ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಚೆಂಡಿನಂತೆ ಭಾರವಾಗಿದೆ: ವಿರಾಟ್

Last Updated 22 ನವೆಂಬರ್ 2019, 10:26 IST
ಅಕ್ಷರ ಗಾತ್ರ

ಕೋಲ್ಕತ್ತ: ನಸುಗೆಂಪು ಬಣ್ಣದ ಚೆಂಡು ಹಾಕಿ ಆಟದಲ್ಲಿ ಬಳಸುವ ಚೆಂಡಿನಂತೆ ಭಾರ ಎನಿಸುತ್ತದೆ. ಅದರ ಬಣ್ಣ ಮತ್ತು ಗಟ್ಟಿತನವು ಫೀಲ್ಡರ್‌ಗಳಿಗೆ ಸವಾಲಾಗಲಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ಧಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಂಪು ಚೆಂಡಿನಲ್ಲಿ ಇಷ್ಟು ವರ್ಷಗಳಿಂದ ಆಡುತ್ತಿದ್ದೇವೆ. ಅದಕ್ಕೆ ಹೋಲಿಕೆ ಮಾಡಿದರೆ ನಸುಗೆಂಪು ಚೆಂಡು ತುಸು ಭಾರ ಹೆಚ್ಚು ಎನಿಸುತ್ತದೆ. ಸ್ಪಿಪ್ ಫೀಲ್ಡಿಂಗ್ ಅಭ್ಯಾಸ ಮಾಡುವಾಗ ಬ್ಯಾಟ್‌ಗೆ ಅಪ್ಪಳಿಸಿ ಬರುವ ಚೆಂಡು ಹೆಚ್ಚು ವೇಗ ಮತ್ತು ಗಟ್ಟಿಯಿಂದ ಕೂಡಿರುತ್ತದೆ. ಅಲ್ಲದೇ ಚೆಂಡನ್ನು ಥ್ರೋ ಮಾಡುವಾಗಲೂ ಹೆಚ್ಚುವರಿ ಶಕ್ತಿ ವಿನಿಯೋಗಿಸಬೇಕು. ಚೆಂಡಿಗೆ ಇರುವ ಹೆಚ್ಚಿನ ಹೊಳಪಿನಿಂದಾಗಿ ಸ್ವಲ್ಪ ಒರಟುತನ ಜಾಸ್ತಿ ಇರಬಹುದು’ ಎಂದರು.

ಭಾರತ ತಂಡವು ಇದೇ ಮೊದಲ ಬಾರಿ ಎಸ್‌.ಜಿ. ಪಿಂಕ್ ಬಾಲ್‌ನಲ್ಲಿ ಆಡಲಿದೆ.

‘ಹಗಲು ಹೊತ್ತಿನಲ್ಲಿ ಎತ್ತರದಲ್ಲಿ ಬರುವ ಕ್ಯಾಚ್‌ಗಳನ್ನು ಪಡೆಯುವುದು ತುಸು ಕಷ್ಟವಾಗಬಹುದು. ಕೆಂಪು ಮತ್ತು ಬಿಳಿ ಚೆಂಡಿನ ಚಲನೆಯನ್ನು ನೋಡಿದಾಗ ಕ್ಯಾಚ್‌ ನಮ್ಮ ಬಳಿ ಬರುವ ಒಂದು ಅಂದಾಜು ತಿಳಿಯುತ್ತದೆ. ಆದರೆ, ಈ ಚೆಂಡಿನಲ್ಲಿ ಆ ತರಹದ ಅಂದಾಜು ಸಿಗುವುದಿಲ್ಲ. ಸಂಪೂರ್ಣವಾಗಿ ಅದರ ಮೇಲೆ ಗಮನ ಇಡದಿದ್ದರೆ, ಕ್ಯಾಚ್ ಕೈಜಾರುವುದು ಖಚಿತ’ ಎಂದರು.

‘ಅಂಗಳದಲ್ಲಿ ಬಿದ್ದ ಇಬ್ಬನಿಯನ್ನು ಒರೆಸಿಹಾಕಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದು ಖಚಿತವಿಲ್ಲ. ಈ ಕುರಿತು ರೆಫರಿ ಕೂಡ ಚರ್ಚಿಸಿದ್ದೇವೆ. ಅವರು ಕೂಡ ಈ ಬಗ್ಗೆ ಇನ್ನೂ ಪ್ರಯೋಗ ನಡೆಸುತ್ತಿದೆ’ ಎಂದರು.

‘ಆಸ್ಟ್ರೇಲಿಯಾದಲ್ಲಿಯೂ ನಾವು ಪಿಂಕ್ ಬಾಲ್ ಟೆಸ್ಟ್ ಆಡಲು ಸಿದ್ಧವಾಗಿದ್ದೇವೆ. ಆದರೆ, ಒಂದಾದರೂ ಪೂರ್ವಾಭ್ಯಾಸ ಪಂದ್ಯ ಇರಬೇಕು’ ಎಂದು ಕೊಹ್ಲಿ ಹೇಳಿದರು.

‘ಕಡಿಮೆ ಅವಧಿಯಲ್ಲಿ ಸಿದ್ಧತೆ ಮಾಡಿಕೊಳ್ಳುವುದು ಕಷ್ಟ. ಆದರೂ ನಮ್ಮದೇ ತವರಿನಲ್ಲಿ ಪಿಂಕ್ ಬಾಲ್ ಆಟದ ಅನುಭವ ಪಡೆಯುವುದು ಉತ್ತಮವಾಗಿದೆ. ಇದರಿಂದ ಮುಂದೆ ನೆರವಾಗುತ್ತದೆ’ ಎಂದರು.

ಈ ಪಂದ್ಯದ ತಯಾರಿ ತರಾತುರಿಯಾಯಿತು. ಇದಕ್ಕೂ ಮುನ್ನ ಹಗಲು–ರಾತ್ರಿಯ ಅಭ್ಯಾಸ ಪಂದ್ಯ ಆಯೋಜಿಸಿದ್ದರೆ ಚೆನ್ನಾಗಿರುತ್ತಿತ್ತು. ಇರಲಿ ಇದೊಂದು ಹೊಸ ಅನುಭವ ಎಂದುಬಾಂಗ್ಲಾದೇಶ ತಂಡದ ನಾಯಕ ಮೊಮಿನುಲ್ ಹಕ್ ಹೇಳಿದರು.

ಭಾರತ ತಂಡದಲ್ಲಿ ನಾಲ್ವರು ಅನುಭವಿಗಳು

ಭಾರತ ತಂಡದಲ್ಲಿ ಸದ್ಯ ಇರುವ ನಾಲ್ವರು ಆಟಗಾರರಿಗೆ ಪಿಂಕ್ ಬಾಲ್‌ನಲ್ಲಿ ಕ್ರಿಕೆಟ್ ಆಡಿದ ಅನುಭವ ಇದೆ. ಹೋದ ವರ್ಷ ಆಯೋಜಿಸಲಾಗಿದ್ದ ದುಲೀಪ್ ಟ್ರೋಫಿ ಟೂರ್ನಿಯ ಹಗಲು–ರಾತ್ರಿ ಪಂದ್ಯದಲ್ಲಿ ಕನ್ನಡಿಗ ಮಯಂಕ್ ಅಗರವಾಲ್, ಮಧ್ಯಮವೇಗಿ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ಆಡಿದ್ದರು.

ಈ ಪಂದ್ಯದಲ್ಲಿ ಮಯಂಕ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಯಲಿದ್ದಾರೆ. ಇಶಾಂತ್ ಮತ್ತು ಶಮಿ ಬೌಲಿಂಗ್ ವಿಭಾಗದ ಹೊಣೆ ನಿಭಾಯಿಸುವರು. ಕುಲದೀಪ್ ಯಾದವ್ ಕಣಕ್ಕಿಳಿಯುವ ಅವಕಾಶ ಪಡೆಯುವರೇ ಕಾದು ನೊಡಬೇಕು.

ನಸುಗೆಂಪು ಚೆಂಡಿನ ಬಳಕೆಯೇ ಏಕೆ?

ನಿಗದಿಯ ಓವರ್‌ಗಳ ಹಗಲು –ರಾತ್ರಿ ಪಂದ್ಯಗಳಲ್ಲಿ ಬಿಳಿ ಚೆಂಡು ಬಳಸಲಾಗುತ್ತದೆ. ಆದರೆ ಟೆಸ್ಟ್ ಪಂದ್ಯದಲ್ಲಿ ನಸುಗೆಂಪು ಚೆಂಡನ್ನೇ ಏಕೆ ಬಳಸಬೇಕು?

ರಾತ್ರಿಯ ಹೊನಲು ಬೆಳಕಿನ ಟೆಸ್ಟ್‌ನಲ್ಲಿ ಆಟಗಾರರು ಬಿಳಿ ಬಣ್ಣದ ಪೋಷಾಕು ಧರಿಸಿರುತ್ತಾರೆ. ಆದ್ದರಿಂದ ಬಿಳಿ ಚೆಂಡನ್ನು ಬಳಸಲು ಸಾಧ್ಯವಿಲ್ಲ. ಬಿಳಿ ಚೆಂಡು ಕೆಂಪು ಚೆಂಡಿನಷ್ಟು ದೀರ್ಘ ಬಾಳಿಕೆಯೂ ಬರುವುದಿಲ್ಲ. ಟೆಸ್ಟ್ ಪಂದ್ಯಗಳಲ್ಲಿ ಆಡುವ ಕೆಂಪು ಚೆಂಡನ್ನು 80 ಓವರ್‌ಗಳಿಗೆ ಬದಲಿಸಲಾಗುತ್ತದೆ. ಆದ್ದರಿಂದ ಬಿಳಿ ಪೋಷಾಕು ಮತ್ತು ಹೊನಲು ಬೆಳಕು ಎರಡರಲ್ಲೂ ದೃಷ್ಟಿಗೆ ಬೀಳುವ ಮತ್ತು ಬಾಳಿಕೆ ಬರುವ ನಸುಗೆಂಪು ಚೆಂಡನ್ನು ಬಳಸಲು ನಿರ್ಧರಿಸಲಾಯಿತು. ಇದಕ್ಕಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಬಹಳಷ್ಟು ಸಂಶೋಧನೆಗಳನ್ನೂ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT