ಭಾನುವಾರ, ನವೆಂಬರ್ 17, 2019
21 °C
ಶ್ರೀರಾಮಪುರ ಪೊಲೀಸರ ಕಾರ್ಯಾಚರಣೆ

ಸಹಚರನ ಸಮೇತ ‘ಜಿಂಕೆ’ ಬಂಧನ

Published:
Updated:
Prajavani

ಬೆಂಗಳೂರು: ಶ್ರೀರಾಮಪುರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಅಜಿತ್ ಅಲಿಯಾಸ್ ಜಿಂಕೆ (22) ಹಾಗೂ ಆತನ ಸಹಚರ ಎನ್‌. ರಾಜೇಶ್ (19) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘‌ಪ್ರಕಾಶ ನಗರದ ನಿವಾಸಿ ಜಿಂಕೆ ಹಾಗೂ ಶ್ರೀರಾಮಪುರದ ರಾಜೇಶ್‌ನಿಂದ ₹12 ಲಕ್ಷ ಮೌಲ್ಯದ 268 ಗ್ರಾಂ ಚಿನ್ನಾಭರಣ, 2.5 ಕೆ.ಜಿ ಬೆಳ್ಳಿ ಸಾಮಗ್ರಿ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದಯಾನಂದನಗರದಲ್ಲಿ ವಾಸವಿರುವ ತುಂಗಭದ್ರಾ ಎಂಬುವರು ಆ.20ರಂದು ರಾತ್ರಿ ಮೊದಲ ಮಹಡಿಯಲ್ಲಿದ್ದ ಮನೆಗೆ ಬೀಗ ಹಾಕಿ, ಎರಡನೇ ಮಹಡಿಯ ಕೊಠಡಿಯಲ್ಲಿ ಮಲಗಿದ್ದರು. ಮರುದಿನ ಬೆಳಿಗ್ಗೆ ನೋಡಲಾಗಿ ಮೊದಲನೇ ಮಹಡಿಯ ಮನೆಯಲ್ಲಿ ಕಳ್ಳತನವಾಗಿದ್ದು ಗೊತ್ತಾಗಿತ್ತು. ಆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದರು.

‘ತಡರಾತ್ರಿ ಮನೆಯ ಬೀಗ ಒಡೆದು ಒಳನುಗ್ಗಿದ್ದ ಆರೋಪಿಗಳು, ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಕದ್ದೊಯ್ದಿದ್ದರು. ದುಶ್ಚಟ ಹಾಗೂ ಐಷಾರಾಮಿ ಜೀವನಕ್ಕಾಗಿ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದರು.

‘ಆರೋಪಿ ಜಿಂಕೆ, ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ. ಈ ಹಿಂದೆ ಸುಬ್ರಮಣ್ಯನಗರ, ರಾಜಾಜಿನಗರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಎಸಗಿದ್ದ ಆತನನ್ನು ಪೊಲೀಸರು ಬಂಧಿಸಿದ್ದರು. ಇತ್ತೀಚೆಗೆ ಜಾಮೀನು ಮೇಲೆ ಹೊರಬಂದು ಪುನಃ ಕಳ್ಳತನ ಮುಂದುವರಿಸಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು. 

ಪ್ರತಿಕ್ರಿಯಿಸಿ (+)