ಮಂಗಳವಾರ, ನವೆಂಬರ್ 12, 2019
28 °C

ಕೋಟಿಕೋಟಿ ಗೆದ್ದರೂ ದಿವಾಳಿ: ಹೂಡಿಕೆ ಮಾಡಿ ನಷ್ಟ ಕಂಡ ಟೆನಿಸ್ ಆಟಗಾರರು

Published:
Updated:

ವಿಶ್ವದ ಅತಿ ಶ್ರೀಮಂತ ಕ್ರೀಡೆಗಳಲ್ಲಿ ಟೆನಿಸ್‌ ಒಂದೆಂಬುದು ತಿಳಿದಿರುವ ಸಂಗತಿ. ಗ್ರ್ಯಾನ್‌ಸ್ಲಾಮ್‌ಗಳಂಥ ದೊಡ್ಡ ಪ್ರಶಸ್ತಿಗಳನ್ನು ಗೆದ್ದಾಗ ಕೋಟ್ಯಂತರ ರೂಪಾಯಿ ಹಣದ ಹೊಳೆಯೇ ಹರಿಯುತ್ತದೆ.

ಇತ್ತೀಚೆಗೆ ಮುಕ್ತಾಯಗೊಂಡ ಡಬ್ಲ್ಯುಟಿಎ ಫೈನಲ್ಸ್‌ ಟೂರ್ನಿಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರು ಜೇಬಿಗಿಳಿಸಿದ್ದು ಸುಮಾರು ₹ 31 ಕೋಟಿ(4.42 ಮಿಲಿಯನ್‌ ಅಮೆರಿಕನ್‌ ಡಾಲರ್‌)! ಇಲ್ಲಿ ಗೆದ್ದ ಹಣದಿಂದ ಸುಂದರ ಬದುಕು ಕಟ್ಟಿಕೊಂಡವರೂ ಇದ್ದಾರೆ. ಜಾಣ್ಮೆಯಿಂದ ವಹಿವಾಟು ನಡೆಸಿ ಉದ್ಯಮದಲ್ಲೂ ಯಶಸ್ಸು ಕಂಡವರಿದ್ದಾರೆ. ಆದರೆ ವಿವಿಧ ವ್ಯವಹಾರಗಳಲ್ಲಿ ಹಣ ತೊಡಗಿಸಿ ದಿವಾಳಿಯಾದವರೂ ಕಾಣಸಿಗುತ್ತಾರೆ. ವಿಂಬಲ್ಡನ್‌, ಯು.ಎಸ್‌.ಓಪನ್‌ನಂಥ ಪ್ರಶಸ್ತಿಗಳನ್ನು ಗೆದ್ದು ಖ್ಯಾತಿಯ ಉತ್ತುಂಗಕ್ಕೇರಿದರೂ, ಬೇರೆ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷಿಸಲು ಹೋಗಿ ದಿವಾಳಿಯಾದ ಮೂವರು ದಿಗ್ಗಜ ಆಟಗಾರರ ವಿವರ ಇಲ್ಲಿದೆ. 

ಬೊರಿಸ್‌ ಬೆಕರ್‌

ಬೆಕರ್‌ ಜರ್ಮನಿಯ ಆಟಗಾರ. 1984-1999ರ ಅವಧಿಯಲ್ಲಿ ವಿಶ್ವ ಟೆನಿಸ್‌ನಲ್ಲಿ ಪಾರಮ್ಯ ಮೆರೆದಿದ್ದ ಅವರು ವೃತ್ತಿ ಜೀವನದಲ್ಲಿ ಮೂರು ವಿಂಬಲ್ಡನ್‌ ಸಿಂಗಲ್ಸ್‌ ಸೇರಿದಂತೆ ಆರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದುಕೊಂಡವರು. ಟೆನಿಸ್‌ ಅಂಕಣದಲ್ಲೇ ಆತ ಗಳಿಸಿದ ಒಟ್ಟು ಆದಾಯ ₹ 173 ಕೋಟಿ! ಐಷಾರಾಮಿ ಜೀವನ ಶೈಲಿ, ಮಣಭಾರ ಸಾಲ ಮತ್ತಿತರ ಕಾರಣಗಳಿಂದ ಬೆಕರ್‌, ಪಾಪರ್‌ ಆದ. ಭಾರೀ ಹಣ ಹೂಡಿ ಶುರು ಮಾಡಿದ ಕೆಲವು ಬಿಸಿನೆಸ್‌ಗಳಲ್ಲಿ ದೊಡ್ಡ ನಷ್ಟ ಅನುಭವಿಸಿದ. 2017ರ ಜೂನ್‌ 21ರಂದು ಲಂಡನ್‌ ಹೈಕೋರ್ಟ್‌ನಲ್ಲಿ ಅವರನ್ನು ದಿವಾಳಿ ಎಂದು ಘೋಷಣೆ ಮಾಡಲಾಗಿತ್ತು. ಕಳೆದ ಜುಲೈನಲ್ಲಿ 51 ವರ್ಷದ ಬೆಕರ್‌ ಅವರು ಗೆದ್ದ ಟ್ರೋಫಿಗಳು ಮತ್ತು ಸ್ಮರಣಿಕೆಗಳ ಆನ್‌ಲೈನ್‌ ಹರಾಜಿನಿಂದ ₹ 6.18 ಕೋಟಿ ಬಂದಿತ್ತು. ಅಮೆರಿಕ ಓಪನ್‌ ಟ್ರೊಫಿಯೇ ₹ 1.36 ಕೋಟಿಗೂ ಹೆಚ್ಚು ಮೌಲ್ಯಕ್ಕೆ ಹರಾಜಾಯಿತು. 

ಗೊರಾನ್‌ ಇವಾನಿಸೆವಿಚ್‌

1988–2004ರವರೆಗೆ ಟೆನಿಸ್‌ನಲ್ಲಿ ಸಕ್ರಿಯರಾಗಿದ್ದ ಕ್ರೊವೇಷ್ಯಾದ ಗೊರಾನ್‌ ಇವಾನಿಸೆವಿಚ್‌ ವಿಂಬಲ್ಡನ್‌ ಚಾಂಪಿಯನ್‌ ಆಗಿದ್ದರು. ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದವರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೂ ಏರಿದ್ದರು. ನಿವೃತ್ತಿಯ ಬಳಿಕ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿಸಿಕೊಂಡರು. ಒಂದು ವರದಿಯ ಪ್ರಕಾರ ಅವರು ಈ ವ್ಯವಹಾರದಲ್ಲಿ ಕಳೆದುಕೊಂಡಿದ್ದು ₹ 100 ಕೋಟಿಗಿಂತಲೂ ಅಧಿಕ ಮೊತ್ತವನ್ನು.

‘ನಾನು ಯಾವುದೇ ರಾಜಕೀಯ ಪಕ್ಷದ ಭಾಗವಾಗಲಿಲ್ಲ. ಲಾಬಿ ಮಾಡಲಿಲ್ಲ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿಸಿಕೊಂಡವರು ದೊಡ್ಡ ತಿಮಿಂಗಿಲಗಳು ಇದ್ದಂತೆ. ಈ ಕ್ಷೇತ್ರ ಪ್ರವೇಶಿಸಿದ್ದು ನನ್ನ ತಪ್ಪು ನಿರ್ಧಾರಗಳಲ್ಲಿ ಒಂದು’ ಎಂದು ಇವಾನಿಸೆವಿಚ್‌ ಸಂದರ್ಶನವೊಂದರಲ್ಲಿ ಅಲವತ್ತುಕೊಂಡಿದ್ದರು.

ಬ್ಯೋನ್‌ ಬೋರ್ಗ್‌ 

ಸಾರ್ವಕಾಲಿಕ ಶ್ರೇಷ್ಠ ಟೆನಿಸ್‌ ಆಟಗಾರರಲ್ಲಿ ಒಬ್ಬರು ಬ್ಯೋನ್‌ ಬೋರ್ಗ್‌. 1973– 1983ರ ಅವಧಿಯಲ್ಲಿ ಆಡಿದ್ದ ಇವರು 11 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ. ಸ್ವೀಡನ್‌ನ ಈ ಆಟಗಾರ 23ನೇ ವಯಸ್ಸಿನಲ್ಲೇ ವರ್ಷಕ್ಕೆ ಅಂದಾಜು ₹ 21 ಕೋಟಿ ಗಳಿಸುತ್ತಿದ್ದ (3 ಮಿಲಿಯನ್‌ ಡಾಲರ್‌). ಬೋರ್ಗ್‌ ಎಷ್ಟು ಸಿರಿವಂತನಾಗಿದ್ದನೆಂದರೆ ಸ್ವೀಡನ್‌ನ ಪೂರ್ವ ಕರಾವಳಿ ಪ್ರದೇಶದಲ್ಲಿ 11 ದ್ವೀಪಪ್ರದೇಶಗಳನ್ನು ಖರೀದಿಸುವಷ್ಟು. ನಿವೃತ್ತಿಯ ಬಳಿಕ ಫ್ಯಾಷನ್‌ ಇಂಡಸ್ಟ್ರಿಯಲ್ಲಿ ಹಣ ತೊಡಗಿಸಿದ ಬೋರ್ಗ್, ಆರಂಭದಲ್ಲೇ ಭಾರಿ ವೈಫಲ್ಯ ಕಂಡ. 80ರ ದಶಕದಲ್ಲಿ ಆತ ಮತ್ತು ಆತನ ಉದ್ಯಮಗಳು ದಿವಾಳಿಯ ಅಂಚಿಗೆ ಬಂದು ತಲುಪಿದ್ದವು. ಬೋರ್ಗ್‌ ಆರ್ಥಿಕ ನಷ್ಟ ತುಂಬಿಸಿಕೊಳ್ಳಲು ತಾನು ಗೆದ್ದ ಟ್ರೋಫಿಗಳನ್ನು ಹರಾಜಿಗಿಟ್ಟ. ಆ ಬಳಿಕ ಆತ ಯಶಸ್ವಿ ಉದ್ಯಮಿಯಾಗಿ ಸೈ ಎನಿಸಿಕೊಂಡಿದ್ದು ಇತಿಹಾಸ.

ಇದನ್ನೂ ಓದಿ: ಟೆನಿಸ್‌ ಲೋಕದಲ್ಲಿ ಮೂವರ ಮೋಡಿ

‘ಕಂಪೆನಿಗೆ ಪ್ರಾಮಾಣಿಕ ಹಾಗೂ ನಿಷ್ಠಾವಂತರಾಗಿರುತ್ತಾರೆ ಎಂದು ತಿಳಿದು ನಾನು ಕೆಲವು ಸ್ನೇಹಿತರನ್ನು ನೇಮಿಸಿದ್ದೆ. ಆದರೆ ಅವರೆಲ್ಲ ನನಗೆ ವಂಚಿಸುತ್ತಿದ್ದರು. ಅವರು ಶ್ರೀಮಂತರಾಗಲು ನನ್ನ ಹೆಸರು ಬಳಸಿಕೊಳ್ಳುತ್ತಿದ್ದರು. ಅವರ ವೈಫಲ್ಯದಿಂದ ಕಂಪೆನಿ ದಿವಾಳಿಯಾಯಿತು’ ಎಂದು ಬೊರ್ನ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಪ್ರತಿಕ್ರಿಯಿಸಿ (+)