ಮಂಗಳವಾರ, ಮಾರ್ಚ್ 21, 2023
29 °C
ಯಾವುದೇ ಚಟುವಟಿಕೆ ನಡೆಸದಂತೆ ಕ್ರೀಡಾ ಸಚಿವಾಲಯ ಸೂಚನೆ

ಕುಸ್ತಿ ಫೆಡರೇಷನ್‌ ತುರ್ತು ಸಭೆ ರದ್ದು

ಪಿಟಿಐ Updated:

ಅಕ್ಷರ ಗಾತ್ರ : | |

ಅಯೋಧ್ಯಾ: ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಭಾನುವಾರ ಇಲ್ಲಿ ಆಯೋಜಿಸಲು ಉದ್ದೇಶಿಸಿದ್ದ ತುರ್ತು ಸಭೆ, ಕ್ರೀಡಾ ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ ರದ್ದುಗೊಂಡಿದೆ.

ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಮತ್ತು ಫೆಡರೇಷನ್‌ ವಿರುದ್ಧ ಖ್ಯಾತನಾಮ ಕುಸ್ತಿಪಟುಗಳು ಮಾಡಿದ್ದ ಆರೋಪಗಳ ಬಗ್ಗೆ ಚರ್ಚಿಸಲು ಡಬ್ಲ್ಯುಎಫ್‌ಐ ಸಭೆ ನಡೆಸಲು ನಿರ್ಧರಿಸಿತ್ತು. ಈ ಸಭೆಯ ಬಳಿಕ ಬ್ರಿಜ್‌ಭೂಷಣ್‌ ಅವರು ಪತ್ರಿಕಾಗೋಷ್ಠಿ ನಡೆಸುವರು ಎಂದು ಅವರ ಪುತ್ರ ಪ್ರತೀಕ್‌ ಶುಕ್ರವಾರ ಹೇಳಿದ್ದರು.

ಆದರೆ ಕುಸ್ತಿಪಟುಗಳ ಆರೋಪಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದ ಕ್ರೀಡಾ ಸಚಿವಾಲಯ, ಮುಂದಿನ ಆದೇಶದವರೆಗೆ ಯಾವುದೇ ಚಟುವಟಿಕೆ ನಡೆಸದಂತೆ ಫೆಡರೇಷನ್‌ಗೆ ಸೂಚಿಸಿತ್ತು. ತನಿಖೆ ಕೊನೆಗೊಳ್ಳುವವರೆಗೆ ಅಧಿಕಾರದಿಂದ ದೂರವುಳಿಯುವಂತೆ ಬ್ರಿಜ್‌ಭೂಷಣ್ ಅವರಿಗೆ ತಿಳಿಸಿತ್ತು.

ಫೆಡರೇಷನ್‌ನ ಸಹಾಯಕ ಕಾರ್ಯದರ್ಶಿ ವಿನೋದ್‌ ತೋಮರ್‌ ಅವರನ್ನು ಕ್ರೀಡಾ ಸಚಿವಾಲಯ ಶನಿವಾರ ಅಮಾನತುಗೊಳಿಸಿತ್ತು. ಉತ್ತರ ಪ್ರದೇಶದ ಗೊಂಡಾದಲ್ಲಿ ಆಯೋಜಿಸಿರುವ ರ‍್ಯಾಂಕಿಂಗ್‌ ಕುಸ್ತಿ ಸ್ಪರ್ಧೆಯನ್ನು ಸ್ಥಗಿತಗೊಳಿಸುವಂತೆಯೂ ಸೂಚಿಸಿತ್ತು.

‘ಡಬ್ಲ್ಯುಎಫ್‌ಐನ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳಲು ಮೇಲುಸ್ತುವಾರಿ ಸಮಿತಿ ನೇಮಿಸಲಾಗುವುದು. ಹಾಲಿ ಆಡಳಿತವು ಯಾವುದೇ ಚಟುವಟಿಕೆ ನಡೆಸುವಂತಿಲ್ಲ’ ಎಂದು ಕ್ರೀಡಾ ಸಚಿವಾಲಯ ಶನಿವಾರ ಹೊರಡಿಸಿದ್ದ ಪ್ರಕಟಣೆಯಲ್ಲಿ ತಿಳಿಸಿತ್ತು.

ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟುಗಳಾದ ರವಿ ದಹಿಯಾ, ಬಜರಂಗ್‌ ಪೂನಿಯಾ, ಸಾಕ್ಷಿ ಮಲಿಕ್, ವಿಶ್ವ ಚಾಂಪಿಯನ್‌ಷಿಪ್‌ನ ಪದಕ ವಿಜೇತರಾದ ವಿನೇಶಾ ಪೋಗಟ್‌ ಮತ್ತು ದೀಪಕ್‌ ಪೂನಿಯಾ ಅವರು ಬ್ರಿಜ್‌ಭೂಷಣ್ ವಿರುದ್ಧ ಲೈಂಗಿಕ ದೌರ್ಜನ್ಯ ಸೇರಿದಂತೆ ವಿವಿಧ ಆರೋಪಗಳನ್ನು ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು