ಭಾನುವಾರ, ಸೆಪ್ಟೆಂಬರ್ 26, 2021
25 °C
ಉಗ್ರರಿಂದ ದಾಳಿ ಸಾಧ್ಯತೆ: ಶ್ರೀಲಂಕಾದ ಉನ್ನತ ನಾಯಕರಿಗೆ ಎಚ್ಚರಿಕೆ

ಜೊತೆಯಾಗಿ ಪ್ರಯಾಣಿಸದಿರಲು ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

ಕೊಲಂಬೊ: ಉಗ್ರರ ದಾಳಿ ಸಾಧ್ಯತೆ ಇರುವುದರಿಂದ ಜೊತೆಯಾಗಿ ಪ್ರಯಾಣ ಬೆಳೆಸಬೇಡಿ ಎಂದು ಶ್ರೀಲಂಕಾದ ಉನ್ನತ ನಾಯಕರಿಗೆ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ ಎಂದು ಡೈಲಿ ಮಿರರ್‌ ವರದಿ ಮಾಡಿದೆ.

ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಮತ್ತು ವಿರೋಧ ಪಕ್ಷದ ನಾಯಕ ಮಹಿಂದಾ ರಾಜಪಕ್ಸೆ ಸೇರಿದಂತೆ ಹಲವು ನಾಯಕರಿಗೆ ಎಚ್ಚರಿಕೆ ನೀಡಲಾಗಿದೆ.

ಸರಣಿ ಬಾಂಬ್‌ ಸ್ಫೋಟಗಳು ನಡೆದ ಬಳಿಕ ಹೆಚ್ಚುವರಿ ಭದ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ಎಚ್ಚರಿಕೆ ನೀಡಲಾಗಿದೆ.

‘ಪೀಸ್‌ ಟಿವಿ’ ಪ್ರಸಾರ ಬಂದ್‌: ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್‌ ನಾಯ್ಕ್‌ ಅವರ ‘ಪೀಸ್‌ ಟಿವಿ’ ಪ್ರಸಾರವನ್ನು ಶ್ರೀಲಂಕಾದ ಪ್ರಮುಖ ಎರಡು ಕೇಬಲ್‌ ಟಿವಿ ಆಪರೇಟರ್ಸ್‌ ಬಂದ್‌ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಐಎಸ್‌ ಉಗ್ರ ಸಂಘಟನೆಗೆ ಸೇರುವ ಬಗ್ಗೆ ಯುವಕರನ್ನು ಪ್ರಚೋದಿಸುತ್ತಿದ್ದ ಎಂಬ ಆರೋಪದ ಮೇಲೆ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಈಗಾಗಲೇ ‘ಪೀಸ್‌ ಟಿವಿ’ ಪ್ರಸಾರ ಬಂದ್‌ ಮಾಡಲಾಗಿದೆ.

ಶ್ರೀಲಂಕಾದಲ್ಲಿ ಈಸ್ಟರ್‌ ಹಬ್ಬದಂದು ನಡೆದ ಸರಣಿ ಬಾಂಬ್‌ ದಾಳಿಯ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ‘ಡೈಲಾಗ್‌’ ಮತ್ತು ‘ಎಸ್‌ಎಲ್‌ಟಿ‘ ಎಂಬ ಕೇಬಲ್‌ ಆಪರೇಟರ್‌ ಸಂಸ್ಥೆಗಳು ‘ಪೀಸ್‌ ಟಿವಿ‘ ಪ್ರಸಾರ ಬಂದ್‌ ಮಾಡಿವೆ. ಈ ಕುರಿತು ಅಧಿಕೃತ ಘೋಷಣೆ ಆಗಬೇಕಿದೆ.

ಕಳೆಗುಂದಿದ ಮೇ ದಿನಾಚರಣೆ

ಉಗ್ರರ ದಾಳಿಯ ಬಳಿಕ ಶ್ರೀಲಂಕಾದಲ್ಲಿ ಭದ್ರತೆ ಹೆಚ್ಚಿಸಿದ್ದು, ಈ ಕಾರಣಕ್ಕೆ ಇಲ್ಲಿನ ರಾಜಕೀಯ ಪಕ್ಷಗಳು ಹಾಗೂ ಕಾರ್ಮಿಕ ಸಂಘಟನೆಗಳು ಮೇ ದಿನಾಚರಣೆಯ ಅಂಗವಾಗಿ ಬುಧವಾರ ಯಾವುದೇ ಬೃಹತ್‌ ರ‍್ಯಾಲಿಗಳನ್ನು ಹಮ್ಮಿಕೊಂಡಿಲ್ಲ.

ಸಾಮಾನ್ಯ ರ‍್ಯಾಲಿಗಳನ್ನು ಹಮ್ಮಿಕೊಳ್ಳುವ ಮೂಲಕ ಮೇ ದಿನವನ್ನು ಆಚರಿಸಲಾಗುವುದು ಎಂದು ಕಾರ್ಮಿಕ ಸಂಘಟನೆಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು