ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಮೂರನೇ ಸುತ್ತಿಗೆ ಅಜರೆಂಕಾ

ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ ಸ್ಟ್ಯಾನ್‌ ವಾವ್ರಿಂಕಾ
Last Updated 3 ಜುಲೈ 2019, 17:18 IST
ಅಕ್ಷರ ಗಾತ್ರ

ಲಂಡನ್‌: ಅಮೋಘ ಪ್ರದರ್ಶನ ತೋರಿದ ವಿಕ್ಟೋರಿಯಾ ಅಜರೆಂಕಾ ಬುಧವಾರ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು. ಆಸ್ಟ್ರೇಲಿಯಾ ಆಟಗಾರ್ತಿ ಅಜ್ಲಾ ಟಾಮ್ಲ್‌ಜಾನೊವಿಕ್‌ ಅವರನ್ನು 6–2, 6–0 ಸೆಟ್‌ಗಳಿಂದ ಅವರು ಮಣಿಸಿದರು.

ಅಜರೆಂಕಾ 2011 ಹಾಗೂ 2012ರಲ್ಲಿ ಟೂರ್ನಿಯ ಸೆಮಿಫೈನಲ್‌ವರೆಗೂ ತಲುಪಿದ್ದರು. ಮಹಿಳಾ ಸಿಂಗಲ್ಸ್ ಮತ್ತೊಂದು ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಕರೋಲಿನಾ ಪ್ಲಿಸ್ಕೊವ ಅವರು ಪ್ಯುರ್ಟೊ ರಿಕೊದ ಮೋನಿಕಾ ಪ್ಯೂಗ್‌ ವಿರುದ್ಧ 6–0, 6–4 ಸೆಟ್‌ಗಳಿಂದ ಸೋಲಿಸಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು. ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಬೆನೊಯಿಟ್‌ ಪೇರ್‌ ಅವರು ಸರ್ಬಿಯಾದ ಮಿಯೊಮಿರ್‌ ಕೆಸ್ಮಾನೊವಿಕ್‌ ಅವರನ್ನು 7–6 (7/5), 6–4ರಿಂದ ಸೋಲಿಸಿದರು.

ಮಂಗಳವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯಗಳಲ್ಲಿ ಇಟಲಿಯ ಫ್ಯಾಬಿಯೊ ಫಾಗ್ನಿನಿ ಅವರು ಅಮೆರಿಕಾದ ಫ್ರಾನ್ಸಿಸ್‌ ಟೈಫೊಯ್‌ ವಿರುದ್ಧ 5–7, 6–4, 6–3, 4–6, 6–4 ರಿಂದ, ಮರಿನ್‌ ಸಿಲಿಕ್‌ ಅವರು ಆ್ಯಡ್ರಿಯನ್‌ ಮನ್ನಾರಿಯೊ ವಿರುದ್ಧ 7–6 (8/6), 7–6 (7/4), 6–3ರಿಂದ, ರಫೆಲ್‌ ನಡಾಲ್‌ ಅವರು ಯುಚಿ ಸುಗಿತಾ ವಿರುದ್ಧ ಗೆಲುವು ಸಾಧಿಸಿದ್ದರು.

ಮಹಿಳಾ ಸಿಂಗಲ್ಸ್ ಪಂದ್ಯಗಳಲ್ಲಿ ಸೆರೆನಾ ವಿಲಿಯಮ್ಸ್ ಅವರು ಇಟಲಿಯ ಗಿಲಿಯಾ ಗ್ಯಾಟೊ ಮ್ಯಾಂಟಿಸೋನ್‌ ಅವರನ್ನು ಮಣಿಸಿದರೆ, ಕಿಕಿ ಬೆರ್ಟೆನ್ಸ್ ಅವರು ಮ್ಯಾಂಡಿ ಮೆನೆಲ್ಲಾ ವಿರುದ್ಧ ಜಯದ ನಗೆ ಬೀರಿದರು. ಎಲಿಸ್‌ ಮೆರ್ಟೆನ್ಸ್, ಜೊಹಾನ್ನಾ ಕೊಂತಾ ಮತ್ತಿತರರು ಎರಡನೇ ಸುತ್ತು ಪ್ರವೇಶಿಸಿದ್ದರು.

ಪ್ರತಿರೋಧ ತೋರದೆ ಸೋತ ಟಾಮಿಕ್‌:ಟೂರ್ನಿಯಲ್ಲಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರತಿರೋಧ ತೋರದೆ ಕೇವಲ 58 ನಿಮಿಷಗಳಲ್ಲಿ ಸೋತ ಬರ್ನಾರ್ಡ್‌ ಟಾಮಿಕ್‌ ಅವರಿಗೆ ದಂಡ ವಿಧಿಸುವ ಸಾಧ್ಯತೆಯಿದೆ. ಟೂರ್ನಿಯಲ್ಲಿ ಇದು ಎರಡನೇ ಅತೀ ಕಡಿಮೆ ಸಮಯದ ಪರಾಭವ.

ಆಸ್ಟ್ರೇಲಿಯಾದವಿವಾದಿತ ಆಟಗಾರ ಟಾಮಿಕ್‌, ಫ್ರಾನ್ಸ್‌ನ ವಿಲ್ಫ್ರೆಡ್‌ ಸೋಂಗಾ ಅವರಿಗೆ 2–6, 1–6, 4–6 ಸೆಟ್‌ಗಳಿಂದ ಮಣಿದರು. 2004ರಲ್ಲಿ ಕೊಲಂಬಿಯಾದ ಅಲೆಜಾಂಡ್ರೊ ವೆಲ್ಲಾ ಅವರು ರೋಜರ್‌ ಫೆಡರರ್‌ ಎದುರು 54 ನಿಮಿಷಗಳಲ್ಲಿ ಸೋತಿದ್ದರು.

ಎರಡು ವರ್ಷಗಳ ಹಿಂದೆ ಜರ್ಮನಿಯ ಮಿಶ್ಚಾ ಜ್ವೆರೆವ್‌ ವಿರುದ್ಧ ನಡೆದ ಪಂದ್ಯದಲ್ಲಿ ಗಾಯಗೊಂಡಿದ್ದಾಗಿ ಸುಳ್ಳು ಹೇಳಿದ್ದ ಟಾಮಿಕ್‌ಗೆ ದಂಡ ವಿಧಿಸಲಾಗಿತ್ತು. ಈ ಕಾರಣಕ್ಕಾಗಿ ರ‍್ಯಾಕೆಟ್‌ ಪ್ರಾಯೋಜಕ ಕಂಪನಿ ಅವರನ್ನು ಕೈಬಿಟ್ಟಿತ್ತು.

ವಾವ್ರಿಂಕಾ ನಿರ್ಗಮನ: ಈ ಹಿಂದೆ ಎರಡು ಬಾರಿ ಕ್ವಾರ್ಟರ್‌ಫೈನಲ್‌ ತಲುಪಿದ್ದ ಸ್ಟ್ಯಾನ್‌ ವಾವ್ರಿಂಕಾ, ಎರಡನೇ ಸುತ್ತಿನಲ್ಲಿ ಅಮೆರಿಕದ ‘ಲಂಬೂಜಿ’ ರೀಲಿ ಒಪೆಲ್ಕಾ ಅವರಿಗೆ ಐದು ಸೆಟ್‌ಗಳ ಹೋರಾಟದಲ್ಲಿ ಮಣಿದರು.

ಆರು ಆಡಿ 11 ಇಂಚು ಎತ್ತರದ ಆಸಾಮಿ ಒಪೆಲ್ಕಾ 7–5, 3–6, 4–6, 6–4, 8–6 ರಿಂದ 34 ವರ್ಷದ ವಾವ್ರಿಂಕಾ ಅವರನ್ನು ಹಿಮ್ಮೆಟ್ಟಿಸಿದರು. ಎದುರಾಳಿಗಿಂತ 13 ವರ್ಷ ಕಿರಿಯ ಆಟಗಾರ ಒಪೆಲ್ಕಾ 23 ಏಸ್‌ಗಳನ್ನು ಸಿಡಿಸಿದರು.ಬ್ಯಾಕ್‌ಹ್ಯಾಂಡ್‌ ಹೊಡೆತದ ಯತ್ನದಲ್ಲಿ ಓಡುವಾಗ ಲೈನ್‌ ಜಡ್ಜ್‌ಗೆ ಡಿಕ್ಕಿ ಹೊಡೆದಿದ್ದ ವಾವ್ರಿಂಕಾ ನಂತರ ಆಕೆಯನ್ನು ತಬ್ಬಿಕೊಂಡರು. ಅವರ ಈ ನಡೆಗೆ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ‘ಓಡುವಾಗ ಆಕೆಗೆ ಡಿಕ್ಕಿ ಹೊಡೆದೆ. ಆಕೆಗೆ ನೋವಿನ ಜೊತೆ ಅಸಮಾಧಾನವೂ ಆಗಿರಬಹುದು. ಆದ್ದರಿಂದ ಒಮ್ಮೆ ಆಲಿಂಗಿಸಿದೆ’ ಎಂದು ಸ್ವಿಟ್ಸರ್ಲೆಂಡ್‌ನ ಆಟಗಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT