ಶನಿವಾರ, ಮಾರ್ಚ್ 6, 2021
19 °C

ಉತ್ತರ ಕರ್ನಾಟಕಕ್ಕೆ ಮತ್ತೆ ಕೈತಪ್ಪಿದ ಅವಕಾಶ: ಎಸ್‌.ಆರ್‌.ಪಾಟೀಲ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ‘ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿಧಾನಸಭೆಯ ವಿರೋಧಪಕ್ಷದ ನಾಯಕನ ಸ್ಥಾನ, ವಿಧಾನಪರಿಷತ್ತಿನ ಸಭಾನಾಯಕ ಸ್ಥಾನ ಹಾಗೂ ವಿರೋಧಪಕ್ಷದ ನಾಯಕನ ಸ್ಥಾನಗಳು ಉತ್ತರ ಕರ್ನಾಟಕದ ಶಾಸಕರಿಗೆ ಒಲಿಯಲಿಲ್ಲ. ಕೊನೆಗೆ ಸಭಾಪತಿ ಸ್ಥಾನವೂ ಸಿಗಲಿಲ್ಲ’

ಸಭಾಪತಿ ಸ್ಥಾನದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ನ ಹಿರಿಯ ಸದಸ್ಯ ಎಸ್‌.ಆರ್‌.ಪಾಟೀಲ ಅವರು ವಿಧಾನಪರಿಷತ್ತಿನಲ್ಲಿ ಬುಧವಾರ ಒಡಲಿನ ನೋವನ್ನು ಹಂಚಿಕೊಂಡಿದ್ದು ಹೀಗೆ. ನೂತನ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದ ಒಬ್ಬರಾದರೂ ಇಂತಹ ಆಯಕಟ್ಟಿನ ಸ್ಥಾನಕ್ಕೆ ಬಂದರೆ ಈ ಭಾಗದ ಅಭಿವೃದ್ಧಿಗೆ ಸಹಾಯ ಆಗುತ್ತದೆ ಎಂಬ ಭಾವನೆ ಇಲ್ಲಿನ ಜನರದು. ಈ ಭಾಗದವರಿಗೆ ಹುದ್ದೆಯಂತೂ ಸಿಗಲಿಲ್ಲ. ನೀವಾದರೂ ಇಲ್ಲಿನ ಜನರ ಭಾವನೆಗೆ ಪೂರಕವಾಗಿ ನಡೆದುಕೊಳ್ಳಿ. ಇಲ್ಲಿನವರು ಸಭಾಪತಿ ಆಗಿದ್ದರೆ ಈ ಭಾಗದ ಸಮಸ್ಯೆಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಿದ್ದರೋ ಅದಕ್ಕಿಂತ ದುಪ್ಪಟ್ಟು ಕಾಳಜಿ ವಹಿಸಿ. ಸರ್ಕಾರದ ಕಿವಿ ಹಿಂಡಿರಿ. ಚಾಟಿ ಏಟು ನೀಡಿ’ ಎಂದು ಕಿವಿಮಾತು ಹೇಳಿದರು.

‘ಅವಕಾಶ ವಂಚನೆ ಆಗಿದೆ ಎಂಬ ಉತ್ತರ ಕರ್ನಾಟಕದ ಜನರ ನೋವು ಕಡಿಮೆ ಆಗುವಂತೆ ಸದನ ನಡೆಸುತ್ತೀರಿ. ಇಲ್ಲಿನ ಜನರಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಳ್ಳುವಂತೆ ನಡೆದುಕೊಳ್ಳುತ್ತೀರಿ ಎಂಬ ವಿಶ್ವಾಸ ಇದೆ’ ಎಂದರು.

ನಿಕಟಪೂರ್ವ ಸಭಾಪತಿ ಬಸವರಾಜ ಹೊರಟ್ಟಿ, ‘ಸಭಾಪತಿ ಸ್ಥಾನಕ್ಕೆ ಹೊರಟ್ಟಿ ಹಾಗೂ ಎಸ್‌.ಆರ್‌.ಪಾಟೀಲ ನಡುವೆ ಪೈಪೋಟಿ ಇದೆ ಎಂದು ಮಾಧ್ಯಮಗಳು ಬಿಂಬಿಸಿದ್ದವು. ನಾವು ಯಾರೂ ರಾಜಕೀಯ ಸನ್ಯಾಸಿಗಳಲ್ಲ. ಈ ಅಧಿವೇಶನದಲ್ಲಿ ನಾನೇ ಸಭಾಪತಿಯಾಗಿ ಆಯ್ಕೆಯಾಗುತ್ತೇನೆ ಎಂಬ ಆಸೆ ಇತ್ತು. ನಮ್ಮಿಬ್ಬರನ್ನು ಬಿಟ್ಟು ಶೆಟ್ಟರಿಗೆ ಈ ಅವಕಾಶ ಒಲಿದಿದೆ. ಅವರು ಸಭಾಪತಿಯಾಗಿ ಆಯ್ಕೆ ಆದಾಗ ನಾನೇ ಆಯ್ಕೆ ಆದಷ್ಟು ಖುಷಿ ಆಗಿದೆ’ ಎಂದರು.

‘ಈ ಸದನದ ಬಗ್ಗೆ ನನಗೆ ಭಾವನಾತ್ಮಕ ನಂಟಿದೆ. ನಾನು ಪರಿಷತ್ತಿನ ಸದಸ್ಯನಾದ ಬಳಿಕ ಹುಟ್ಟಿದವರೂ ಈ ಸದನಕ್ಕೆ ಸದಸ್ಯರಾಗಿ ಬಂದಿದ್ದನ್ನು ನೋಡಿದ್ದೇನೆ. ನನ್ನ ಕಾರ್ಯನಿರ್ವಹಣೆ ಬಗ್ಗೆ ಹೆಮ್ಮೆ ಇದೆ. ಸಭಾಪತಿ ಆಗಿದ್ದ ಅಲ್ಪಾವಧಿಯಲ್ಲಿ ಸದನವನ್ನು ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಇದೆ’ ಎಂದರು.

ಸಭಾಪತಿಯಾಗಿ ಪ್ರತಾಪಚಂದ್ರ ಶೆಟ್ಟಿ

ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ಕಾಂಗ್ರೆಸ್‌ನ ಕೆ.ಪ್ರತಾಪಚಂದ್ರ ಶೆಟ್ಟಿ ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಶೆಟ್ಟಿ ಅವರ ಹೆಸರನ್ನು ಕಾಂಗ್ರೆಸ್‌ನ ಹಿರಿಯ ಸದಸ್ಯ ಎಸ್‌.ಆರ್‌.ಪಾಟೀಲ ಸೂಚಿಸಿದರು. ಐವನ್‌ ಡಿಸೋಜ ಅನುಮೋದಿಸಿದರು. ಬಳಿಕ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಕಾನೂನು ಸಚಿವ ಕೃಷ್ಣ ಬೈರೇಗೌಡ, ಸಭಾನಾಯಕಿ ಜಯಮಾಲಾ, ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಎಸ್‌.ಆರ್‌.ಪಾಟೀಲ ಹಾಗೂ ಐವನ್‌ ಡಿಸೋಜ ಅವರು ಶೆಟ್ಟರನ್ನು ಸಭಾಪತಿ ಪೀಠಕ್ಕೆ ಕರೆತಂದರು.

ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಶೆಟ್ಟಿ ಅವರನ್ನು ಉದ್ದೇಶಿಸಿ, ‘ಸೂಟ್‌ಕೇಸ್‌ ಎಲ್ಲಿ’ ಎಂದು ನಗುತ್ತಲೇ ಕೇಳಿದರು. ನೂತನ ಸಭಾಪತಿಗೆ ಶುಭಕೋರಿ ಅವರು ಪೀಠದಿಂದ ನಿರ್ಗಮಿಸಿದರು.

ನಗುಮೊಗದಿಂದಲೇ ಕಾರ್ಯಾರಂಭ

ಎಂದಿನಂತೆ ಅಚ್ಚ ಬಿಳಿ ಬಣ್ಣದ ಶರ್ಟ್‌ ಧರಿಸಿ ಸದನದಲ್ಲಿ ಕಾಣಿಸಿಕೊಂಡ ಪ್ರತಾಪಚಂದ್ರ ಶೆಟ್ಟಿ, ಸಹಸದಸ್ಯರನ್ನು ಅಕ್ಕರೆಯಿಂದ ಮಾತನಾಡಿಸಿದರು. ಸಭಾಪತಿಗಳ ಪೀಠ ಅಲಂಕರಿಸಿದ ಬಳಿಕ ನಗುಮೊಗದಿಂದಲೇ ಕಲಾಪ ನಡೆಸಿಕೊಟ್ಟರು.

ತಮ್ಮ ಆಯ್ಕೆಗೆ ಸಹಕರಿಸಿದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು. ರಾಜಕೀಯವಾಗಿ ಬೆಳೆಯಲು ಸಹಕರಿಸಿದ ಆಸ್ಕರ್‌ ಫರ್ನಾಂಡಿಸ್‌ ಅವರನ್ನು ಸ್ಮರಿಸಿಕೊಂಡರು.

‘ಸದನದ ಗೌರವ ಎತ್ತಿ ಹಿಡಿಯಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

* ಪ್ರತಾಪಚಂದ್ರ ಶೆಟ್ಟಿ ಜನರ ಪ್ರೀತಿ, ವಿಶ್ವಾಸದಿಂದಲೇ ಈ ಹುದ್ದೆಗೆ ಏರಿದ್ದಾರೆ. ಒಳ್ಳೆಯತನ ಕಾಪಾಡಿಕೊಂಡರೆ ಸ್ಥಾನಮಾನ ಸಿಗುತ್ತದೆ ಎಂಬುದಕ್ಕೆ ಉದಾಹರಣೆ

- ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

* ಸಮಾಜಕ್ಕೆ ಅಗತ್ಯವಿರುವ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಿದ್ದವರು ಪ್ರತಾಪಚಂದ್ರ ಶೆಟ್ಟಿ. ಅವರ ನಿಷ್ಕಲ್ಮಷ ಪ್ರೀತಿ, ಅಭಿಮಾನ ಅವರನ್ನು ಎತ್ತರದ ಸ್ಥಾನಕ್ಕೆ ಏರಿಸಿದೆ

- ಜಯಮಾಲಾ, ಸಭಾನಾಯಕಿ

ಶೆಟ್ಟಿ ಅವರು ಕರಾವಳಿಯ ಭೀಷ್ಮನಂತೆ. ಅವರಿಗೆ ಆಗಾಗ ವಿಪರೀತ ಸಿಟ್ಟು ಬರುತ್ತದೆ. ಇನ್ನು ಸಿಟ್ಟೇನಿದ್ದರೂ ಆಡಳಿತ ಪಕ್ಷದ ಕಡೆಗೇ ಬರಲಿ

-ಕೋಟ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷದ ನಾಯಕ

ವಿರೋಧ ಪಕ್ಷದ ನಾಯಕರ ಕಾಲ್ಗುಣ ಚೆನ್ನಾಗಿದೆ. ಅವರು ಆಯ್ಕೆ ಆದ ಬಳಿಕ ಸಭಾನಾಯಕಿ ಹಾಗೂ ಸಭಾಪತಿ ಸ್ಥಾನಗಳೆರಡೂ ಕರಾವಳಿ ಜಿಲ್ಲೆಯವರಿಗೆ ಒಲಿದಿವೆ

-ಸಿ.ಎಂ.ಇಬ್ರಾಹಿಂ, ಕಾಂಗ್ರೆಸ್‌ ಸದಸ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು