ಸೈನಿಕರ ‘ಸ್ಮರಣಾ ದಿನ’

7

ಸೈನಿಕರ ‘ಸ್ಮರಣಾ ದಿನ’

Published:
Updated:
Deccan Herald

ಜಗತ್ತಿನಲ್ಲಿ ಅತ್ಯಾಧುನಿಕ ಯುದ್ಧಾಸ್ತ್ರಗಳನ್ನು ಬಳಸಿದ ಮೊದಲ ಮಹಾಯುದ್ಧ ಕೊನೆಗೊಂಡದ್ದು 1918ರ ನವೆಂಬರ್‌ 11ರಂದು. 1914ರ ಜುಲೈನಲ್ಲಿ ಆರಂಭವಾದ ಈ ಯುದ್ಧ 1565 ದಿನಗಳವರೆಗೆ ನಡೆದಿತ್ತು. ಲಕ್ಷಾಂತರ ಜನರ ಸಾವು ನೋವಿಗೆ, ಅಪಾರ ಆಸ್ತಿ ಪಾಸ್ತಿ ನಷ್ಟಕ್ಕೆ ಕಾರಣವಾದ ಈ ಯುದ್ಧದ ವರ್ಸೈಲ್ಸ್‌ ಶಾಂತಿ ಒಪ್ಪಂದಿಂದ ಅಂತ್ಯವಾಯಿತು.

ಈ ಯುದ್ಧದಲ್ಲಿ ಮಡಿದ ಜಗತ್ತಿನ ಸೈನಿಕರು, ಅಮಾಯಕ ಜನರನ್ನು ಸ್ಮರಿಸುವ ಕಾರ್ಯ ವಿಶ್ವದಲ್ಲಿ 1919ರಿಂದ ನಡೆದು ಬಂದಿದೆ. ಆ ವರ್ಷದ 11ನೇ ತಿಂಗಳ, 11ನೇ ತಾರೀಖಿನಂದು ಬೆಳಿಗ್ಗೆ 11 ಗಂಟೆಗೆ ಅವರನ್ನು ಸ್ಮರಿಸಿ, ಗೌರವ ಅರ್ಪಿಸಲಾಯಿತು. ಅದೇ ಪರಂಪರೆಯನ್ನು ವಿಶ್ವದಾದ್ಯಂತ ಈಗಲೂ ಮುಂದುವರೆಸಿಕೊಂಡು ಬರಲಾಗಿದೆ.

ಇದನ್ನು ‘ಸ್ಮರಣಾ ದಿನ’ (ರಿಮೆಂಬರೆನ್ಸ್‌ ಡೇ) ಎಂದು ಆಚರಿಸಲಾಗುತ್ತದೆ. ಈ ದಿನಾಚರಣೆಗೆ ಇದೀಗ ನೂರು ವರ್ಷ. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ‘ಸೇಂಟ್‌ ಮಾರ್ಕ್ಸ್‌ ಕೆಥೆಡ್ರಲ್‌’ ಚರ್ಚ್‌ ಈ ‘ಸ್ಮರಣಾ ದಿನ’ವನ್ನು ಅಂದಿನಿಂದ ಆಚರಿಸಿಕೊಂಡು ಬಂದಿದೆ. ಈ ಬಾರಿಯ ನೂರನೇ ವರ್ಷದ ಆಚರಣೆಯನ್ನು ಅದು ಇದೇ 11ರಂದು ಬೆಳಿಗ್ಗೆ 11 ಗಂಟೆಗೆ ಆಚರಿಸಲಿದೆ.

ನಗರದಲ್ಲಿರುವ ನಿವೃತ್ತ ಯೋಧರು ಹಾಗೂ ಹಾಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸೇನಾಧಿಕಾರಿಗಳು ತಮ್ಮ ಸಮವಸ್ತ್ರ ಮತ್ತು ಪಡೆದ ಪದಕಗಳೊಂದಿಗೆ ಅಂದಿನ ಸಭೆಯಲ್ಲಿ ಭಾಗವಹಿಸುವರು. ಮಹಾಯುದ್ಧದಲ್ಲಿ ಸಾವನ್ನಪ್ಪಿದ ಯೋಧರಿಗೆ ಪುಷ್ಪನಮನ ಸಲ್ಲಿಸಿ, ಗೌರವ ಸೂಚಿಸುವರು.

ಈ ವೇಳೆ ನೆರೆದಿರುವ ಎಲ್ಲರೂ ಎರಡು ನಿಮಿಷ ಮೌನಾಚರಿಸುವರು (ಮೊದಲ ಮಹಾಯುದ್ಧದ ನಂತರ ಒಂದು ನಿಮಿಷ ಮೌನಾಚರಿಸಲಾಗುತ್ತಿತ್ತು. 1945ರಲ್ಲಿ ಎರಡನೇ ಮಹಾಯುದ್ಧ ಮುಕ್ತಾಯವಾದ ಬಳಿಕ, ಆ ಯುದ್ಧದಲ್ಲಿ ಮಡಿದವರನ್ನೂ ಸ್ಮರಿಸಲು ಮತ್ತೊಂದು ನಿಮಿಷ ಸೇರಿಸಲಾಯಿತು).

‘ಮಿಲಿಟರಿ ಶಿಷ್ಟಾಚಾರದಂತೆಯೇ ಇಡೀ ಕಾರ್ಯಕ್ರಮ ನಡೆಯುತ್ತದೆ. ರಾಷ್ಟ್ರಗೀತೆಯೊಂದಿಗೆ ಮುಗಿಯುವ ಈ ಸ್ಮರಣಾ ದಿನ, ಮಹಾಯುದ್ಧಗಳಲ್ಲಿ ಮಡಿದ ಯೋಧರನ್ನಷ್ಟೇ ಅಲ್ಲದೆ, ಭಯೋತ್ಪಾದನೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ದೇಶಕ್ಕಾಗಿ ಪ್ರಾಣ ತ್ಯಜಿಸಿದ ಯೋಧರ ಮತ್ತು ನಾಗರಿಕರನ್ನು ಸ್ಮರಿಸುವ ದಿನವಾಗಿದೆ’ ಎನ್ನುತ್ತಾರೆ ಸೇಂಟ್‌ ಮಾರ್ಕ್ಸ್‌ ಕೆಥೆಡ್ರಲ್‌ ಚರ್ಚ್‌ನ ಆಡಳಿತಾಧಿಕಾರಿ ಅರುಣ್‌ ಕುಮಾರ್‌.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !