ಭಾನುವಾರ, ಮಾರ್ಚ್ 29, 2020
19 °C
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಕಳ್ಳಬೇಟೆ– ವನ್ಯಜೀವಿ ಕಾರ್ಯಕರ್ತರ ಆರೋಪ

ಉರುಳಿಗೆ ಸಿಲುಕಿ ಆನೆಯ ಸೊಂಡಿಲು ತೂತು

ಪ್ರವೀಣ್‌ ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಹಾರೋಹಳ್ಳಿ ವಲಯದ  ವ್ಯಾಪ್ತಿಯಲ್ಲಿ ಸೊಂಡಿಲು ಗಾಯಗೊಂಡು ತೂತುಬಿದ್ದಿರುವ ಆನೆಯೊಂದು ಪತ್ತೆಯಾಗಿದೆ. ನೀರು ಕುಡಿಯುವಾಗ ಸೊಂಡಿಲಿನಲ್ಲಿ ಅದು ಸೋರಿಕೆಯಾಗುತ್ತಿರುವುದರಿಂದ ಆನೆ ಸಮಸ್ಯೆ ಎದುರಿಸುತ್ತಿದೆ.

ಈ ದೃಶ್ಯವನ್ನು ಸೆರೆ ಹಿಡಿದಿರುವ ವನ್ಯಜೀವಿ ಛಾಯಾಗ್ರಾಹಕ ಲಾಯ್ಡ್‌ ನಿಹೇಮಿಯ ಅವರು ಅದನ್ನು ‘ಪ್ರಜಾವಾಣಿ’ಗೆ ಕಳುಹಿಸಿದ್ದಾರೆ.

’ಹಾರೋಹಳ್ಳಿ ವಲಯದ ರಾಗಿಹಳ್ಳಿ– ಶಿವನಹಳ್ಳಿ ಗ್ರಾಮದ ಬಳಿ ಕೊಳವೊಂದಿದೆ. ಆನೆಯು ನೀರು ಕುಡಿಯಲು ಶನಿವಾರ ಸಂಜೆ ವೇಳೆ ಅಲ್ಲಿಗೆ ಬಂದಿತ್ತು. ಆನೆಯ ದಂತಗಳಿಂದ ಸವಲ್ಪ ಕೆಳಭಾಗದ ಬಳಿ ಸೊಂಡಿಲಿನಿಂದ ಕಾರಂಜಿಯಂತೆ ನೀರು ಚಿಮ್ಮುವುದು ನೋಡಿ ಆಶ್ಚರ್ಯವಾಯಿತು. ನಾನು ಛಾಯಾಚಿತ್ರ ತೆಗೆದು ಝೂಮ್‌ ಮಾಡಿ ನೋಡಿದಾಗ ಅದರ ಸೊಂಡಿಲು ತೂತು ಬಿದ್ದಿದ್ದು ಕಾಣಿಸಿತು’ ಎಂದು ಲಾಯ್ಡ್‌ ತಿಳಿಸಿದರು.

ಬೇಟೆಗಾರರ ಉರುಳಿಗೆ ಸಿಲುಕಿ ಆನೆಯ ಸೊಂಡಿಲಿಗೆ ಗಾಯವಾಗಿದೆ. ಉರುಳಿನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸೊಂಡಿಲು ತೂತು ಬಿದ್ದಿದೆ ಎಂದು ವನ್ಯಜೀವಿ ಕಾರ್ಯಕರ್ತರು ಆರೋಪಿಸಿದ್ದಾರೆ.

‘ಗಾಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರ ಸೊಂಡಿಲಿನಲ್ಲಿ ತಂತಿಯ ಉರುಳಿನಿಂದ ಆಗಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಗಾಯ ಸ್ವಲ್ಪ ವಾಸಿಯಾದಂತೆ ತೋರುತ್ತಿದೆ. ಆದರೂ, ನೀರು ಕುಡಿಯಲು ಆನೆ ಬಹಳ ಕಷ್ಟಪಡುತ್ತಿತ್ತು’ ಎಂದು ಲಾಯ್ಡ್‌ ತಿಳಿಸಿದರು.

ಕಳ್ಳಬೇಟೆ

ರಾಗಿಹಳ್ಳಿ–ಶಿವನಹಳ್ಳಿ ಪರಿಸರದಲ್ಲಿ ಕಾಡುಪ್ರಾಣಿಗಳ ಕಳ್ಳಬೇಟೆ ವ್ಯಾಪಕವಾಗಿದೆ. ಕೆಲವರು ಅಕ್ರಮ ಕೋವಿ ಬಳಸಿ ಜಿಂಕೆ, ಮೊಲ, ಕಾಡುಕುರಿ, ಕಾಡುಹಂದಿ ಮುಂತಾದ ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಇನ್ನು ಕೆಲವರು ಕಾಡುಪ್ರಾಣಿಗಳು ಓಡಾಡುವ ಜಾಗಗಳಲ್ಲಿ ತಂತಿಯ ಉರುಳುಗಳನ್ನು ಇಟ್ಟು ಅವುಗಳನ್ನು ಕೊಲ್ಲುತ್ತಾರೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದರು.

‘ವರ್ಷದಿಂದ ಈಚೆಗೆ ಜಿಂಕೆಯೊಂದು ರಾಗಿಹಳ್ಳಿ ಬಳಿಯ ಕಾಡಿನಲ್ಲಿ ಉರುಳಿಗೆ ಸಿಲುಕಿ ಸತ್ತಿತ್ತು. ಕಳ್ಳಬೇಟೆಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೂ ಬೇಟೆಯನ್ನು ತಡೆಯಲು ಪರಿಣಾಮಕಾರಿಯಾಗಿ ಕ್ರಮಕೈಗೊಳ್ಳುತ್ತಿಲ್ಲ. ಮೂರು ತಿಂಗಳ ಹಿಂದೆ ಮೂವರು ಕಾಡುಕುರಿ ಬೇಟೆಯಾಡಿ ಸಿಕ್ಕಿಹಾಕಿಕೊಂಡಿದ್ದರು’ ಎಂದು ಅವರು ದೂರಿದರು.

‘ಕೆಲವರು ಪ್ರಾಣಿ ಬೇಟೆ ಆಡಿದ ಗುಂಡಿ ಶಬ್ದ ಕೇಳಿಸಬಾರದು ಎಂದು ಪಟಾಕಿ ಸಿಡಿಸಿ ದಾರಿ ತಪ್ಪಿಸುತ್ತಾರೆ. ಯಾರಾದರೂ ಕೇಳಿದರೆ ಆನೆ ಓಡಿಸಲು ಪಟಾಕಿ ಸಿಡಿಸಿದ್ದಾಗಿ ಹೇಳುತ್ತಾರೆ. ಯಾರು ಕಳ್ಳಬೇಟೆ ಆಡುತ್ತಾರೆ ಎಂಬ ವಿಚಾರ ಅರಣ್ಯ ಇಲಾಖೆ ಸಿಬ್ಬಂದಿಗೂ ಗೊತ್ತಿಲ್ಲದ್ದೇನಲ್ಲ’ ಎಂದು ಅವರು ವಿವರಿಸಿದರು.

ಗಾಯಗೊಂಡ ಆನೆಗಾಗಿ ಹುಡುಕಾಟ

‘ಉರುಳು ಹಾಕಲು ಬಳಸಿರುವ ತಂತಿ ಸೊಂಡಿಲಿನಲ್ಲೇ ಉಳಿದುಕೊಂಡಿದ್ದರೆ ಆನೆಗೆ ಅಪಾಯವಿದೆ. ಹಾಗಾಗಿ ಗಾಯಗೊಂಡ ಆನೆಯನ್ನು ಹುಡುಕುತ್ತಿದ್ದೇವೆ. ತಂತಿ ಉದುರಿ ಹೋಗಿದ್ದರೆ ಗಾಯ ತನ್ನಿಂದ ತಾನೆ ವಾಸಿಯಾಗುವ ಸಾಧ್ಯತೆ ಇದೆ’ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ  ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್‌ ಪ್ರಜಾವಾಣಿ’ಗೆ ತಿಳಿಸಿದರು.

’ಕಳ್ಳ ಬೇಟೆ ತಡೆಯಲು ಇಲಾಖೆಯೂ ಸಾಕಷ್ಟು ಕ್ರಮ ಕೈಗೊಂಡಿದೆ. ಇಲಾಖೆಯ ಸಿಬ್ಬಂದಿ ಹಾಗೂ ಸ್ವಯಂಸೇವಕರನ್ನು ಒಳಗೊಂಡ 8–10 ಮಂದಿಯ ತಂಡವನ್ನು ರಚಿಸಿ ಆಗಾಗ ಉರುಳುಗಳನ್ನು ಪತ್ತೆ ಹಚ್ಚಿ ತೆಗೆಸುವ ಕಾರ್ಯಾಚರಣೆ ನಡೆಸುತ್ತಿದ್ದೇವೆ. ರಾಷ್ಟ್ರೀಯ ಉದ್ಯಾನದ ಆಸುಪಾಸಿನಲ್ಲಿ ಗೋಮಾಳ ಒತ್ತುವರಿ ಮಾಡಿಕೊಂಡು ಅನೇಕರು ಅಲ್ಲಿ ಕೃಷಿ ಮಾಡುತ್ತಿದ್ದಾರೆ. ಕೃಷಿ ಜಮೀನಿನ ಅಂಚಿನಲ್ಲಿ, ತೋಟಗಳ ಬದಿಯಲ್ಲಿ ಉರುಳು ಹಾಕುತ್ತಾರೆ. ವರ್ಷದಿಂದ ಈಚೆಗೆ ಜಿಂಕೆ ಉರುಳಿಗೆ ಬಲಿಯಾಗಿದ್ದು ಕೂಡಾ ಅರಣ್ಯ ಭೂಮಿಯಲ್ಲಲ್ಲ. ಇಂತಹ ಕಡೆ ಪರಿಶೀಲನೆ ನಡೆಸಿ ಉರುಳು ಪತ್ತೆ  ಮಾಡುವುದ ಬಲು ಕಷ್ಟ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು