4
ಇಂದಿನಿಂದ ವಿಂಬಲ್ಡನ್‌ ಟೆನಿಸ್ ಟೂರ್ನಿ

ದಿಗ್ಗಜರ ಹಣಾಹಣಿಗೆ ಹಸಿರು ಕಣ ಸಿದ್ಧ

Published:
Updated:
ಲಂಡನ್‌ ಆಲ್‌ ಇಂಗ್ಲೆಂಡ್ ಟೆನಿಸ್ ಕೋರ್ಟ್‌ನಲ್ಲಿ ಭಾನುವಾರ ಅಭ್ಯಾಸ ನಡೆಸಿದ ಅಮೆರಿಕದ ವೀನಸ್ ವಿಲಿಯಮ್ಸ್‌ ಮತ್ತು ಸೆರೆನಾ ವಿಲಿಯಮ್ಸ್ ವಿಶ್ರಾಂತಿ ಪಡೆಯುತ್ತಿರುವ ಸಂದರ್ಭ ರಾಯಿಟರ್ಸ್ ಚಿತ್ರ

ಲಂಡನ್: ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಟೆನಿಸ್‌ ಅಂಕಣಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿವೆ. ಭವ್ಯ ಇತಿಹಾಸದ ಸವಿನೆನಪುಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಈ ಅಂಗಳದಲ್ಲಿ ಸೋಮವಾರದಿಂದ ವಿಂಬಲ್ಡನ್ ಟೆನಿಸ್ ಟೂರ್ನಿ ಆರಂಭವಾಗಲಿದೆ.

ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳಲ್ಲಿ ಅತ್ಯಂತ ಪ್ರತಿಷ್ಠಿತವಾಗಿರುವ ಈ ಟೂರ್ನಿಯಲ್ಲಿ ವಿಶ್ವ ಟೆನಿಸ್‌ನ ಹಲವು ದಿಗ್ಗಜರು ಮತ್ತು ಉದಯೋನ್ಮುಖರು ಕಣಕ್ಕೆ ಇಳಿಯುತ್ತಿದ್ದಾರೆ. ಹಾಲಿ ಚಾಂಪಿಯನ್ ರೋಜರ್ ಫೆಡರರ್ ಮತ್ತು ಗಾರ್ಬೈನ್ ಮುಗುರುಜಾ ಅವರಿಗೆ ಪ್ರಶಸ್ತಿ ಉಳಿಸಿಕೊಳ್ಳುವ ತವಕ. ಪುರುಷರ ವಿಭಾಗದಲ್ಲಿ ಫೆಡರರ್ ಅಗ್ರಶ್ರೇಯಾಂಕ ಹಾಗೂ ಮುಗುರುಜಾ ಮೂರನೇ ಶ್ರೇಯಾಂಕದಲ್ಲಿ ಆಡುತ್ತಿದ್ದಾರೆ. ಸಿಮೊನಾ ಹೆಲೆಪ್ ಮೊದಲ ಸ್ಥಾನದಲ್ಲಿದ್ದಾರೆ.

ಅಗ್ರ 10ರೊಳಗಿನ ಶ್ರೇಯಾಂಕದಲ್ಲಿ ಸ್ಥಾನ ಪಡೆಯದ ದಿಗ್ಗಜ ಆಟಗಾರರು ಲಯಕ್ಕೆ ಮರಳುವತ್ತ ಚಿತ್ತ ನೆಟ್ಟಿದ್ದಾರೆ. ಸ್ವಿಸ್ ಆಟಗಾರ ಸ್ಟಾನ್ ವಾವ್ರಿಂಕಾ, ಸರ್ಬಿಯಾದ ನೊವಾಕ್ ಜೊಕೊವಿಚ್, ಅಮೆರಿಕದ ಸೆರೆನಾ ವಿಲಿಯಮ್ಸ್‌, ರಷ್ಯಾದ ಮರಿಯಾ ಶೆರಪೊವಾ ಅವರು ಪ್ರಮುಖರು.  ಸೆರೆನಾ 25ನೇ ಶ್ರೇಯಾಂಕದಲ್ಲಿ ಆಡುತ್ತಿದ್ದಾರೆ. ಹೋದ ವರ್ಷ ಹೆಣ್ಣುಮಗುವಿಗೆ ಜನ್ಮ ನೀಡಿದ್ದ ಸೆರೆನಾ ಅವರು ಕೆಲವು ಪ್ರಮುಖ ಟೂರ್ನಿಗಳಲ್ಲಿ ಆಡಿರಲಿಲ್ಲ. ಆದ್ದರಿಂದ ಅವರ ಶ್ರೇಯಾಂಕದಲ್ಲಿ ಕುಸಿತವಾಗಿತ್ತು. ಬ್ರಿಟನ್‌ನ ಆಟಗಾರ ಆ್ಯಂಡಿ ಮರ್ರೆ ಗಾಯಗೊಂಡಿದ್ದು ಈ ಬಾರಿ ಆಡುತ್ತಿಲ್ಲ.

ಯುವ ಅಟಗಾರರಾದ ನಿಕ್ ಕಿರ್ಗಿಯೊಸ್, ಲಿಯೊನಾರ್ಡೊ ಮೇಯರ್, ಮೈಲೊಸ್ ರಾನಿಕ್, ಕ್ರಿಸ್ಟಿಯನ್ ಹ್ಯಾರಿಸನ್, ಮಹಿಳೆಯರಲ್ಲಿ ಸ್ಲೋನ್ ಸ್ಟಿಫನ್ಸ್, ಬೆರ್ಬೊರಾ ಸ್ಟ್ರೈಕೋವಾ ಅವರು ಅಚ್ಚರಿಯ ಫಲಿತಾಂಶ ನೀಡುವ ತವಕದಲ್ಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ವಿಲಿಯಮ್ಸ್‌ ಸಹೋದರಿಯರು ಮತ್ತೊಮ್ಮೆ ಪ್ರಾಬಲ್ಯ ಮೆರೆಯುವ ನಿರೀಕ್ಷೆ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !