ಶನಿವಾರ, ಆಗಸ್ಟ್ 13, 2022
24 °C
ಅಮೆರಿಕ ಓಪನ್‌: ಅಲೆಕ್ಸಾಂಡರ್ ಜ್ವೆರೆವ್‌ಗೆ ಸೋಲುಣಿಸಿದ ಆಸ್ಟ್ರಿಯಾ ಆಟಗಾರ; ಎರಡು ಹೊಸ ದಾಖಲೆ

ಗ್ರ್ಯಾನ್‌ ಸ್ಲಾಂ ಪ್ರಶಸ್ತಿಯ ಹೊಸ ದೊರೆ ಡೊಮಿನಿಕ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್: ಮೂರು ಪ್ರಯತ್ನಗಳಲ್ಲಿ ನಿರಾಸೆ ಅನುಭವಿಸಿದ್ದ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಇಲ್ಲಿನ ಆರ್ಥರ್ ಆ್ಯಶ್ ಅಂಗಣದಲ್ಲಿ ಗೆಲುವಿನ ಗೆಲುವಿನ ನಗೆಸೂಸಿದರು. 2018 ಮತ್ತು 2019ರ ಫ್ರೆಂಚ್ ಓಪನ್ ಹಾಗೂ ಈ ವರ್ಷ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ನಲ್ಲಿ ಫೈನಲ್‌ನಲ್ಲಿ ಸೋತಿದ್ದ ಥೀಮ್ ಈಗ ಅಮೆರಿಕ ಓಪನ್ ಟೂರ್ನಿಯ ಪುರುಷರ ವಿಭಾಗದ ಚಾಂಪಿಯನ್ ಆದರು. ಈ ಮೂಲಕ ಮೊದಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡ ಸಂಭ್ರಮದ ಅಲೆಯಲ್ಲಿ ಮಿಂದರು. 

ಭಾನುವಾರ ತಡರಾತ್ರಿ (ಭಾರತೀಯ ಕಾಲಮಾನ) ನಡೆದಿದ್ದ ಜಿದ್ದಾಜಿದ್ದಿಯ ಫೈನಲ್ ಪಂದ್ಯದಲ್ಲಿ ಥೀಮ್, ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಮಣಿಸಿದರು. ನಾಲ್ಕು ತಾಸು ಎರಡು ನಿಮಿಷಗಳ ರೋಚಕ ಹಣಾಹಣಿಯಲ್ಲಿ ಮೊದಲ ಎರಡು ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಿದ ಥೀಮ್ 2-6, 4-6, 6-4, 6-3, 7-6 (8/6)ರಲ್ಲಿ ಗೆಲುವು ಸಾಧಿಸಿದರು. ಪಂದ್ಯ ಎರಡು ದಾಖಲೆಗಳಿಗೆ ಸಾಕ್ಷಿಯಾಯಿತು. ಅಮೆರಿಕ ಓಪನ್ ಫೈನಲ್‌ನಲ್ಲಿ ಮೊದಲ ಎರಡು ಸೆಟ್‌ಗಳ ಸೋಲಿನಿಂದ ಚೇತರಿಸಿಕೊಂಡು ಪಂದ್ಯ ಗೆದ್ದಿರುವುದು ಮತ್ತು ಟೈಬ್ರೇಕರ್‌ನಲ್ಲಿ ಚಾಂಪಿಯನ್‌ಷಿಪ್ ಪಾಯಿಂಟ್ ಗಳಿಸಿದ್ದು ಇದೇ ಮೊದಲು. 

ಟೂರ್ನಿಯಲ್ಲಿ 27 ವರ್ಷದ ಥೀಮ್‌ಗೆ ಎರಡನೇ ಶ್ರೇಯಾಂಕ ಮತ್ತು ಜ್ವೆರೆವ್‌ಗೆ ಐದನೇ ಶ್ರೇಯಾಂಕ ನೀಡಲಾಗಿತ್ತು. ಇಬ್ಬರೂ ಮೊದಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿದಿದ್ದರು. 

ಅಮೆರಿಕ ಓಪನ್‌ನಲ್ಲಿ 2014ರ ನಂತರ ಮತ್ತು ಒಟ್ಟಾರೆ ಟೂರ್ನಿಗಳಲ್ಲಿ 2016ರ ನಂತರ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗೆ ಹೊಸ ಒಡೆಯ ಥೀಮ್ ಮೂಲಕ ಉದಯಿಸಿದ್ದಾರೆ. ಸರ್ಬಿಯಾದ ನೊವಾಕ್ ಜೊಕೊವಿಚ್, ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಅವರದೇ‌ ಈ ಟೂರ್ನಿಗಳಲ್ಲಿ ಆಧಿಪತ್ಯವಿತ್ತು. ಅಮೆರಿಕ ಓಪನ್‌ನಲ್ಲಿ ಕ್ರೊವೇಷ್ಯಾದ ಮರಿನ್ ಸಿಲಿಕ್ ಮತ್ತು ಇತರ ಟೂರ್ನಿಗಳಲ್ಲಿ ಸ್ಟಾನ್ ವಾವ್ರಿಂಕಾ ಈ ತ್ರಿವಳಿಗಳ ಹೊರತಾಗಿ ಕೊನೆಯದಾಗಿ ಪ್ರಶಸ್ತಿ ಗೆದ್ದಿದ್ದರು. 

ಆರಂಭದಲ್ಲಿ ಜ್ವೆರೆವ್ ಭರ್ಜರಿ ಆಟ 

23 ವರ್ಷದ ಜ್ವೆರೆವ್ ಆರಂಭದಲ್ಲಿ ಅಮೋಘ ಆಟವಾಡಿ ಎದುರಾಳಿಯನ್ನು ಕಂಗೆಡಿಸಿದರು. ಮೊದಲ ಸೆಟ್‌ನಲ್ಲಿ ‌ನಾಲ್ಕು ಏಸ್ ಸಿಡಿಸಿದ ಅವರು ಅರ್ಧ ತಾಸಿನಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ನೀರಸವಾಗಿ ಆಡಿದ ಥೀಮ್ ಡಬಲ್ ಫಾಲ್ಟ್‌ಗಳ ಮೂಲಕ ಜ್ವೆರೆವ್ ಅವರ ಹಾದಿಯನ್ನು ಸುಗಮಗೊಳಿಸಿದರು. ಮೂರು ಮತ್ತು ಏಳನೇ ಗೇಮ್‌ಗಳಲ್ಲಿ ಎರಡು ಬಾರಿ ಅವರ ಸರ್ವ್‌ಗಳನ್ನು ಜ್ವೆರೆವ್ ಮುರಿದರು. 

ಎರಡನೇ ಸೆಟ್‌ನಲ್ಲಿ 5–1ರ ಮುನ್ನಡೆ ಗಳಿಸಿದ್ದ ಜ್ವೆರೆವ್ ಮೂರು ಬಾರಿ ಸೆಟ್‌ಪಾಯಿಂಟ್‌ಗಳನ್ನು ಕಳೆದುಕೊಂಡರು. ಆದರೂ ಎದೆಗುಂದದೆ ಮುನ್ನುಗ್ಗಿ ಸೆಟ್ ಗೆದ್ದುಕೊಂಡರು. 

ಮೂರನೇ ಸೆಟ್‌ಗೆ ತಲುಪುತ್ತಿದ್ದಂತೆ ಪಂದ್ಯದ ಗತಿ ಬದಲಾಯಿತು. ಜ್ವೆರೆವ್‌ ತಮ್ಮ ಸರ್ವ್‌ಗಳಲ್ಲಿ ಮುಗ್ಗರಿಸಿದರು. ಫೋರ್ ಹ್ಯಾಂಡ್ ಹೊಡೆತಗಳಲ್ಲಿ ಅವರಿಗಿರುವ ದೌರ್ಬಲ್ಯ ಹೆಚ್ಚು ಕಾಡಿತು. ‌ಮೂರು ಮತ್ತು ನಾಲ್ಕನೇ ಸೆಟ್‌ನಲ್ಲಿ ಹಿನ್ನಡೆ ಕಂಡರೂ ಐದನೇ ಸೆಟ್‌ನಲ್ಲಿ ಜ್ವೆರೆವ್ ಚೇತರಿಸಿಕೊಂಡರು.

ಒಂದು ಹಂತದಲ್ಲಿ 5–3ರ ಮುನ್ನಡೆಯಲ್ಲಿದ್ದ ಅವರು ಚಾಂಪಿಯನ್‌ಷಿಪ್‌ಗಾಗಿ ಸರ್ವ್ ಮಾಡಲು ಸಜ್ಜಾಗಿದ್ದರು. ಆದರೆ ಕೆಚ್ಚೆದೆಯ ಆಟದ ಮೂಲಕ ಅವರ ಕನಸನ್ನು ನುಚ್ಚುನೂರು ಮಾಡಿದ ಥೀಮ್ 6–5ರ ಮುನ್ನಡೆ ಗಳಿಸಿ ತಿರುಗೇಟು ನೀಡಿದರು. ಅವರಿಗೂ ಸುಲಭವಾಗಿ ಗೆಲ್ಲಲು ಆಗಲಿಲ್ಲ. ಈಗಾಗಿ ಪಂದ್ಯ ಟೈಬ್ರೇಕರ್‌ಗೆ ಸಾಗಿತು. ಅಲ್ಲಿ ಥೀಮ್ ಮೇಲುಗೈ ಸಾಧಿಸಿದರು. ಬ್ಯಾಕ್‌ಹ್ಯಾಂಡ್‌ನಲ್ಲಿ ಜ್ವೆರೆವ್ ಹೊಡೆದ ಚೆಂಡು ’ವೈಡ್‌‘ ಆಗುತ್ತಿದ್ದಂತೆ ಥೀಮ್‌ ಸಂಭ್ರಮದ ಅಲೆಯಲ್ಲಿ ತೇಲಿದರು. ಪಂದ್ಯದ ನಂತರ ಮಾತನಾಡಿದ ಜ್ವೆರೆವ್ ಕಣ್ಣೀರಿನಲ್ಲಿ ಮಿಂದರು. 

’ಅಭಿನಂದನೆ ನನಗಷ್ಟೇ ಅಲ್ಲ, ಜ್ವೆರೆವ್‌ಗೂ ಸಲ್ಲಬೇಕು. ಈ ಪ್ರಶಸ್ತಿಗೆ ಅವರೂ ಅರ್ಹರಾಗಿದ್ದಾರೆ. ಅವರು ಅಷ್ಟು ಸೊಗಸಾದ ಆಟ ಪ್ರದರ್ಶಿಸಿದ್ದಾರೆ. ಎಂದು ಪ್ರಶಸ್ತಿ ಗೆದ್ದ ಆಸ್ಟ್ರಿಯಾ ಆಟಗಾರ ಡೊಮಿನಿಕ್ ಥೀಮ್ ಪ್ರತಿಕ್ರಿಯಿಸಿದರು.

ಸವಾಲಿನ ಪಂದ್ಯವಾಗಿತ್ತು. ಎರಡು ಸೆಟ್‌ಗಳಲ್ಲಿ ಗೆದ್ದು ಟೈಬ್ರೇಕರ್‌ನಲ್ಲಿ ಪಂದ್ಯ ಬಿಟ್ಟುಕೊಟ್ಟ ದು:ಖ ಬಹಳ ಕಾಲ ಕಾಡಲಿದೆ. ಆದರೂ ಮುಂದೊಂದು ದಿನ ನಾನು ಗೆದ್ದೇ ಗೆಲ್ಲುವೆ ಎಂದು ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು