ಶುಕ್ರವಾರ, ನವೆಂಬರ್ 22, 2019
24 °C
ಶಿವಕುಮಾರ್‌ ಬಂಧನ: ಗಲಾಟೆ, ಪ್ರತಿಭಟನೆಯಿಂದ ಪ್ರಯೋಜನವಿಲ್ಲ

ಬಿಜೆಪಿ ಹಸ್ತಕ್ಷೇಪ ಇಲ್ಲ, ಕಾನೂನಿನ ಅಡಿಯಲ್ಲಿ ಕ್ರಮ: ಶ್ರೀನಿವಾಸ ಪ್ರಸಾದ್‌

Published:
Updated:
Prajavani

ಚಾಮರಾಜನಗರ: ‘ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ ಅವರ ಬಂಧನ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಹಸ್ತಕ್ಷೇಪ ಮಾಡಿಲ್ಲ. ತನಿಖಾ ಸಂಸ್ಥೆಗಳು ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಂಡಿವೆ’ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿವಕುಮಾರ್‌ ಅವರ ಮೇಲೆ ನಮಗೆ ಯಾವ ವೈರತ್ವವೂ ಇಲ್ಲ. ದ್ವೇಷವೂ ಇಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡಬೇಕಾಗಿಯೂ ಇಲ್ಲ’ ಎಂದರು.

‘ಕಾನೂನಿಗಿಂತ ಯಾರೂ ಮೇಲಲ್ಲ. ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಕುಮಾರ್‌ ಅವರ ಆಸ್ತಿ, ಆದಾಯ, ವ್ಯವಹಾರದ ಬಗ್ಗೆ ತನಿಖೆ ನಡೆಸಿ, ಅವರನ್ನು ವಿಚಾರಣೆ ನಡೆಸಿದ್ದಾರೆ. ನಂತರವಷ್ಟೇ ಅವರ ಬಂಧನವಾಗಿದೆ. ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ಶಿವಕುಮಾರ್‌ ಅವರಿಗೆ ಕಾನೂನು ಹೋರಾಟ ಮಾಡುವುದಕ್ಕೆ ಅವಕಾಶ ಇದೆ. ಬಂದ್‌, ಗಲಾಟೆ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರಲ್ಲ ಎಂದು ಕೇಳಿದ್ದಕ್ಕೆ, ‘ಯಾರು ಏನು ಬೇಕಾದರೂ ಹೇಳಬಹುದು. ಆದರೆ, ಇದರಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿಲ್ಲ. ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿವೆ’ ಎಂದರು. 

ಹಾಗಾದರೆ, ಕಾಂಗ್ರೆಸ್‌ ಈ ವಿಚಾರವನ್ನು ರಾಜಕೀಯಗೊಳಿಸುತ್ತಿದೆಯೇ ಎಂದು ಕೇಳಿದ್ದಕ್ಕೆ, ‘ಹೌದು. ನಿನ್ನೆ ಮೊನ್ನೆವರೆಗೂ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕಾಗಿ ಶಿವಕುಮಾರ್‌, ಗುಂಡೂರಾವ್‌ ಕಚ್ಚಾಡುತ್ತಿದ್ದರು. ಈಗ ಒಂದಾಗಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ, ದೇವೇಗೌಡ ಅವರು ಪರಸ್ಪರ ಉರಿದು ಹಾರುತ್ತಿದ್ದರು. ಈಗೆಲ್ಲವನ್ನೂ ಮರೆದು ಒಂದಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಪ್ರತಿಕ್ರಿಯಿಸಿ (+)