ಶ್ರೀಲಂಕಾ: ಪ್ರಧಾನಿ ಹುದ್ದೆಗೆ ವಿಕ್ರಮಸಿಂಘೆ ಮರುನೇಮಕ

7
51 ದಿನಗಳ ರಾಜಕೀಯ ಬಿಕ್ಕಟ್ಟು ಅಂತ್ಯ

ಶ್ರೀಲಂಕಾ: ಪ್ರಧಾನಿ ಹುದ್ದೆಗೆ ವಿಕ್ರಮಸಿಂಘೆ ಮರುನೇಮಕ

Published:
Updated:
Deccan Herald

ಕೊಲಂಬೊ: ರನಿಲ್ ವಿಕ್ರಮಸಿಂಘೆ ಅವರನ್ನು ಶ್ರೀಲಂಕಾ ಪ್ರಧಾನಿಯಾಗಿ ಭಾನುವಾರ ಮರುನೇಮಕ ಮಾಡಲಾಗಿದ್ದು, ಇದರಿಂದಾಗಿ ಕಳೆದ 51 ದಿನಗಳಿಂದ ದೇಶದಲ್ಲಿ ಉಂಟಾಗಿದ್ದ ಸಾಂವಿಧಾನಿಕ ಬಿಕ್ಕಟ್ಟು ಕೊನೆಯಾದಂತಾಗಿದೆ. 

ಯುನೈಟೆಡ್ ನ್ಯಾಷನಲ್ ಪಕ್ಷದ (ಯುಎನ್‌ಪಿ) ಅಧ್ಯಕ್ಷರೂ ಆಗಿರುವ ವಿಕ್ರಮಸಿಂಘೆ (69) ಅವರಿಗೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಮಾಣ ವಚನ ಬೋಧಿಸಿದರು. 

ಸುಪ್ರೀಂ ಕೋರ್ಟ್ ನೀಡಿದ ಎರಡು ಮಹತ್ವದ ತೀರ್ಪುಗಳಿಂದಾಗಿ, ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಮಹಿಂದ ರಾಜಪಕ್ಸೆ ಅವರು ಮಾಡಿದ್ದ ಯತ್ನಗಳು ವಿಫಲವಾದವು. ಇದರಿಂದಾಗಿ ಶನಿವಾರ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬೆನ್ನಲ್ಲೇ ಈ ಬೆಳವಣಿಗೆಗಳಾಗಿವೆ.

‘ಇಂದು ಕೇವಲ ನನಗೆ ಅಥವಾ ಯುಎನ್‌ಪಿಗೆ ಮಾತ್ರ ಜಯ ದೊರಕಿಲ್ಲ. ಇದು ಶ್ರೀಲಂಕಾದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪ್ರಜೆಗಳ ಸಾರ್ವಭೌಮತ್ವದ ಗೆಲುವು. ಸಂವಿಧಾನವನ್ನು ಸಮರ್ಥಿಸಿಕೊಳ್ಳುವಲ್ಲಿ ದೃಢನಿಲುವು ಹೊಂದಿದ್ದ ಮತ್ತು ಪ್ರಜಾಪ್ರಭುತ್ವಕ್ಕೆ ಗೆಲುವಾಗುವಂತೆ ನೋಡಿಕೊಂಡ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಅಧಿಕಾರ ವಹಿಸಿಕೊಂಡ ಬಳಿಕ ವಿಕ್ರಮಸಿಂಘೆ ಅವರು ಹೇಳಿದ್ದಾರೆ. 

ಐದನೇ ಬಾರಿ ಅಧಿಕಾರ: ವಿಕ್ರಮಸಿಂಘೆ ಅವರು ದಾಖಲೆ ನಿರ್ಮಿಸಿ ಐದನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಬೆಂಬಲಿಗರು ರಸ್ತೆಗಳಲ್ಲಿ ಸಂಭ್ರಮ ಆಚರಿಸಿದರು. 

‘ನಮ್ಮ ಸರ್ಕಾರದ ವಿರುದ್ಧ ಕೆಲವು ಗುಂಪುಗಳು ಅಧ್ಯಕ್ಷರನ್ನು ತಪ್ಪುಹಾದಿಗೆ ಎಳೆದಿದ್ದವು. ಇದರಿಂದಾಗಿ ಅವರು ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿದ್ದರು. ಆದರೆ ಈಗ ಸತ್ಯಕ್ಕೆ ಜಯ ದೊರಕಿದೆ. ಸಿರಿಸೇನಾ ಅವರ ಜತೆಗೆ ಪುನಃ ಕಾರ್ಯನಿರ್ವಹಿಸಲು ಯುಎನ್‌ಪಿ ಸಿದ್ಧವಿದೆ’ ಎಂದು ಯುಎನ್‌ಪಿ ಉಪಾಧ್ಯಕ್ಷ ಸಜಿತ್ ಪ್ರೇಮದಾಸ ತಿಳಿಸಿದ್ದಾರೆ. 

ಅಧಿಕಾರದ ಗುದ್ದಾಟದಲ್ಲಿ ಅಧ್ಯಕ್ಷ ಸಿರಿಸೇನ ಅವರು ಅ.26ರಂದು ವಿಕ್ರಮಸಿಂಘೆ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ್ದರು. ಅವರ ಈ ವಿವಾದಾತ್ಮಕ ಕ್ರಮದಿಂದ ದ್ವೀಪರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ತಮ್ಮನ್ನು  ಅಕ್ರಮವಾಗಿ ಪದಚ್ಯುತಗೊಳಿಸಲಾಗಿದ್ದು, ಹುದ್ದೆಯಿಂದ ಕೆಳಗಿಳಿಯುವುದಿಲ್ಲ ಎಂದು ವಿಕ್ರಮಸಿಂಘೆ ಪಟ್ಟುಹಿಡಿದಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !