ಮಂಗಳವಾರ, ಡಿಸೆಂಬರ್ 1, 2020
25 °C
ಭಾರತ– ಆಸ್ಟ್ರೇಲಿಯಾ ನಡುವಣ ಕ್ರಿಕೆಟ್ ಸರಣಿಗಳಿಗೆ ಸಿದ್ಧತೆ

ಬೂಮ್ರಾ, ಶಮಿ ಟೆಸ್ಟ್‌ ಸಿದ್ಧತೆಗೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಅನುಭವಿ ಮಧ್ಯಮವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಅವರನ್ನು ಟೆಸ್ಟ್ ಸರಣಿಗೆ ಸಿದ್ಧಗೊಳಿಸಲು ಹೆಚ್ಚು ಒತ್ತು ನೀಡಲಾಗುತ್ತಿದೆ. ಆದ್ದರಿಂದ ಅವರಿಗೆ  ಸೀಮಿತ ಓವರ್‌ಗಳ ಸರಣಿಗಳಲ್ಲಿ ಕಡಿಮೆ ಅವಕಾಶ ನೀಡುವ ಸಾಧ್ಯತೆ ಇದೆ.

ನವೆಂಬರ್ 27ರಿಂದ ಡಿಸೆಂಬರ್ 8ರವರೆಗೆ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳು ನಡೆಯಲಿವೆ. ಡಿಸೆಂಬರ್ 17ರಂದು ನಾಲ್ಕು ಟೆಸ್ಟ್‌ಗಳ ಸರಣಿ ಆರಂಭವಾಗಲಿದೆ.

ಕೇವಲ 12 ದಿನಗಳ ಅಂತರದಲ್ಲಿ ಆರು ಪಂದ್ಯಗಳನ್ನು ಶಮಿ ಮತ್ತು ಬೂಮ್ರಾ  ಆಡಿದರೆ ದಣಿಯುವ ಮತ್ತು ಗಾಯಗೊಳ್ಳುವ ಸಾಧ್ಯತೆ ಹೆಚ್ಚಿದೆ.  ಆದ್ದರಿಂದ ಸೀಮಿತ ಓವರ್‌ಗಳಲ್ಲಿ ಆದಷ್ಟು ಕಡಿಮೆ ಅವಕಾಶ ನೀಡುವತ್ತ ಚಿಂತನೆ ನಡೆಸಲಾಗುತ್ತಿದೆ.  ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ನಾಯಕ ವಿರಾಟ್ ಕೊಹ್ಲಿ ಈ ಕುರಿತು ಯೋಜನೆ ಸಿದ್ಧಗೊಳಿಸಿದ್ದಾರೆನ್ನಲಾಗಿದೆ.

ಅನುಭವಿ ಮಧ್ಯಮವೇಗಿ ಇಶಾಂತ್ ಶರ್ಮಾ ಗಾಯದಿಂದ ಚೇತರಿಸಿಕೊಂಡು ಟೆಸ್ಟ್ ಸರಣಿಗೆ ಮರಳದಿದ್ದರೆ ಬೂಮ್ರಾ ಮತ್ತು ಶಮಿ ಮೇಲೆ ಹೆಚ್ಚು ಕಾರ್ಯದ ಒತ್ತಡ ಬೀಳುತ್ತದೆ. ಆದ್ದರಿಂದ ಏಕದಿನ ಕ್ರಿಕೆಟ್‌   ಮತ್ತು ಟಿ20 ಸರಣಿಗಳಲ್ಲಿ ತಲಾ ಒಂದು ಪಂದ್ಯದಲ್ಲಿ ಕಣಕ್ಕಿಳಿಸಿದರೆ ಅವರಿಗೂ ಅಭ್ಯಾಸವಾಗುತ್ತದೆ. ಡಿಸೆಂಬರ್ 6 ರಿಂದ 8ರವರೆಗೆ ಟೆಸ್ಟ್ ಪೂರ್ವಿಸಿದ್ಧತೆಗಾಗಿ ನಡೆಯುವ ಅಭ್ಯಾಸ ಪಂದ್ಯದಲ್ಲಿಯೂ ಅವರು ಕೆಂಪು ಚೆಂಡಿನ ಬೌಲಿಂಗ್ ಮಾಡಿ ಸಿದ್ಧರಾಗಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ನೆಟ್ಸ್‌ನಲ್ಲಿ ಶಮಿ ಮತ್ತು ಬೂಮ್ರಾ ಅವರು ನಸುಗೆಂಪು ಮತ್ತು ಕೆಂಪು ಚೆಂಡುಗಳಲ್ಲಿಯೇ ಹೆಚ್ಚು ಅಭ್ಯಾಸ ನಡೆಸುತ್ತಿದ್ದಾರೆ. ಆದ್ದರಿಂದ ತಂಡದಲ್ಲಿರುವ ಯುವ ಬೌಲರ್‌ಗಳಾದ ದೀಪಕ್ ಚಾಹರ್, ನವದೀಪ್ ಸೈನಿ ಮತ್ತು ತಮಿಳುನಾಡಿನ ತಂಗರಸು ನಟರಾಜನ್ ಅವರಿಗೆ ಏಕದಿನ ಮತ್ತು ಟಿ20 ಸರಣಿಗಳಲ್ಲಿ ಅವಕಾಶ ಲಭಿಸುವ ಸಾಧ್ಯತೆ ಇದೆ.

ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಾಹಲ್, ರವೀಂದ್ರ ಜಡೇಜ ಮತ್ತು ವಾಷಿಂಗ್ಟನ್ ಸುಂದರ್ ಇದ್ದಾರೆ. ಜಡೇಜ ಟೆಸ್ಟ್‌ ನಲ್ಲಿಯೂ ಕಣಕ್ಕಿಳಿಯುವುದು ಬಹುತೇಕ ಖಚಿತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು