ಲಂಕಾ: ಸರಣಿ ಸ್ಫೋಟಕ್ಕೆ 215 ಬಲಿ, ನಾಲ್ವರು ಭಾರತೀಯರ ಸಾವು

ಶನಿವಾರ, ಮೇ 25, 2019
22 °C
ಕರಾಳ ದಿನವಾದ ಈಸ್ಟರ್ ಆಚರಣೆ l ಚರ್ಚ್, ಐಷಾರಾಮಿ ಹೋಟೆಲ್‌ಗಳು ಗುರಿ

ಲಂಕಾ: ಸರಣಿ ಸ್ಫೋಟಕ್ಕೆ 215 ಬಲಿ, ನಾಲ್ವರು ಭಾರತೀಯರ ಸಾವು

Published:
Updated:
Prajavani

ಕೊಲಂಬೊ: ಈಸ್ಟರ್ ಆಚರಣೆಯ ಸಂಭ್ರಮ ಶ್ರೀಲಂಕಾಗೆ ಕರಾಳ ದಿನವಾಯಿತು. ರಾಜಧಾನಿ ಕೊಲಂಬೊ ಸೇರಿದಂತೆ ಮೂರು ಕಡೆ ಬೆಳಗ್ಗೆಯೇ ಸಂಭವಿಸಿದ ಎಂಟು ಸರಣಿ ಸ್ಫೋಟಗಳಿಂದಾಗಿ ದ್ವೀಪ ರಾಷ್ಟ್ರದಲ್ಲಿ 35 ವಿದೇಶಿಯರು ಸೇರಿದಂತೆ 215ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಚರ್ಚ್‌ಗಳು ಹಾಗೂ ಐಷಾರಾಮಿ ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಈ ದಾಳಿಯಲ್ಲಿ 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ದೇಶದ ಇತಿಹಾಸದಲ್ಲೇ ಇದು ಭೀಕರ ದಾಳಿಗಳಲ್ಲಿ ಒಂದಾಗಿದೆ. ಈವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಪ್ರಕರಣ ಸಂಬಂಧ ಏಳು ಶಂಕಿತರನ್ನು ಬಂಧಿಸಲಾಗಿದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ. ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಕೊಲಂಬೊದ  ಸೇಂಟ್ ಆಂಥೊನಿ ಚರ್ಚ್, ಪಶ್ಚಿಮ ಕರಾವಳಿ ನೆಗಂಬೊದ ಸೇಂಟ್ ಸೆಬಾಸ್ಟಿಯನ್ ಚರ್ಚ್ ಹಾಗೂ ಬಟ್ಟಿಕಲೋವಾದ ಝಿಯಾನ್ ಚರ್ಚ್‌ಗಳಲ್ಲಿ ಬೆಳಿಗ್ಗೆ 8.45ಕ್ಕೆ ಏಕಕಾಲಕ್ಕೆ ಮೊದಲ ಸ್ಫೋಟ ಸಂಭವಿಸಿದೆ. ಈಸ್ಟರ್ ಭಾನುವಾರ ಆಗಿದ್ದರಿಂದ ಚರ್ಚ್‌ಗಳಲ್ಲಿ ಪ್ರಾರ್ಥನೆಗೆಂದು ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂದು ಪೊಲೀಸ್ ವಕ್ತಾರ ಮಾಹಿತಿ ನೀಡಿದ್ದಾರೆ. 

ಕೊಲಂಬೊದ ಪಂಚತಾರಾ ಹೋಟೆಲ್‌ಗಳಾದ ಶಾಂಗ್ರಿಲಾ, ದಿ ಸಿನ್ನಾಮನ್ ಗ್ರ್ಯಾಂಡ್ ಹಾಗೂ ಕಿಂಗ್ಸ್‌ಬರಿ ಮೇಲೂ ದಾಳಿ ನಡೆದಿವೆ. ನಂತರ ಕೊಲಂಬೊ ಮೃಗಾಲಯದ ಬಳಿ ಏಳನೇ ಸ್ಫೋಟ ಸಂಭವಿಸಿದ್ದು, ಇಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಪೊಲೀಸರ ತಂಡ ಶೋಧಕಾರ್ಯ ನಡೆಸಲು ಕೊಲಂಬೊದ ಮನೆಯೊಂದನ್ನು ಪ್ರವೇಶಿಸಿದಾಗ, ಆತ್ಮಾಹುತಿ ದಾಳಿಕೋರ ಸ್ಫೋಟಿಸಿಕೊಂಡಿದ್ದಾನೆ. ಈ ಎಂಟನೇ ಸ್ಫೋಟದಲ್ಲಿ ಮೂವರು ‍ಪೊಲೀಸರು ಸಾವಿಗೀಡಾಗಿದ್ದಾರೆ. 

ಮೃತ ವಿದೇಶಿಗರಲ್ಲಿ ಅಮೆರಿಕ, ಬ್ರಿಟನ್, ಹಾಲೆಂಡ್‌ ಪ್ರಜೆಗಳು ಸೇರಿದ್ದಾರೆ. ‌ಸರಣಿ ಸ್ಫೋಟಗಳ ಹಿನ್ನೆಲೆಯಲ್ಲಿ ಭಂಡಾರನಾಯಿಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ. 

ದುರಂತದ ಹಿನ್ನೆಲೆಯಲ್ಲಿ ರಜೆಯಲ್ಲಿದ್ದ ಪೊಲೀಸರು, ವೈದ್ಯರು, ದಾದಿಯರು ಹಾಗೂ ಆರೋಗ್ಯ ಇಲಾಖೆ 
ಅಧಿಕಾರಿಗಳನ್ನು ಕರ್ತವ್ಯಕ್ಕೆ ಮರಳುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಸರ್ಕಾರಿ ಶಾಲೆಗಳನ್ನು ಸೋಮವಾರ, ಮಂಗಳವಾರ ಮುಚ್ಚಲಾಗುವುದು ಎಂದು ಘೋಷಿಸಲಾಗಿದೆ. 

ರಾಜಪಕ್ಸೆ ಖಂಡನೆ: ‘ಪವಿತ್ರ ದಿನದಂದು ಇಂತಹ ಸರಣಿ ಸ್ಫೋಟ ನಡೆದಿವುದು ಖಂಡನೀಯ. ದಾಳಿ ಹಿಂದೆ ಯಾರೇ ಇದ್ದರೂ ಅವರ 
ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಹೇಳಿದ್ದಾರೆ. 

ವಿಶ್ವದಾದ್ಯಂತ ಖಂಡನೆ: ವಿಶ್ವಸಂಸ್ಥೆ ನಾಯಕರು ಸೇರಿದಂತೆ ವಿವಿಧ ರಾಷ್ಟ್ರಗಳ ಮುಖಂಡರು ದಾಳಿಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

‘ಹೇಡಿಗಳ ಕೃತ್ಯ’ :ಸ್ಫೋ ಟ ‍ಪ್ರಕರಣವನ್ನು ಹೇಡಿಗಳ ಕೃತ್ಯ ಎಂದಿರುವ ಪ್ರಧಾನಿ ರನಿಲ್ ವಿಕ್ರಮಸಿಂಘೆ, ‘ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ದುರಂತದ ಸಮಯದಲ್ಲಿ ಶ್ರೀಲಂಕಾ ಜನತೆ ಒಗ್ಗಟ್ಟಿನಿಂದ ಇರಬೇಕು ಎಂದು ಕರೆ ನೀಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. 

ಬಹುಭಾಷಾ ನಟಿ ರಾಧಿಕಾ ಪಾರು: ಸ್ಟೋಟ ಸಂಭವಿಸಿದ್ದ ಕೊಲಂಬೊದ ಸಿನ್ನಾಮನ್ ಗ್ರಾಂಡ್ ಹೋಟೆಲ್‌ನಲ್ಲಿದ್ದ ಬಹುಭಾಷಾ ನಟಿ ರಾಧಿಕಾ ಶರತ್ ಕುಮಾರ್, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಸ್ಫೋಟ ಸಂಭವಿಸುವ ಕೆಲವೇ ನಿಮಿಷದ 
ಮುಂಚೆ ರಾಧಿಕಾ ಆ ಹೋಟೆಲ್‌ನಿಂದ ಹೊರಗೆ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾದೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಬಾಂಬ್ ಸ್ಫೋಟದ ಸುದ್ದಿ ಕೇಳಿ ಆಘಾತ ಆಗಿದೆ. ದೇವರ ದಯೆಯಿಂದ ಸ್ಫೋಟದಿಂದ ಪಾರಾಗಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಸುರತ್ಕಲ್‌ ಮಹಿಳೆ ಸಾವು

ಕೊಲಂಬೊದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಇಲ್ಲಿಗೆ ಸಮೀಪದ ಬೈಕಂಪಾಡಿಯ ಕುಕ್ಕಾಡಿ ಕುಟುಂಬದ ಫಾತಿಮಾ ರಜೀನಾ (60) ಮೃತಪಟ್ಟಿದ್ದಾರೆ.

ಇವರು ಕುಕ್ಕಾಡಿ ಅಬ್ದುಲ್ ಖಾದರ್‌ ಅವರ ಪತ್ನಿ. ದುಬೈಯಲ್ಲಿ ನೆಲೆಸಿರುವ ಇವರು ರಜೆ ನಿಮಿತ್ತ ಕೊಲಂಬೊಗೆ ತೆರಳಿದ್ದರು.

ಅಬ್ದುಲ್ ಖಾದರ್‌ ದುಬೈನಲ್ಲಿ ಕೆಮಿಕಲ್ ಎಂಜಿನಿಯರ್ ಆಗಿದ್ದಾರೆ. ಕಾಸರಗೋಡು ಮೊಗ್ರಾಲ್‌ ಪುತ್ತೂರು ಮೂಲದ ಫಾತಿಮಾ ರಜೀನಾ ಅವರ ಕುಟುಂಬ ವರ್ಗ ಇದೀಗ ಕೊಲಂಬೊದಲ್ಲಿ ನೆಲೆಸಿದೆ. ಹೀಗಾಗಿ ಶ್ರೀಲಂಕಾಗೆ ಆಗಾಗ ಹೋಗುತ್ತಿದ್ದರು.

ಅಬ್ದುಲ್‌ ಖಾದರ್‌ ಮತ್ತು ರಜೀನಾ ಅವರು ಹೋಟೆಲ್ ಶಾಂಗ್ರಿಲಾದಲ್ಲಿ ವಾಸ್ತವ್ಯ ಇದ್ದರು. ಅಬ್ದುಲ್‌ ಖಾದರ್‌ ಭಾನುವಾರ ಬೆಳಿಗ್ಗೆ ದುಬೈಗೆ ತೆರಳಿದ್ದರು. ಅವರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದ ರಜೀನಾ, ಹೋಟೆಲ್‌ಗೆ ಉಪಾಹಾರ ಸೇವಿಸಲು ತೆರಳಿದ್ದ ಸಂದರ್ಭದಲ್ಲಿ ಸ್ಫೋಟದಲ್ಲಿ ಸಿಲುಕಿಕೊಂಡರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸ್ಫೋಟದ ಬಳಿಕ ರಜೀನಾ ನಾಪತ್ತೆಯಾಗಿದ್ದರು. ನಂತರ ಅವರ ಶವ ಪತ್ತೆಯಾಯಿತು. ರಜೀನಾ ಅವರಿಗೆ ಒಬ್ಬ ಪುತ್ರ, ಪುತ್ರಿ ಇದ್ದು, ಅವರು ಅಮೆರಿಕದಲ್ಲಿ ಎಂಜಿನಿಯರ್‌ ಆಗಿದ್ದಾರೆ. ಭಾನುವಾರದ ಮಧ್ಯಾಹ್ನದ ವಿಮಾನದಲ್ಲಿ ಮಂಗಳೂರಿಗೆ ಬರಲು ಅವರು ಟಿಕೆಟ್ ಕಾಯ್ದಿರಿಸಿದ್ದರು. ನಂತರ ಮಂಗಳೂರಿನಿಂದ ದುಬೈಗೆ ತೆರಳಲು ಅವರು ಯೋಜಿಸಿದ್ದರು.

ದಾಳಿ ಎಚ್ಚರಿಕೆ ನೀಡಿದ್ದ ಪೊಲೀಸ್

ದೇಶದಲ್ಲಿ ಆತ್ಮಾಹುತಿ ದಾಳಿಗಳು ನಡೆಯುವ ಭೀತಿ ಇದೆ ಎಂದು ಶ್ರೀಲಂಕಾ ಪೊಲೀಸ್ ಮುಖ್ಯಸ್ಥ ಪುಜುತ್ ಜಯಸುಂದರ ಅವರು ಮೊದಲೇ ಎಚ್ಚರಿಕೆ ನೀಡಿದ್ದರು. ಏ.11ರಂದು ಅವರು ಪ್ರಮುಖ ಅಧಿಕಾರಿಗಳಿಗೆ ಗುಪ್ತಚರ ಮಾಹಿತಿ ರವಾನೆ ಮಾಡಿದ್ದರು.  ‘ವಿದೇಶಿ ಗುಪ್ತಚರ ಸಂಸ್ಥೆಯ ಮಾಹಿತಿ ಪ್ರಕಾರ ಕೊಲಂಬೊದಲ್ಲಿನ ಭಾರತೀಯ ರಾಯಭಾರ ಕಚೇರಿ ಹಾಗೂ ಚರ್ಚ್‌ಗಳನ್ನು ಗುರಿಯಾಗಿರಿಸಿ ನ್ಯಾಷನಲ್ ಥೊವೀತ್ ಜಮಾತ್ (ಎನ್‌ಟಿಜೆ) ದಾಳಿ ನಡೆಸಲು ಸಂಚು ರೂಪಿಸಿದೆ’ ಎಂದು ಎಚ್ಚರಿಸಿದ್ದರು. 

ಶಾಂತಿ ಕಾಪಾಡಿ: ಸಿರಿಸೇನಾ ಮನವಿ

ಎಲ್ಲರೂ ಶಾಂತಿ ಇರಬೇಕು ಎಂದು ಮನವಿ ಮಾಡಿರುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು, ‘ಈ ಅನಿರೀಕ್ಷಿತ ದಾಳಿಗಳು ಆಘಾತಕಾರಿ. ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಭದ್ರತಾ ಪಡೆಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ. 

ಅನಿರ್ದಿಷ್ಟಾವಧಿಗೆ ಕರ್ಫ್ಯೂ ಜಾರಿ

ಸರಣಿ ಸ್ಫೋಟದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

‘ಪರಿಸ್ಥಿತಿ ಹತೋಟಿಗೆ ಬರುವ ತನಕ ಕರ್ಫ್ಯೂ ಮುಂದುವರಿಯಲಿದೆ’ ಎಂದು ಕಿರಿಯ ರಕ್ಷಣಾ ಸಚಿವ ರುವನ್ ವಿಜೆವರ್ದನೆ ತಿಳಿಸಿದ್ದಾರೆ. 

‘ಧಾರ್ಮಿಕ ಕೇಂದ್ರಗಳ ಸುತ್ತಲೂ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯ ಹೇಳಿದೆ.  ಸ್ಫೋಟ ಪ್ರಕರಣಗಳ ಕುರಿತು ತಪ್ಪು ಮಾಹಿತಿಗಳು ರವಾನೆಯಾಗುವುದನ್ನು ತಡೆಯುವ ಉದ್ದೇಶದಿಂದ ತಾತ್ಕಾಲಿಕವಾಗಿ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಅಧ್ಯಕ್ಷರ ಕಾರ್ಯದರ್ಶಿ ಹೇಳಿದ್ದಾರೆ. 

ಭಾರತೀಯರ ನೆರವಿಗೆ ಸಹಾಯವಾಣಿ: ‘ಶ್ರೀಲಂಕಾದಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ. ನೆರವು ಅಗತ್ಯವಿರುವ ಭಾರತೀಯರು +94777 903082, +94112422788, +94112 422789,  ಸಹಾಯವಾಣಿಗೆ ಕರೆ ಮಾಡಬಹುದು’ ಎಂದು ಕೊಲಂಬೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

*** 

ಶ್ರೀಲಂಕಾದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ. ಮೂವರು ಭಾರತೀಯರು ಮೃತಪಟ್ಟಿದ್ದಾರೆ ಎಂದು ಕೊಲಂಬೊದಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಮೃತರನ್ನು ಲಕ್ಷ್ಮಿ, ನಾರಾಯಣ್ ಚಂದ್ರಶೇಖರ್ ಹಾಗೂ ರಮೇಶ್ ಎಂದು ಗುರುತಿಸಲಾಗಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿ
ಸಲಾಗುತ್ತಿದೆ. 

ಸುಷ್ಮಾ ಸ್ವರಾಜ್, ವಿದೇಶಾಂಗ ವ್ಯವಹಾರಗಳ ಸಚಿವೆ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 2

  Sad
 • 0

  Frustrated
 • 5

  Angry

Comments:

0 comments

Write the first review for this !