ಉತ್ತರಪತ್ರಿಕೆ ಕೊಡದಿದ್ದಕ್ಕೇ ಸಹಪಾಠಿಗೆ ಇರಿದ!

7
ಪರೀಕ್ಷಾ ಕೊಠಡಿಯಲ್ಲಿ ಘಟನೆ; ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಪೊಲೀಸರ ವಶಕ್ಕೆ

ಉತ್ತರಪತ್ರಿಕೆ ಕೊಡದಿದ್ದಕ್ಕೇ ಸಹಪಾಠಿಗೆ ಇರಿದ!

Published:
Updated:

ಬೆಂಗಳೂರು: ಪರೀಕ್ಷೆ ನಡೆಯುತ್ತಿದ್ದ ವೇಳೆ ನಕಲು ಮಾಡಲು ಉತ್ತರ ಪತ್ರಿಕೆ ಕೊಡಲಿಲ್ಲವೆಂಬ ಕಾರಣಕ್ಕೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ, ಸಹಪಾಠಿಗೆ ಚಾಕುವಿನಿಂದ ಇರಿದಿದ್ದಾನೆ.

ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿರುವ ಶಾಲೆಯೊಂದರಲ್ಲಿ ಸೋಮವಾರ ಈ ಘಟನೆ ನಡೆದಿದೆ. ಗಾಯಗೊಂಡಿರುವ ಸಹಪಾಠಿಗೆ ಸುಂಕದಕಟ್ಟೆಯ ಶ್ರೀಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಕೊಲೆ ಯತ್ನ ಆರೋಪದಡಿ ಆರೋಪಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಬಾಲಮಂದಿರಕ್ಕೆ ಕಳುಹಿಸಿದ್ದಾರೆ.

‘ಶಾಲೆಯ ಎಸ್ಸೆಸ್ಸೆಲ್ಸಿ ತರಗತಿಯಲ್ಲಿ 49 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಜ. 14ರಿಂದಲೇ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆಗಳು ಆರಂಭವಾಗಿವೆ. ಸೋಮವಾರ ಬೆಳಿಗ್ಗೆ 9 ಗಂಟೆಗೆ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ನಡೆಯುತ್ತಿದ್ದ ಕೊಠಡಿಯಲ್ಲಿ ಈ ಘಟನೆ ನಡೆದಿದೆ’ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ಹೇಳಿದರು.

‘ಗಾಯಾಳು ವಿದ್ಯಾರ್ಥಿ ಪರೀಕ್ಷೆ ಬರೆಯುವುದರಲ್ಲಿ ಮಗ್ನನಾಗಿದ್ದ. 5ನೇ ಬೆಂಚಿನಲ್ಲಿದ್ದ ಬಾಲಾರೋಪಿ, ಬೆಳಿಗ್ಗೆ 11 ಗಂಟೆಗೆ ಆತನ ಬಳಿ ಹೋಗಿದ್ದ. ‘ನಿನ್ನ ಉತ್ತರ ಪತ್ರಿಕೆ ಕೊಡು. ಅದನ್ನು ನೋಡಿಕೊಂಡು ನಾನು ಬರೆಯುತ್ತೇನೆ’ ಎಂದು ಪೀಡಿಸಲಾರಂಭಿಸಿದ್ದ.  ಆಗ ವಿದ್ಯಾರ್ಥಿ, ‘ನಾನೂ ಉತ್ತರ ಬರೆಯಬೇಕು. ಆ ಮೇಲೆ ಕೊಡುತ್ತೇನೆ’ ಎಂದು ಹೇಳಿ ಕಳುಹಿಸಿದ್ದ’.

‘ಬೆಳಿಗ್ಗೆ 11.20 ಗಂಟೆಗೆ ಪುನಃ ವಿದ್ಯಾರ್ಥಿ ಬಳಿ ಹೋಗಿದ್ದ ಬಾಲಾರೋಪಿ, ‘ಇನ್ನು ಮುಗಿದಿಲ್ವಾ ಬರೆಯೋದು. ಬೇಗ ನಿನ್ನ ಉತ್ತರ ಪತ್ರಿಕೆ ಕೊಡು. ಸಮಯ ಕಡಿಮೆ ಇದೆ’ ಎಂದು ಉತ್ತರ ಪತ್ರಿಕೆ ಕಿತ್ತುಕೊಳ್ಳಲು ಯತ್ನಿಸಿದ್ದ. ಆಗ ವಿದ್ಯಾರ್ಥಿ, ‘ನಾನು ಬರೆಯುವುದು ಮುಗಿದಿಲ್ಲ. ಕಡಿಮೆ ಸಮಯವಿದೆ. ಕಾಡಿಸಬೇಡ. ಹೋಗು’ ಎಂದು ಹೇಳಿದ್ದ.’

‘ಅಷ್ಟಕ್ಕೆ ಕೋಪಗೊಂಡ ಬಾಲಾರೋಪಿ, ‘ನಿನ್ನದು ಬಹಳ ಆಯ್ತು. ನಿನಗೆ ಒಂದು ಗತಿ ಕಾಣಿಸುತ್ತೇನೆ’ ಎಂದು ಜೀವ ಬೆದರಿಕೆವೊಡ್ಡಿದ್ದ. ನಂತರ, ತನ್ನ ಜೇಬಿನಲ್ಲಿದ್ದ ಚಾಕುವಿನಿಂದ ವಿದ್ಯಾರ್ಥಿಯ ಹೊಟ್ಟೆಗೆ ಇರಿದಿದ್ದ’ ಎಂದು ಪೊಲೀಸರು
ಹೇಳಿದರು.

‘ಹೊಟ್ಟೆಯಿಂದ ರಕ್ತ ಬರಲಾರಂಭಿಸಿತ್ತು. ನೋವು ತಾಳಲಾರದೇ ವಿದ್ಯಾರ್ಥಿ ಕಿರುಚಾಡಿದ್ದ. ಸ್ಥಳಕ್ಕೆ ಬಂದ ಮುಖ್ಯಶಿಕ್ಷಕರು ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು. ಕೆಲವೇ ನಿಮಿಷಗಳಲ್ಲಿ ಶಾಲೆಗೆ ಹೋಗಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಬಾಲಾರೋಪಿಯನ್ನು ವಶಕ್ಕೆ ಪಡೆದರು’ ಎಂದು
ವಿವರಿಸಿದರು.

ಪಕ್ಕದ ಕೊಠಡಿಗೆ ಹೋಗಿದ್ದ ಶಿಕ್ಷಕಿ

‘ಶಾಲೆಯ ಅಕ್ಕ–ಪಕ್ಕದ ಕೊಠಡಿಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಘಟನೆ ನಡೆದ ಕೊಠಡಿಯಲ್ಲಿ ಮೇಲ್ವಿಚಾರಕರಾಗಿದ್ದ ಶಿಕ್ಷಕಿ, ಪಕ್ಕದ ಕೊಠಡಿಗೂ ಆಗಾಗ ಹೋಗಿ ಬರುತ್ತಿದ್ದರು. ಘಟನೆ ನಡೆದ ವೇಳೆ ಶಿಕ್ಷಕಿಯು ಪಕ್ಕದ ಕೊಠಡಿಯಲ್ಲಿದ್ದರು. ವಿದ್ಯಾರ್ಥಿ ಕಿರುಚಾಟ ಕೇಳಿಯೇ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕಿ ಕೊಠಡಿಗೆ ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

ಚಾಕು ತೋರಿಸಿ ಬೆದರಿಸುತ್ತಿದ್ದ

‘ಮನೆಯಿಂದಲೇ ಚಾಕುವನ್ನು ತಂದಿದ್ದ ಬಾಲಾರೋಪಿ, ಪರೀಕ್ಷೆ ಬರೆಯುತ್ತಿದ್ದ ಹಲವು ಸಹಪಾಠಿಗಳಿಗೆ ತೋರಿಸಿ ಬೆದರಿಸುತ್ತಿದ್ದ. ಪರೀಕ್ಷೆ ಅವಧಿಯಲ್ಲಷ್ಟೆ ಅಲ್ಲದೇ ತರಗತಿಯಲ್ಲೂ ಸಹಪಾಠಿಗಳಿಗೆ ಕಿರುಕುಳ ನೀಡುತ್ತಿದ್ದ. ಆ ಬಗ್ಗೆ ಕೆಲವು ಸಹಪಾಠಿಗಳು ಹೇಳಿಕೆ ನೀಡಿದ್ದಾರೆ’ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 3

  Frustrated
 • 10

  Angry

Comments:

0 comments

Write the first review for this !