಿಚ್‌ ಪಂದ್ಯದಲ್ಲಿ ಮೂರು ಏಸ್‌ಗಳನ್ನು ಸಿಡಿಸಿದರೆ, ಗಫಿನ್‌ ಸಿಡಿಸಿದ್ದು 4 ಏಸ್‌. ಗಫಿನ್‌ ಎಸಗಿದ 5 ಡಬಲ್‌ ಫಾಲ್ಟ್‌ಗಳು ಅವರ ಗೆಲುವಿಗೆ ಮುಳುವಾದವು.

ಮಂಗಳವಾರ ನಡೆದ ಮಹಿಳಾ ಡಬಲ್ಸ್ ಪಂದ್ಯದಲ್ಲಿ ಶೇ ಸು ವೇಯ್‌– ಬಾರ್ಬರಾ ಸ್ಟ್ರೈಕೊವಾ ಜೋಡಿ, ಅರಿನಾ ಸಬಲೆಂಕಾ–ಎಲಿಸ್‌ ಮೆರ್ಟೆನ್ಸ್ ವಿರುದ್ಧ 6–4, 6–2 ಸೆಟ್‌ಗಳಿಂದ ಜಯಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟತು. ಮತ್ತೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಜೆಕ್‌ ಗಣರಾಜ್ಯದ ಜೋಡಿಯಾದ ಕೇಟ್‌ರಿನಾ ಸಿನಿಯಾಕೊವಾ – ಬಾರ್ಬರಾ ಕ್ರೆಜ್‌ಸಿಕೊವಾ, ಅನ್ನಾ ಲೆನಾ ಗ್ರಾನ್‌ಫೀಲ್ಡ್– ಡೆಮಿ ಶುರ್ಸ್ ಜೋಡಿಯನ್ನು 6–2, 7–6 ಸೆಟ್‌ಗಳಿಂದ ಸೋಲಿಸಿತು.

ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಜೆಕ್‌ ಗಣರಾಜ್ಯದ ಬಾರ್ಬರಾ ಸ್ಟ್ರೈಕೊವಾ ಅವರು ಜೊಹಾನ್ನಾ ಕೊಂತಾ ಅವರನ್ನು 7–6, 6–1ರಿಂದ ಸೋಲಿಸಿ ಸೆಮಿಫೈನಲ್‌ಗೆ ಕಾಲಿಟ್ಟಿದ್ದರು.

ಪ್ರಖರ ಬಿಸಿಲಿನ ಕಾರಣಪುರುಷರ ಕ್ವಾರ್ಟರ್‌ಫೈನಲ್‌ ಪಂದ್ಯಗಳು ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾದವು.

ಅಮೆರಿಕ ಓಪನ್‌ಗೆ ಆ್ಯಂಡಿ ಅಲಭ್ಯ
ಅಮೆರಿಕಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಇಂಗ್ಲೆಂಡ್‌ ಆಟಗಾರ ಆ್ಯಂಡಿ ಮರ್ರೆ ಮಂಗಳವಾರ ತಿಳಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ವಿಂಬಲ್ಡನ್‌ ಓಪನ್‌ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಅಮೆರಿಕಾ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಜೊತೆಯಾಗಿ ಆಡುತ್ತಿರುವ ಮರ್ರೆ ಮೂರನೇ ಸುತ್ತು ತಲುಪಿದ್ದರು. ಅಮೆರಿಕಾ ಓಪನ್‌ನಲ್ಲಿ 2012ರಲ್ಲಿ ಮೊದಲ ಬಾರಿ ಮರೆ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿದ್ದರು.

‘ಸರಿಯಾದ ಸಮಯದಲ್ಲಿ ನಾನು ಸಿಂಗಲ್ಸ್ ವಿಭಾಗಕ್ಕೆ ಹಿಂದಿರುಗುವುದು ಅಸಂಭವ. ದೈಹಿಕವಾಗಿ ಇನ್ನಷ್ಟು ಫಿಟ್‌ ಆಗಬೇಕಿದೆ’ ಎಂದು ಮರ್ರೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT