ಪ್ರತ್ಯೇಕ ರಾಜ್ಯದ ಕೂಗಿಗೆ ಅಪಸ್ವರ: ಅಖಂಡ ಕರ್ನಾಟಕ ಉಳಿವಿಗಾಗಿ ಧರಣಿ

7

ಪ್ರತ್ಯೇಕ ರಾಜ್ಯದ ಕೂಗಿಗೆ ಅಪಸ್ವರ: ಅಖಂಡ ಕರ್ನಾಟಕ ಉಳಿವಿಗಾಗಿ ಧರಣಿ

Published:
Updated:

ವಿಜಯಪುರ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ವಿವಿಧ ಸಂಘಟನೆಗಳು ನೀಡಿದ್ದ ಬಂದ್‌ ಕರೆಗೆ, ಜಿಲ್ಲೆಯ ವ್ಯಾಪ್ತಿಯಲ್ಲಿ ಬೆಂಬಲ ವ್ಯಕ್ತವಾಗಿಲ್ಲ.

ಗುರುವಾರ ನಸುಕಿನಿಂದಲೂ ಜನಜೀವನ ಎಂದಿನಂತೆಯೇ ನಡೆಯಿತು. ಸಾರಿಗೆ ಸಂಚಾರಕ್ಕೆ ಎಲ್ಲೂ ಅಡ್ಡಿಯಾಗಲಿಲ್ಲ. ಶಾಲಾ–ಕಾಲೇಜು, ಸರ್ಕಾರಿ ಕಚೇರಿಗಳು ನಿತ್ಯದಂತೆಯೇ ಕಾರ್ಯ ನಿರ್ವಹಿಸಿದ ಚಿತ್ರಣ ಗೋಚರಿಸಿತು.

ವಿಜಯಪುರ ನಗರವೂ ಸೇರಿದಂತೆ ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ, ಇಂಡಿ, ಚಡಚಣ, ತಾಂಬಾ, ಮುದ್ದೇಬಿಹಾಳ, ತಾಳಿಕೋಟೆ ಪಟ್ಟಣಗಳಲ್ಲೂ ಸಹ ಬಂದ್‌ ಆಚರಣೆಗೊಳ್ಳಲಿಲ್ಲ.

ಅಖಂಡ ಕರ್ನಾಟಕದ ಉಳಿವಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಬಳಿ ಸಾಂಕೇತಿಕ ಧರಣಿ ನಡೆಸಿ, ಜಿಲ್ಲಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರಗೆ ಮನವಿ ಸಲ್ಲಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮುಲ್ಲಾ ಮಾತನಾಡಿ ‘ಉತ್ತರ ಕರ್ನಾಟಕದ ಹಲ ಮಹನೀಯರ ತ್ಯಾಗ, ಬಲಿದಾನ ಮತ್ತು ಪರಿಶ್ರಮದ ಫಲವಾಗಿ ಕರ್ನಾಟಕ ಏಕೀಕರಣಗೊಂಡಿದೆ. ಇದೀಗ ರಾಜಕೀಯ ಹಿತಾಸಕ್ತಿಗಾಗಿ ಅಖಂಡ ಕರ್ನಾಟಕವನ್ನು ಇಬ್ಭಾಗ ಮಾಡಲು ಯತ್ನಿಸಲಾಗುತ್ತಿದೆ.

ಇದರಲ್ಲಿ ಎಳ್ಳಷ್ಟು ಜನಪರ ಕಾಳಜಿಯಿಲ್ಲ. ಹೀಗಾಗಿ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಕರವೇ ಬೆಂಬಲವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನಾದರೂ ಎಚ್ಚೆತ್ತುಕೊಂಡು, ಈ ಭಾಗಕ್ಕೆ ನ್ಯಾಯಯುತವಾಗಿ ಅಭಿವೃದ್ಧಿಗೆ ಅನುದಾನ ನೀಡಲು ಮುಂದಾಗಬೇಕು. ಈ ಭಾಗದ ಜನಪ್ರತಿನಿಧಿಗಳು ಸಹ ಅಧಿವೇಶನದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಸಾಯಬಣ್ಣ ಮಡಿವಾಳರ ಮಾತನಾಡಿ ‘ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ಕರವೇ ಮೂಲ ಉದ್ದೇಶ. ಜನಪ್ರತಿನಿಧಿಗಳು ಈ ಭಾಗದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದರ ಕುರಿತು ಮನವರಿಕೆ ಮಾಡಿಕೊಳ್ಳಬೇಕು. ಉತ್ತರ ಮತ್ತು ದಕ್ಷಿಣ ಎಂಬುದನ್ನು ಬಿಟ್ಟು ಅಖಂಡ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.

ಜಿಲ್ಲಾ ಘಟಕದ ಉಪಾಧ್ಯಕ್ಷ ಮಹಾದೇವ ರಾವಜಿ, ಅಶೋಕ ನಾವಿ, ಮಂಜುನಾಥ ಹಿರೇಮಠ, ಭರತ ಕೋಳಿ, ದಸ್ತಗೀರ ಸಾಲೋಟಗಿ, ಯಾಕೂಬ್ ಕೋಪರ, ವಿನೋದ ದಳವಾಯಿ, ಫಯಾಜ್ ಕಲಾದಗಿ, ಮೈಬೂಬ್ ಬೇನೂರ, ರಾಜು ಹಜೇರಿ, ದಯಾನಂದ ಸಾವಳಗಿ, ಪಿದಾ ಕಲಾದಗಿ, ಸಾಧಿಕ್‌ ಜಾನ್ವೇಕರ, ಮೈಬೂಬ್ ಶೇಖ, ಹಾಜಮಲಿಂಗ ಬಡೆಘರ, ಬೀರಪ್ಪ ಹೂಗಾರ ಧರಣಿಯಲ್ಲಿ ಪಾಲ್ಗೊಂಡಿದ್ದರು.

‘ಅಭಿವೃದ್ಧಿಗೆ ಒತ್ತು ನೀಡಲಿ’:
ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಅಖಂಡ ಕರ್ನಾಟಕ ಒಡೆಯಲು ಯತ್ನಿಸುತ್ತಿರುವುದನ್ನು ಖಂಡಿಸಿ, ಅಂಧ ಮತ್ತು ಅನಾಥ ಮಕ್ಕಳ ಕ್ಷೇಮಾಭಿವೃದ್ಧಿ ಸಂಘ, ಡಿಎಸ್‌ಎಸ್‌, ಪ್ರಜಾ ವಿಮೋಚನಾ ಚಳವಳಿ ನೇತೃತ್ವದಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

‘ಕರ್ನಾಟಕ ಒಡೆಯುವ ತಪ್ಪು ನಿರ್ಧಾರದಿಂದ ಹಿಂದೆ ಸರಿದು, ಆಯಾ ಜಿಲ್ಲೆಗಳ ಸಚಿವರು, ಶಾಸಕರು, ಸಂಸದರು ಅಭಿವೃದ್ಧಿಗೆ ಒತ್ತು ನೀಡಬೇಕು. ಇದರಿಂದ ಸಮಗ್ರ ಕರ್ನಾಟಕ ಅಭಿವೃದ್ಧಿ ಹೊಂದಲಿದೆ. ಅದನ್ನು ಬಿಟ್ಟು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ನಾಡು ಒಡೆಯಲು ಮುಂದಾಗುವುದು ಸರಿಯಲ್ಲ. ಅಲ್ಲದೇ ದಕ್ಷಿಣ ಕರ್ನಾಟಕದವರು ಉತ್ತರ ಕರ್ನಾಟಕದ ಜನರನ್ನು ಕೀಳಾಗಿ ನೋಡುವುದನ್ನು ನಿಲ್ಲಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಶಕ್ತಿಕುಮಾರ, ಸಿದ್ದು ರಾಯಣ್ಣವರ, ಯಶವಂತ ದೊಡಮನಿ, ರಾಜು ರಣದೇವಿ, ಅರುಣ ರಜಪೂತ, ಶಶಿ ಹಡಪದ, ಭೀಮರಾವ್‌ ಕಾಂಬಳೆ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !