ಸೋಮವಾರ, ಮೇ 17, 2021
23 °C
ಮಹಿಳೆಯರ ವಿಶ್ವಕಪ್ ಹಾಕಿ ಟೂರ್ನಿ: ವಿಶ್ವ ಹಾಕಿ ಲೀಗ್ ಪಂದ್ಯದ ಸೋಲಿಗೆ ಸೇಡು ತೀರಿಸುವ ಬಯಕೆ

ಐರ್ಲೆಂಡ್‌ ಸವಾಲು ಮೀರುವುದೇ ಭಾರತ?

ಪಿಟಿಐ Updated:

ಅಕ್ಷರ ಗಾತ್ರ : | |

ಐರ್ಲೆಂಡ್‌ ಎದುರಿನ ಪಂದ್ಯದಲ್ಲಿ ಭಾರತ ತಂಡದ ನಾಯಕಿ ರಾಣಿ ರಾಂಪಾಲ್‌ ಗೆಲುವಿನ ವಿಶ್ವಾಸದಲ್ಲಿದ್ದಾರೆ ಪಿಟಿಐ ಚಿತ್ರ

ಲಂಡನ್‌: ಮೊದಲ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಿನಲ್ಲಿ ಎಡವಿದ ಭಾರತ ತಂಡ ಮಹಿಳೆಯರ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಜಯದ ದಾಹದೊಂದಿಗೆ ಗುರುವಾರ ಕಣಕ್ಕೆ ಇಳಿಯಲಿದೆ. ‘ಬಿ’ ಗುಂಪಿನ ಎರಡನೇ ಪಂದ್ಯದಲ್ಲಿ ರಾಣಿ ರಾಂಪಾಲ್ ಬಳಗದವರು ಐರ್ಲೆಂಡ್ ತಂಡದ ಸವಾಲು ಎದುರಿಸಲಿದೆ.

ಕಳೆದ ವರ್ಷ ಹಾಕಿ ವಿಶ್ವ ಲೀಗ್‌ನಲ್ಲಿ ಐರ್ಲೆಂಡ್‌ ವಿರುದ್ಧ ವಿಶ್ವಾಸದಿಂದಲೇ ಕಣಕ್ಕೆ ಇಳಿದಿದ್ದ ಭಾರತ ಕೊನೆಯ ಹಂತದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಬಿಟ್ಟುಕೊಟ್ಟು ಪಂದ್ಯವನ್ನು 1–2ರಿಂದ ಕೈಚೆಲ್ಲಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತದ ಮಹಿಳೆಯರು ಕಾಯುತ್ತಿದ್ದಾರೆ.

ಆದರೆ ಐರ್ಲೆಂಡ್‌ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಆ ತಂಡ ಅಮೆರಿಕವನ್ನು 3–1 ಗೋಲುಗಳಿಂದ ಮಣಿಸಿತ್ತು. ಗುರುವಾರದ ಪಂದ್ಯದಲ್ಲೂ ಗೆದ್ದರೆ ತಂಡ ಸುಲಭವಾಗಿ ನಾಕೌಟ್‌ ಹಂತ ತಲುಪಬಹುದು. ಹೀಗಾಗಿ ತಂಡ ಹುಮ್ಮಸ್ಸಿನಲ್ಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಜೊತೆ ಡ್ರಾ ಸಾಧಿಸಿರುವ ಭಾರತ ಗುರುವಾರದ ಪಂದ್ಯದಲ್ಲಿ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಲಿದೆ. ಈ ಪಂದ್ಯದಲ್ಲಿ ಸೋತರೆ ನಾಕೌಟ್ ಹಂತ ಪ್ರವೇಶಿಸುವ ಕನಸು ಕಮರಲಿದೆ.

ಟೂರ್ನಿಯಲ್ಲಿ ಭಾರತಕ್ಕೆ ಶುಭಾರಂಭ ಮಾಡುವ ಉತ್ತಮ ಅವಕಾಶ ಒದಗಿತ್ತು. ಆತಿಥೇಯರ ವಿರುದ್ಧ ಅಮೋಘ ಆಟ ಆಡಿದ ತಂಡ ಆರಂಭದಲ್ಲೇ ಗೋಲು ಗಳಿಸಿತ್ತು. ಈ ಮುನ್ನಡೆಯನ್ನು 54ನೇ ನಿಮಿಷದ ವರೆಗೆ ಕಾಯ್ದುಕೊಂಡಿತ್ತು. ಆದರೆ ಕೊನೆಯಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಿಟ್ಟುಕೊಟ್ಟು ಪೇಚಿಗೆ ಸಿಲುಕಿತ್ತು. ಐರ್ಲೆಂಡ್ ಎದುರು ಇಂಥ ತಪ್ಪು ಮರುಕಳಿಸದೇ ಇರುವಂತೆ ಇರಲು ತಂಡ ಗಮನ ಹರಿಸಬೇಕಾಗಿದೆ.

‘ಕಳೆದ ಬಾರಿ ಐರ್ಲೆಂಡ್ ಎದುರಿನ ಪಂದ್ಯದಲ್ಲಿ ಸೋತಿದ್ದೇವೆ ನಿಜ. ಆ ಪಂದ್ಯದಲ್ಲಿ ಬಹುತೇಕ ಭಾಗದಲ್ಲಿ ನಾವೇ ಮುನ್ನಡೆಯಲ್ಲಿದ್ದೆವು. ಆದರೆ ಪೆನಾಲ್ಟಿ ಕಾರ್ನರ್ ಅವಕಾಶಗಳು ಐರ್ಲೆಂಡ್ ತಂಡದ ಕೈ ಹಿಡಿದಿದ್ದವು. ಈಗ ನಮ್ಮ ತಂಡ ಸಾಕಷ್ಟು ಬದಲಾಗಿದೆ. ಆಕ್ರಮಣ ಮತ್ತು ರಕ್ಷಣಾ ವಿಭಾಗಗಳೆರಡರಲ್ಲೂ ಬಲಿಷ್ಠವಾಗಿದೆ. ಹೀಗಾಗಿ ಗುರುವಾರ ಸುಲಭ ಜಯ ಸಾಧಿಸಲಿದ್ದೇವೆ’ ಎಂದು ಗೋಲ್ ಕೀಪರ್ ಸವಿತಾ ಅಭಿಪ್ರಾಯಪಟ್ಟರು.

ಸವಿತಾ ಅವರು ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರು. ಗೋಲು ಗಳಿಸಲು ಎದುರಾಳಿಗಳು ನಡೆಸಿದ ಅನೇಕ ಪ್ರಯತ್ನಗಳನ್ನು ತಡೆದು ಗಮನ ಸೆಳೆದಿದ್ದರು. ಆದರೆ ತಂಡ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಆಗಲಿಲ್ಲ. ಇದರಿಂದ ಡ್ರ್ಯಾಗ್ ಫ್ಲಿಕ್ಕರ್ ಗುರುಜೀತ್ ಕೌರ್‌ ನಿರಾಸೆಗೆ ಒಳಗಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು