ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2011 ವಿಶ್ವಕಪ್: ಯುವಿ ಆಲ್‌ರೌಂಡ್ ಆಟ; ಐರ್ಲೆಂಡ್ ಮಿಂಚು

Last Updated 24 ಮೇ 2019, 19:57 IST
ಅಕ್ಷರ ಗಾತ್ರ

ಪಂಜಾಬಿನ ‘ಆ್ಯಂಗ್ರಿ ಯಂಗ್‌ಮ್ಯಾನ್’ ಯುವರಾಜ್ ಸಿಂಗ್ ಅವರ ವಿಶ್ವರೂಪದರ್ಶನವಾದ ಟೂರ್ನಿ ಇದು. ಎಂತೆಂತ ದಿಗ್ಗಜ ಬ್ಯಾಟ್ಸ್‌ಮನ್‌ಗಳು, ಬೌಲರ್‌ಗಳಿದ್ದರೂ ಒಬ್ಬ ಆಲ್‌ರೌಂಡರ್‌ ಪ್ರಾಮುಖ್ಯತೆ ಏನೆಂಬುದು ಸಾಬೀತು ಮಾಡಿದ್ದು ‘ಯುವಿ’. ತಮ್ಮ ಎಡಗೈ ಸ್ಪಿನ್ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಇಡೀ ಟೂರ್ನಿಯಲ್ಲಿ ಛಾಪು ಮೂಡಿಸಿದರು. ಕೆಲವು ಪಂದ್ಯಗಳಲ್ಲಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.

* ಚೆನ್ನೈನಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ಎದುರು ಯುವಿ ಕ್ರೀಸ್‌ಗೆ ಬಂದಾಗ ತಂಡವು 51 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿತ್ತು. ವಿರಾಟ್ ಕೊಹ್ಲಿ ಜೊತೆಗೂಡಿ ಮೂರನೇ ವಿಕೆಟ್‌ಗೆ 122 ರನ್‌ ಸೇರಿಸುವಲ್ಲಿ ಸಫಲರಾದರು. ಅಬ್ಬರದ ಶತಕ (113; 123 ಎಸೆತ, 10ಬೌಂಡರಿ, 2ಸಿಕ್ಸರ್) ದಾಖಲಿಸಿದರು. ನಂತರ ನಾಲ್ಕು ಓವರ್‌ ಬೌಲಿಂಗ್ ಮಾಡಿದ ಯುವಿ 18 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು. ಭಾರತ ತಂಡವು 80 ರನ್‌ಗಳಿಂದ ಗೆದ್ದಿತು. ವಿಂಡೀಸ್ ತಂಡದ ಬೌಲರ್ ರವಿ ರಾಮಪಾಲ್ ಐದು ವಿಕೆಟ್ ಪಡೆದಿದ್ದರು.

* ಅಹಮದಾಬಾದ್‌ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮತ್ತೆ ಯುವಿ ಮಿಂಚಿದರು. ಆಗಿನ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ರಿಕಿ ಪಾಂಟಿಂಗ್ (104 ರನ್) ಶತಕದ ಬಲದಿಂದ 50 ಓವರ್‌ಗಳಲ್ಲಿ 2ಕ್ಕೆ260 ರನ್‌ ಗಳಿಸಿತು. ಯುವಿ ಬ್ರಾಡ್ ಹೆಡಿನ್ ಮತ್ತು ಮೈಕೆಲ್ ಕ್ಲಾರ್ಕ್‌ ವಿಕೆಟ್‌ಗಳನ್ನು ಕಬಳಿಸಿದರು. ಗುರಿ ಬೆನ್ನತ್ತಿದ ಭಾರತ ತಂಡದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ವೀರೇಂದ್ರ ಸೆಹ್ವಾಗ್ ಬೇಗನೆ ಔಟಾದರು. ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಅವರಿಬ್ಬರೂ ತಾಳ್ಮೆಯ ಅರ್ಧಶತಕಗಳನ್ನು ದಾಖಲಿಸಿದರು. ಆದರೆ, ತಂಡವು 187 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಅಜೇಯ ಅರ್ಧಶತಕ ಹೊಡೆದ ಯುವಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಭಾರತ ಐದು ವಿಕೆಟ್‌ಗಳಿಂದ ಗೆದ್ದು ಸೆಮಿಫೈನಲ್ ತಲುಪಿತು.

* ಟೂರ್ನಿಯಲ್ಲಿ ಒಂಬತ್ತು ಪಂದ್ಯಗಳನ್ನು ಆಡಿದ ಯುವರಾಜ್ ಸಿಂಗ್ ಒಟ್ಟು 362 ರನ್‌ಗಳನ್ನು ಗಳಿಸಿದರು. 15 ವಿಕೆಟ್‌ಗಳನ್ನು ಕಬಳಿಸಿದರು.

* ಬೆಂಗಳೂರಿನಲ್ಲಿ ಟೈ ಪಂದ್ಯದ ಗುಂಗಿನಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಕ್ರಿಕೆಟ್ ಲೋಕದ ಕೂಸು ಐರ್ಲೆಂಡ್‌ ತಂಡವು ಬಲವಾದ ಪೆಟ್ಟುನೀಡಿತು. ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿ ಬೀಗಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 327 ರನ್‌ ಗಳಿಸಿತ್ತು. ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡವು ಇಂಗ್ಲೆಂಡ್ ದಾಳಿಯನ್ನು ಪುಡಿಗಟ್ಟಿತು. ಕೆವಿನ್ ಒ ಬ್ರೇನ್ 113 ರನ್‌ ಹೊಡೆದು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT