ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಪಡೆಯಲ್ಲಿ ಇಬ್ಬರು ಕನ್ನಡಿಗರು

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ: ಲಂಡನ್‌ ತಲುಪಿದ ಭಾರತ ತಂಡ
Last Updated 22 ಮೇ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಇಲ್ಲಿಗೆ ಬಂದಿರುವ ಭಾರತ ಕ್ರಿಕೆಟ್‌ ತಂಡದಲ್ಲಿ ಇಬ್ಬರು ಕನ್ನಡಿಗರಿದ್ದಾರೆ!

‘ಅರೇ ಏನಿದು? ತಂಡಕ್ಕೆ ಆಯ್ಕೆಯಾಗಿದ್ದು ಕನ್ನಡಿಗ ಕೆ.ಎಲ್. ರಾಹುಲ್ ಒಬ್ಬರೇ ಅಲ್ಲವೇ? ಎಂದು ಅಚ್ಚರಿಯಾಯಿತಲ್ಲವೇ. ಹೌದು; ರಾಹುಲ್ ಜೊತೆಗೆ ತಂಡದಲ್ಲಿರುವ ಇನ್ನೊಬ್ಬ ಕನ್ನಡಿಗ ರಾಘವೇಂದ್ರ ದೇವಗಿ.

ಥ್ರೋಡೌನ್ ಪರಿಣತ ರಘು ಅವರು ನೆರವು ಸಿಬ್ಬಂದಿಯಾಗಿ ತಂಡದೊಂದಿಗೆ ತೆರಳಿದ್ದಾರೆ. ಭಾರತ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ಸಹಾಯಕರಾಗಿರುವ ರಘು ಅವರು ಸೈಡ್ ಆರ್ಮ್ ಸಲಕರಣೆ ಮೂಲಕ ‘ಥ್ರೋ ಡೌನ್’ ಪರಿಣತರಾಗಿದ್ದಾರೆ.

ಅಡುಗೆ ಸೌಟು ಹೋಲುವ ಈ ಸಲಕರಣೆಯ ಮುಂಭಾಗದಲ್ಲಿರುವ ಇಕ್ಕಳಕ್ಕೆ ಚೆಂಡು ಸಿಕ್ಕಿಸಿ ವೇಗವಾಗಿ ಬ್ಯಾಟ್ಸ್‌ಮನ್‌ಗಳಿಗೆ ಎಸೆಯುತ್ತಾರೆ. ಅದು ಪ್ರತಿ ಗಂಟೆಗೆ 120 ರಿಂದ 160 ಕಿಲೋಮೀಟರ್ ವೇಗದಲ್ಲಿ ಧಾವಿಸುತ್ತದೆ. ಬೌನ್ಸರ್‌, ಪುಲ್‌ ಲೆಂಗ್ತ್, ಯಾರ್ಕರ್, ಸ್ವಿಂಗ್, ಕಟರ್ ಎಸೆತಗಳನ್ನು ಈ ಸಲಕರಣೆಯ ಮೂಲಕ ಒಗೆಯು ಕಲೆಯಲ್ಲಿ ರಘು ಪರಿಣತರಾಗಿದ್ದಾರೆ.

ದಿಗ್ಗಜರಾದ ಸಚಿನ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ, ವಿ.ವಿ.ಎಸ್. ಲಕ್ಷ್ಮಣ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ. ಅವರೆಲ್ಲರಿಗೂ ಥ್ರೋಡೌನ್ ಎಸೆತಗಳನ್ನು ಹಾಕಲು ರಘು ಬೇಕೆ ಬೇಕು.

ಉತ್ತರ ಕನ್ನಡ ಜಿಲ್ಲೆಯ ಕ್ರಿಕೆಟ್‌ ಪ್ರತಿಭೆಗಳಿಗೆ ಹುಬ್ಬಳ್ಳಿ ಚಿಮ್ಮುಹಲಗೆ ಇದ್ದಂತೆ. ರಘು ಪಾಲಿಗೂ ಈ ನಗರವೇ ಬೆಳವಣಿಗೆಗೆ ಹಾದಿ ತೋರಿಸಿತ್ತು. ಜೂನಿಯರ್ ಕ್ರಿಕೆಟ್‌ ಆಡುತ್ತಿದ್ದ ಅವರು 14ನೇ ವಯಸ್ಸಿನಲ್ಲಿ ತಮ್ಮ ಊರು ಬಿಟ್ಟರು. ಹುಬ್ಬಳ್ಳಿಯ ಬಿಡಿಕೆ ಕ್ರೀಡಾ ಪ್ರತಿಷ್ಠಾನಕ್ಕೆ ಸೇರಿದರು. ತರಬೇತಿ ನಡೆಯುತ್ತಿದ್ದ ಬಿವಿಬಿ ಕ್ರೀಡಾಂಗಣವೇ ಅವರ ವಾಸಸ್ಥಾನವಾಯಿತು.

‘ರಘು ಇಲ್ಲಿಗೆ ಬಂದಾಗ ನಮ್ಮ ಕ್ರೀಡಾಂಗಣದ ಸಿಬ್ಬಂದಿ ಇರುತ್ತಿದ್ದ ಕೋಣೆಯಲ್ಲಿಯೇ ಆಸರೆ ಪಡೆದಿದ್ದರು. ಕ್ರಿಕೆಟ್‌ನಲ್ಲಿ ಅಪಾರ ಆಸಕ್ತಿ ಇತ್ತು. ಕೆಲವೊಮ್ಮೆ ಇಲ್ಲಿಯೇ ಪಕ್ಕದಲ್ಲಿದ್ದ ಸ್ಮಶಾನದಲ್ಲಿಯೂ ಆತ ಮಲಗಿದ್ದ ಉದಾಹರಣೆಗಳಿವೆ. ಅದಾಗಿ ಕೆಲವು ದಿನಗಳ ನಂತರ ಕೆಎಲ್‌ಇ ಸಂಸ್ಥೆ ಮತ್ತು ಧಾರವಾಡ ವಲಯದ ನಿಮಂತ್ರಕ ಬಾಬಾ ಭೂಸದ್ ಅವರ ನೆರವಿನಿಂದ ವಸತಿನಿಲಯದಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು’ ಎಂದು ಹುಬ್ಬಳ್ಳಿಯ ಬಿಡಿಕೆ ಸಂಸ್ಥೆ ಕೋಚ್ ಶಿವಾನಂದ ಗುಂಜಾಳ ನೆನಪಿಸಿಕೊಳ್ಳುತ್ತಾರೆ.

ಆದರೆ ಒಂದು ಅಪಘಾತದಲ್ಲಿ ರಘು ಕೈಗೆ ಪೆಟ್ಟಾಗಿದ್ದರಿಂದ ಆಡಲಾಗದ ಅವರು, ಅಂತರ ವಲಯದಲ್ಲಿ ಆಡುವ ಧಾರವಾಡ ವಲಯ ತಂಡಕ್ಕೆ ಸಹಾಯಕ ಕೋಚ್ ಆದರು. ನಂತರ ಬೆಂಗಳೂರಿನಲ್ಲಿ ಕೆಲವು ವರ್ಷಗಳವರೆಗೆ ಇರ್ಫಾನ್ ಸೇಠ್ ಅವರ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸಿದರು.

2010–11ನೇ ಸಾಲು ರಘು ಜೀವನಕ್ಕೆ ಮಹತ್ವದ ತಿರುವು ಸಿಕ್ಕ ಕಾಲ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸಿಬ್ಬಂದಿಯಾಗಿ ಸೇರಿದ್ದರು. ಆಗ ಇಲ್ಲಿಗೆ ಬರುತ್ತಿದ್ದ ತೆಂಡೂಲ್ಕರ್ ಅವರು ರಘು ಪರಿಶ್ರಮ ಮತ್ತು ಬದ್ಧತೆಯನ್ನು ಗಮನಿಸಿದರು. ಅದೇ ವರ್ಷ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದ್ದ ತಂಡದ ನೆರವು ಸಿಬ್ಬಂದಿಗೆ ರಘು ಅವರನ್ನು ಸೇರ್ಪಡೆ ಮಾಡುವಂತೆ ಸಚಿನ್ ಬಿಸಿಸಿಐಗೆ ಮನವಿ ಮಾಡಿದರು. ಅದು ಫಲಿಸಿತು. ಅಲ್ಲಿಂದ ಇಲ್ಲಿಯವರೆಗೆ ರಘು ಭಾರತ ತಂಡದೊಂದಿಗೆ ಇದ್ದಾರೆ.

ಎರಡು ವರ್ಷಗಳ ಹಿಂದೆ ಭಾರತವು ಚಾಂಪಿಯನ್ಸ್‌ ಟ್ರೋಫಿ ಆಡಲು ಇಂಗ್ಲೆಂಡ್‌ಗೆ ಹೋದಾಗಲೂ ಅವರು ತಂಡದಲ್ಲಿದ್ದರು. ತಂಡವು ಆಡಿದ ಬಹಳಷ್ಟು ಟೂರ್ನಿಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಇದೀಗ ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡದೊಂದಿಗೆ ಸೂಟು, ಬೂಟು ತೊಟ್ಟು ಲಂಡನ್‌ಗೆ ತೆರಳಿದ್ದಾರೆ.

ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ಹೊರಟ ವಿಮಾನದ ಮೂಲಕ ತಂಡವು ಲಂಡನ್‌ಗೆ ತೆರಳಿತು. ಮಧ್ಯಾಹ್ನದ ವೇಳೆಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT