ಬುಧವಾರ, ಏಪ್ರಿಲ್ 14, 2021
24 °C
ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ, ಬಿಬಿಎಂಪಿ ಅನುದಾನದಲ್ಲೂ ಸಿಂಹಪಾಲು

ಮೈತ್ರಿಯಲ್ಲೂ ‘ಅತೃಪ್ತ’ರದ್ದೇ ಮೇಲು‘ಕೈ’!

ಮಂಜುನಾಥ ಹೆಬ್ಬಾರ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ (2018–19) ಬಿಬಿಎಂಪಿ ಅನುದಾನದಲ್ಲಿ ಸಿಂಹಪಾಲು ಕಾಂಗ್ರೆಸ್‌ ಶಾಸಕರ ಪಾಲಾಗಿದೆ. ಮೈತ್ರಿ ಸರ್ಕಾರದ ಮುನಿಸು ತೋರಿರುವ ಶಾಸಕರು ಪ್ರತಿನಿಧಿಸುವ ಯಶವಂತಪುರ, ರಾಜರಾಜೇಶ್ವರಿನಗರ ಹಾಗೂ ಕೆ.ಆರ್‌.ಪುರ ಕ್ಷೇತ್ರಗಳಿಗೇ ₹130 ಕೋಟಿ ಅನುದಾನ ದೊರಕಿದೆ.

ಇದಲ್ಲದೆ, ‘ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ’ಯಲ್ಲಿ ಜೆಡಿಎಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಸರಾಸರಿ ₹478.5 ಕೋಟಿ, ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಸರಾಸರಿ ₹250 ಕೋಟಿ ಹಾಗೂ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಸರಾಸರಿ ₹128 ಕೋಟಿ ಅನುದಾನ ನೀಡಲಾಗಿದೆ. ಇದರಲ್ಲಿ ಮುನಿರತ್ನ ಅವರ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ₹557.10 ಕೋಟಿ, ಎಸ್‌.ಟಿ.ಸೋಮಶೇಖರ್ ಅವರ ಯಶವಂತಪುರ ಕ್ಷೇತ್ರಕ್ಕೆ ₹339.20 ಕೋಟಿ ಹಾಗೂ ಬೈರತಿ ಬಸವರಾಜ್ ಅವರ ಕೆ.ಆರ್‌.‍ಪುರ ಕ್ಷೇತ್ರಕ್ಕೆ ₹337 ಕೋಟಿ ಅನುದಾನ ನೀಡಲಾಗಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ‘ತ್ರಿಮೂರ್ತಿ’ ಕ್ಷೇತ್ರಗಳಿಗೆ (ರಾಜರಾಜೇಶ್ವರಿನಗರ, ಯಶವಂತಪುರ ಹಾಗೂ ಕೆ.ಆರ್‌.ಪುರ) ಶೇ 60ರಷ್ಟು ಅನುದಾನ ಹಂಚಿಕೆ ಮಾಡಲಾಗಿತ್ತು. ಇದಕ್ಕೆ ಕಾಂಗ್ರೆಸ್‌ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಮೈತ್ರಿ ಸರ್ಕಾರದಲ್ಲೂ ಈ ಶಾಸಕರೇ ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿ ಶಾಸಕರು ಪ್ರತಿನಿಧಿಸುವ ಮಲ್ಲೇಶ್ವರ, ರಾಜಾಜಿನಗರ ಹಾಗೂ ಸಿ.ವಿ.ರಾಮನ್‌ ಕ್ಷೇತ್ರಗಳಿಗೆ ಪಾಲಿಕೆಯಿಂದ ಈ ವರ್ಷ ತಲಾ ₹5 ಕೋಟಿ ಬಿಡುಗಡೆಯಾಗಿದೆ. ಕನಿಷ್ಠ ಅನುದಾನ ಪಡೆದ ಕ್ಷೇತ್ರಗಳಿವು. ಮುಂಬೈಯಲ್ಲಿ ಅತೃಪ್ತ ಶಾಸಕರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವವರು ಮಲ್ಲೇಶ್ವರದ ಶಾಸಕ ಸಿ.ಎನ್‌.ಅಶ್ವತ್ಥನಾರಾಯಣ ಎಂಬುದು ‘ದೋಸ್ತಿ’ಗಳ ಆರೋಪ.

ಜೆಡಿಎಸ್‌ ಶಾಸಕ ಆರ್‌.ಮಂಜುನಾಥ್‌ ಪ್ರತಿನಿಧಿಸುವ ದಾಸರಹಳ್ಳಿ ಕ್ಷೇತ್ರಕ್ಕೆ ನವ ಬೆಂಗಳೂರು ಯೋಜನೆಯಲ್ಲಿ ₹528 ಕೋಟಿ ಹಾಗೂ ಪಾಲಿಕೆಯಿಂದ ₹50 ಕೋಟಿ ಅನುದಾನ ನೀಡಲಾಗಿದೆ. ಮುಂಬೈ ಸೇರಿರುವ ಜೆಡಿಎಸ್‌ನ ಮತ್ತೊಬ್ಬ ಶಾಸಕ ಕೆ.ಗೋಪಾಲಯ್ಯ ಕ್ಷೇತ್ರಕ್ಕೆ ನವ ಬೆಂಗಳೂರು ಯೋಜನೆಯಲ್ಲಿ ₹424.60 ಕೋಟಿ ಹಾಗೂ ಬಿಬಿಎಂಪಿಯಿಂದ ₹35 ಕೋಟಿ ಅನುದಾನ ಕೊಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು