ಒಲಿಂಪಿಕ್‌ ಅರ್ಹತೆ ಮುಖ್ಯ ಗುರಿ

ಗುರುವಾರ , ಜೂನ್ 20, 2019
26 °C
ಅಂತರರಾಷ್ಟ್ರೀಯ ಮಟ್ಟದ ಈಜುಪಟು ವೀರ್‌ಧವಳ್‌ ಖಾಡೆ ಅಭಿಮತ

ಒಲಿಂಪಿಕ್‌ ಅರ್ಹತೆ ಮುಖ್ಯ ಗುರಿ

Published:
Updated:
Prajavani

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಮುಖ್ಯ ಗುರಿಯಾಗಿದೆ ಎಂದು ಅಂತರರಾಷ್ಟ್ರೀಯ ಈಜುಪಟು ವೀರ್‌ ಧವಳ್‌ ಖಾಡೆ ಹೇಳಿದರು.

ನಗರದಲ್ಲಿ ಸ್ಪಿಡೋ ಸಂಸ್ಥೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. 2020ರಲ್ಲಿ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಉತ್ತಮ ತಯಾರಿ ನಡೆಸುತ್ತಿದ್ದು, ಪ್ರವೇಶ ಪಡೆಯುವ ವಿಶ್ವಾಸವಿದೆ ಎಂದರು. ದಕ್ಷಿಣ ಕೊರಿಯಾದ ಗ್ಯಾಂಗ್‌ಜುನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ಗೆ ಪಾಲ್ಗೊಳ್ಳುತ್ತಿದ್ದು ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುತ್ತೇನೆ ಎಂದರು.

ದೇಶದಲ್ಲಿ ಇತರ ಕ್ರೀಡೆಗಳಿಗೆ ದೊರೆಯುವಷ್ಟು ಬೆಂಬಲ ಈಜುಸ್ಪರ್ಧೆಗೆ ದೊರೆಯಬೇಕಾಗಿದೆ. ಕ್ರೀಡೆಗೆ ಪೂರಕವಾದ ಸಹಾಯ ದೊರೆತರೆ ಭಾರತದ ಈಜುಪಟುಗಳು ವಿಶ್ವಮಟ್ಟದಲ್ಲಿ ಮಿನುಗಬಲ್ಲರು ಎಂದು ಇದೇ ವೇಳೆ ಖಾಡೆ ನುಡಿದರು.

ಕಠಿಣ ತರಬೇತಿಗಿಂತ ಸ್ವಸಾಮರ್ಥ್ಯದ ಮೇಲೆ ವಿಶ್ವಾಸವಿಡುವುದರಿಂದ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎಲ್ಲರೂ ಸಾಗಿದ ದಾರಿಯಲ್ಲೇ ಸಾಗಬೇಕೆಂತಿಲ್ಲ. ಭಿನ್ನವಾಗಿ ಯೋಚಿಸಿ ನಮ್ಮದೇ ಮಾರ್ಗದಲ್ಲಿ ಸಾಗಿದರೆ ಯಶಸ್ಸಿನ ಶಿಖರ ಮುಟ್ಟಲು ಸಾಧ್ಯವಾಗುತ್ತದೆ ಎಂದು ಯುವ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ಈಜುಪಟುಗಳು ತೆಗೆದುಕೊಳ್ಳಬೇಕಾದ ತರಬೇತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಖಾಡೆ, ಖ್ಯಾತ ಈಜುಪಟು ಮೈಕೆಲ್‌ ಫೆಲ್ಫ್ಸ್‌ ತೆಗೆದುಕೊಳ್ಳುವಷ್ಟು ತರಬೇತಿ ನಾವು ಪಡೆಯಲು ಸಾಧ್ಯವಾಗದಿದ್ದರೂ ಕಠಿಣ ಪರಿಶ್ರಮದ ಮೂಲಕ ಸಾಧನೆಯನ್ನು ಸಾಧ್ಯವಾಗಿಸಬೇಕು. ಸೋಮಾರಿತನದಿಂದ ದೂರವಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಖಾಡೆ ಹೇಳಿದರು.

ಈಜು ಸ್ಪರ್ಧೆಯ ಕುರಿತು ಆಸಕ್ತಿ ಬೆಳೆಸಿಕೊಂಡ ಕುರಿತು ಅಭಿಪ್ರಾಯ ಹಂಚಿಕೊಂಡ ಅವರು, ತಮ್ಮ ತಂದೆಗೆ ಕ್ರೀಡೆಯ ಕುರಿತು ಇದ್ದ ಅಭಿಮಾನ, ಹುಚ್ಚು ತನ್ನನ್ನು ಈ ಸ್ಪರ್ಧೆಗೆ ಅಣಿಯಾಗಲು ಕಾರಣವಾಯಿತು. ಈಜನ್ನು ಒಂದು ಸ್ಪರ್ಧೆಯಾಗಿ ಮಾತ್ರವಲ್ಲದೆ ಜೀವ ಉಳಿಸಿಕೊಳ್ಳುವ ಕಲೆಯಾಗಿಯೂ ಕಾಣಬೇಕಿದೆ ಎಂದರು.

27 ವರ್ಷ ವಯಸ್ಸಿನ ಖಾಡೆ 2008ರ ಬೀಜಿಂಗ್‌ ಒಲಿಂಪಿಕ್ಸ್‌ನ 50, 100 ಹಾಗೂ 200 ಮೀ. ಫ್ರಿಸ್ಟೈಲ್‌ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.ಅತೀ ಚಿಕ್ಕ ವಯಸ್ಸಿನಲ್ಲಿ (16) ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಮೊದಲ ಭಾರತೀಯ ಈಜುಪಟು ಎಂಬ ಖ್ಯಾತಿ ಅವರಿಗಿದೆ. ಈ ಮೂರು ವಿಭಾಗಗಳ ಫ್ರೀಸ್ಟೈಲ್‌ನಲ್ಲಿ ಅವರು (50, 100 ಹಾಗೂ 200 ಮೀ.)2006ರಲ್ಲಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದಾರೆ. 2010ರ ಏಷ್ಯನ್‌ ಗೇಮ್ಸ್‌ನ 50 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಅವರು ಕಂಚಿನ ಪದಕ ಜಯಿಸಿದ್ದಾರೆ. ಇನ್ನು ಹಲವು ಸಾಧನೆಗಳು ಅವರ ಹೆಸರಿನಲ್ಲಿವೆ. ಸದ್ಯ ಅವರು ಮಹಾರಾಷ್ಟ್ರದ ತಾಲೂಕು ಒಂದರಲ್ಲಿ ತಹಶೀಲ್ದಾರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !