ಭೂಭರ್ತಿ ಪ್ರದೇಶಗಳ ಅಭಿವೃದ್ಧಿಗೆ ಸೇತುವೆ ದುಡ್ಡು?

ಮಂಗಳವಾರ, ಮಾರ್ಚ್ 26, 2019
26 °C
ಮಿನರ್ವ ವೃತ್ತ– ಹಡ್ಸನ್‌ ವೃತ್ತ: ಸ್ಟೀಲ್‌ ಬ್ರಿಜ್‌ ಯೋಜನೆ ಕೈಬಿಟ್ಟ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಅನ್ಯ ಉದ್ದೇಶಕ್ಕೆ ಅನುದಾನ ಬಳಕೆ

ಭೂಭರ್ತಿ ಪ್ರದೇಶಗಳ ಅಭಿವೃದ್ಧಿಗೆ ಸೇತುವೆ ದುಡ್ಡು?

Published:
Updated:

ಬೆಂಗಳೂರು: ಮಿನರ್ವ ವೃತ್ತದಿಂದ ಹಡ್ಸನ್‌ ವೃತ್ತದವರೆಗೆ ಉಕ್ಕಿನ ಸೇತುವೆ ನಿರ್ಮಿಸುವ ಯೋಜನೆಯನ್ನು ಬಿಬಿಎಂಪಿ ಕೈಬಿಟ್ಟಿದೆ. ಇದಕ್ಕೆ ಮಂಜೂರಾಗಿದ್ದ ₹ 135 ಕೋಟಿ ಅನುದಾನವನ್ನು ಬೆಳ್ಳಹಳ್ಳಿಯಲ್ಲಿ ಕಸ ವಿಲೇವಾರಿ ಭೂಭರ್ತಿ ಘಟಕದ ಆಸುಪಾಸಿನ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲು ಮುಂದಾಗಿದೆ.

ಈ ಪ್ರಸ್ತಾವಕ್ಕೆ ಅನುಮೋದನೆ ನೀಡುವಂತೆ ಕೋರಿ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್‌ ಅವರು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಇದೇ 1ರಂದು ಪತ್ರ ಬರೆದಿದ್ದಾರೆ.

ಬೆಳ್ಳಹಳ್ಳಿ ಗ್ರಾಮದ ಕ್ವಾರಿ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ, ಭೂಭರ್ತಿ ಘಟಕದ ಬಳಿ ಕಸ ಸಂಗ್ರಹದಿಂದ ಉಂಟಾಗುವ ದುರ್ವಾಸನೆ ತಡೆಯಲು, ಉದ್ಯಾನ ನಿರ್ಮಿಸಲು, ಗಿಡಗಳನ್ನು ಬೆಳೆಸಲು, ಸೊಳ್ಳೆ ಮತ್ತು ಇತರೆ ಕ್ರಿಮಿಗಳ ನಿಯಂತ್ರಣಕ್ಕೆ, ಆಸುಪಾಸಿನ ಹಳ್ಳಿಗಳ ನಿವಾಸಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಹಾಗೂ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ₹ 135 ಕೋಟಿ ಮೊತ್ತದ ಕ್ರಿಯಾಯೋಜನೆಯನ್ನು ಪಾಲಿಕೆ ತಯಾರಿಸಿದೆ.  

ಉಕ್ಕಿನ ಸೇತುವೆ ನಿರ್ಮಿಸಲು 2016ರಲ್ಲಿ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ₹ 135 ಕೋಟಿ ಮಂಜೂರಾಗಿತ್ತು. ಈ ಯೋಜನೆಗೆ ಮೊದಲ ಬಾರಿ ಟೆಂಡರ್‌ ಕರೆದಾಗ ಗುತ್ತಿಗೆದಾರರು ನಮೂದಿಸಿದ ಕನಿಷ್ಠ ಮೊತ್ತವು ಅಂದಾಜು ಮೊತ್ತಕ್ಕಿಂತ ಶೇ 48ರಷ್ಟು ಹೆಚ್ಚು ಇತ್ತು. ಇದಕ್ಕೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ಬಳಿಕ ಮರು ಟೆಂಡರ್ ಕರೆದಾಗಲೂ ಗುತ್ತಿಗೆದಾರರು ನಮೂದಿಸಿದ್ದ ಕನಿಷ್ಠ ಮೊತ್ತವು ಅಂದಾಜು ಮೊತ್ತಕ್ಕಿಂತ ಶೇ 32ರಷ್ಟು ಹೆಚ್ಚು ಇತ್ತು. ಇದಕ್ಕೂ ಅನುಮೋದನೆ ನೀಡಲು ನಿರಾಕರಿಸಿದ್ದ ನಗರಾಭಿವೃದ್ಧಿ ಇಲಾಖೆ ಮತ್ತೊಮ್ಮೆ ಟೆಂಡರ್‌ ಕರೆಯುವಂತೆ ಇತ್ತೀಚೆಗೆ ಸಲಹೆ ನೀಡಿತ್ತು.

ಉಕ್ಕಿನ ಸೇತುವೆ ಯೋಜನೆಗೆ ಮತ್ತೊಮ್ಮೆ ಟೆಂಡರ್‌ ಕರೆಯಲು ಪಾಲಿಕೆ ಸಿದ್ಧತೆ ನಡೆಸುತ್ತಿದ್ದಂತೆಯೇ ಸರ್ಕಾರ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಅನುಷ್ಠಾನಕ್ಕೆ ಮಂಜೂರಾತಿ ನೀಡಿತ್ತು. ಈ ಕಾರಿಡಾರ್‌ನ ಒಂದು ಪಥವು ಮಿನರ್ವ ವೃತ್ತದಿಂದ ಹಡ್ಸನ್‌ ವೃತ್ತದ ಮೂಲಕ ಹಾದುಹೋಗಲಿದೆ. ಹಾಗಾಗಿ ಉಕ್ಕಿನ ಸೇತುವೆ ಕಾಮಗಾರಿಯನ್ನು ಕೈಬಿಡಲು ಬಿಬಿಎಂಪಿ ನಿರ್ಧರಿಸಿದೆ. 

ಅನ್ಯ ಉದ್ದೇಶಕ್ಕೆ ಅನುದಾನ– ಅಸಮಾಧಾನ: ‘ವಾಹನ ದಟ್ಟಣೆ ನಿವಾರಣೆ ದೃಷ್ಟಿಯಿಂದ ನಗರದಲ್ಲಿ ಅನೇಕ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಿಸುವ ಅನಿವಾರ್ಯ ಇದೆ. ಅನುದಾನ ಹೊಂದಿಸಲು ಸಾಧ್ಯವಾಗದ ಕಾರಣ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆಗಿಲ್ಲ. ಉಕ್ಕಿನ ಸೇತುವೆ ಯೋಜನೆಯ ಅನುದಾನ ಬಳಸಿ ಭೂಭರ್ತಿ ಘಟಕದ ಬಳಿ ಮೂಲಸೌಕರ್ಯ ನಿರ್ಮಿಸುವುದಕ್ಕಿಂತ ಆ ಮೊತ್ತವನ್ನು ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಿಸಲು ಬಳಸಬೇಕಿತ್ತು’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಈ ಮೇಲ್ಸೇತುವೆಗೆ 2009ರಲ್ಲಿಯೇ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿತ್ತು. ಸೇತುವೆ ವಿನ್ಯಾಸದಿಂದ ಪಾರಂಪರಿಕ ಕಟ್ಟಡಗಳ ಅಂದಕ್ಕೆ ಧಕ್ಕೆ ಉಂಟಾಗಲಿದೆ ಎಂದು ಕೆಲವು ಸಂಘಟನೆಗಳು ದೂರಿದ್ದರಿಂದಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು.

ಬಳಿಕ 2014ರ ಫೆಬ್ರುವರಿ 14ರಂದು ನಡೆದ ಕೇಂದ್ರ ಮಂಜೂರು ಮತ್ತು ನಿರ್ವಹಣಾ ಸಮಿತಿ (ಸಿಎಸ್‌ಎಂಸಿ) ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಆ ಬಳಿಕ ನಗರೋತ್ಥಾನ ಯೋಜನೆಯಡಿ ₹135 ಕೋಟಿ ವೆಚ್ಚದ ಕ್ರಿಯಾಯೋಜನೆಗೆ 2016ರ ಜನವರಿ 8ರಂದು ಅನುಮೋದನೆ ನೀಡಲಾಗಿತ್ತು.

 

ಅನ್ಯ ಉದ್ದೇಶಕ್ಕೆ ಅನುದಾನ– ಕಾರಣವೇನು?

ಬಾಗಲೂರು ಭೂಭರ್ತಿ ಘಟಕದಲ್ಲಿ ಕಸ ವಿಲೇವಾರಿ ಮಾಡದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2017ರಲ್ಲಿ ತಡೆಯಾಜ್ಞೆ ನೀಡಿತ್ತು. ಸ್ಥಳೀಯರ ಪ್ರತಿಭಟನೆಯಿಂದಾಗಿ ಮಿಟ್ಟಗಾನಹಳ್ಳಿ ಭೂಭರ್ತಿ ಘಟಕವನ್ನೂ ಸ್ಥಗಿತಗೊಳಿಸಲಾಗಿದೆ. ಈ ಎರಡು ಘಟಕಗಳಿಗೆ ಕೊಂಡೊಯ್ಯುತ್ತಿದ್ದ ಕಸವನ್ನು ಪಾಲಿಕೆ ಬೆಳ್ಳಹಳ್ಳಿ ಘಟಕದಲ್ಲೇ ಭೂಭರ್ತಿ ಮಾಡುತ್ತಿದೆ. ನಿತ್ಯ 275ರಿಂದ 300 ಕಾಂಪ್ಯಾಕ್ಟರ್‌ ವಾಹನಗಳು ಇಲ್ಲಿಗೆ ಕಸವನ್ನು ಒಯ್ಯುತ್ತಿವೆ. 

2019ರ ಜ. 24ರಂದು ಬೆಳ್ಳಹಳ್ಳಿ ಗ್ರಾಮಸ್ಥರೂ ಕಾಂಪ್ಯಾಕ್ಟರ್‌ಗಳನ್ನು ತಡೆದು ಪ್ರತಿಭಟಿಸಿದ್ದರು. ಬಳಿಕ ಮೇಯರ್‌ ಗಂಗಾಂಬಿಕೆ ಹಾಗೂ ಪಾಲಿಕೆ ಆಯುಕ್ತರು ಗ್ರಾಮಸ್ಥರ ಜೊತೆ ಸಂಧಾನ ಸಭೆ ನಡೆಸಿದ್ದರು. ಅವರ ಬೇಡಿಕೆಗಳಿಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದ್ದರು.

ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ ಹಾಗೂ ಜಕ್ಕೂರು ವಾರ್ಡ್‌ನ ಸದಸ್ಯ ಕೆ.ಎ.ಮುನೀಂದ್ರ ಕುಮಾರ್‌ ಅವರೂ ಭೂಭರ್ತಿ ಘಟಕಗಳ ಆಸುಪಾಸಿ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಾಲಿಕೆಗೆ ಪತ್ರ ಬರೆದಿದ್ದರು.

 

ಭೂಭರ್ತಿ: ಗ್ರಾಮಗಳಿಗೆ ₹ 1,465 ಕೋಟಿ ಪ್ರಸ್ತಾವ?

ಭೂಭರ್ತಿ ಘಟಕಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರವು 2018–19, 2019–20 ಹಾಗೂ 2020–21ನೇ ಸಾಲಿಗೆ ₹ 753 ಕೋಟಿ ಅನುದಾನ ಮಂಜೂರು ಮಾಡಿದೆ. ಈ ಮೊತ್ತವನ್ನು ₹ 1,465 ಕೋಟಿಗಳಿಗೆ ಪರಿಷ್ಕರಿಸುವಂತೆಯೂ ಪಾಲಿಕೆ ಆಯುಕ್ತರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಇದೇ ಮಾರ್ಚ್‌ 1ರಂದು ಪತ್ರ ಬರೆದಿದ್ದಾರೆ.

ಮಾರೇನಹಳ್ಳಿಯಲ್ಲಿ ಕಸದ ವೈಜ್ಞಾನಿಕ ವಿಲೇವಾರಿ ಘಟಕ ಸ್ಥಾಪನೆಗೆ ₹ 125 ಕೋಟಿ ಹಾಗೂ ಹುಲ್ಲಹಳ್ಳಿಯಲ್ಲಿ ಕಸದ ವೈಜ್ಞಾನಿಕ ವಿಲೇವಾರಿ ಘಟಕದ ಸ್ಥಾಪನೆಗೆ ₹ 41.20 ಕೋಟಿ ಸೇರಿ ಒಟ್ಟು ₹ 166.20 ಕೋಟಿಯನ್ನು ತುರ್ತಾಗಿ ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ.

ಅಂಕಿ ಅಂಶ

4,200 ಟನ್‌ -ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ಕಸ

7 -ಕಸ ನಿರ್ವಹಣಾ ಘಟಕಗಳು

1,500 ಟನ್‌ -ಕಸವನ್ನು ನಿತ್ಯ ಸಂಸ್ಕರಣೆಗೆ ಒಳಪಡಿಸುವ ಸಾಮರ್ಥ್ಯ ಈ ಘಟಕಗಳಿಗೆ ಇದೆ

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !