ಚಿಣ್ಣರ ಕಲರವವೂ; ಉಂಡೆಯ ಸವಿಯೂ..!

7
ಗುಮ್ಮಟನಗರಿಯಲ್ಲಿ ಒಂದೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮ; ಇನ್ನೊಂದೆಡೆ ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿ

ಚಿಣ್ಣರ ಕಲರವವೂ; ಉಂಡೆಯ ಸವಿಯೂ..!

Published:
Updated:
Deccan Herald

ವಿಜಯಪುರ: ಗುಮ್ಮಟನಗರಿಯ ಎಲ್ಲೆಡೆ ಬುಧವಾರ ಸ್ವಾತಂತ್ರ್ಯೋತ್ಸವ ಸಂಭ್ರಮ. ಗಲ್ಲಿ ಗಲ್ಲಿ, ಪ್ರಮುಖ ವೃತ್ತಗಳಲ್ಲಿ ಹಾರಾಡಿದ ತಿರಂಗಾ. ಚಿತ್ತಾಕರ್ಷಕ ರಂಗವಲ್ಲಿಯಲ್ಲಿ ಅರಳಿದ ದೇಶಭಕ್ತಿ ಬಿಂಬಿಸುವ ಘೋಷವಾಕ್ಯಗಳು. ಎಲ್ಲೆಡೆ ಮೊಳಗಿದ ಸಾರೇ ಜಹಾಂಸೇ ಅಚ್ಛಾ... ವಿವಿಧ ದೇಶಭಕ್ತಿ ಗೀತೆಗಳು...

ನಸುಕಿನಲ್ಲೇ ಯುವ ಸಮೂಹದಿಂದ ತಿರಂಗಾ ಹಿಡಿದು ನಗರದ ರಸ್ತೆಗಳಲ್ಲಿ ಬೈಕ್‌ ರ್‍ಯಾಲಿ... ಪ್ರಮುಖ ವೃತ್ತಗಳಲ್ಲಿ ತಂಡೋಪ ತಂಡವಾಗಿ ಸಾಹಸ ಪ್ರದರ್ಶಿಸಿ ನೆರೆದವರ ಮನಗೆದ್ದ ಯುವ ಸಮೂಹ. ಬಹುತೇಕರ ಕೆನ್ನೆಗಳಲ್ಲೂ ರಾರಾಜಿಸಿದ ಬಾವುಟದ ಸ್ಟಿಕ್ಕರ್‌...

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು. ಬೆಳಿಗ್ಗೆ ಪ್ರಾತಃಕಾಲದಲ್ಲೇ ವಿವಿಧ ಶಾಲಾ, ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿತು. ಚಿಕ್ಕಮಕ್ಕಳಂತೂ ಅತ್ಯುತ್ಸಾಹದಿಂದ ಸ್ವಾತಂತ್ರ್ಯ ಸಂಭ್ರಮದಲ್ಲಿ ಮಿಂದೆದ್ದರು. ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಘಟನಾವಳಿಗಳನ್ನು ಭಾಷಣದಲ್ಲಿ ಪ್ರಸ್ತುತಪಡಿಸಿದರು.

ವಂದೇ ಮಾತರಂ... ವಂದೇ ಮಾತರಂ... ಮೇರೆ ದೇಶ ಕೀ ಧರತಿ ಸೋನಾ ಉಗಲೇ... ಉಗಲೇ ಹಿರೇ ಮೋತಿ... ದಿಲ್ ದಿಯಾ ಹೈ ಜಾನ್ ಬೀ ದೇಂಗೆ ಏ ವತನ್ ತೇರೆ ಲಿಯೇ... ಎಂಬಿತ್ಯಾದಿ ಗೀತೆಗಳು ಎಲ್ಲ ಕಡೆಗಳಲ್ಲಿ ಮೊಳಗಿ ದೇಶಾಭಿಮಾನ ಉಕ್ಕಿಸಿದವು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಯೂ ‘ಸ್ವಾತಂತ್ರ್ಯೋತ್ಸವ’ ವರ್ಣರಂಜಿತವಾಗಿ ನಡೆಯಿತು. ದೇಶಾಭಿಮಾನ ಹೆಚ್ಚಿಸುವ ದೇಶಭಕ್ತಿ ಗೀತೆಗಳಿಗೆ ವಿವಿಧ ಶಾಲೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಪಥ ಸಂಚಲನ ತಂಡಗಳಿಂದ ಆಕರ್ಷಕ ಪಥ ಸಂಚಲನ, ಪೊಲೀಸ್ ವಾದ್ಯವೃಂದ ಹಿಮ್ಮೇಳನದಲ್ಲಿ ಅನುರಣಿಸಿದ ದೇಶಭಕ್ತಿ ಗೀತೆಗಳು ದೇಶ ಪ್ರೇಮ ಉಕ್ಕಿಸಿದವು. ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ ಅನಾವರಣಗೊಂಡಿತು. ಎಲ್ಲೆಲ್ಲೂ ರಾಷ್ಟ್ರೀಯ ಹಬ್ಬದ ಸಂಭ್ರಮ ಕಂಡು ಬರುತ್ತಿತ್ತು.

ನಸುಕಿನಲ್ಲೇ ಶಾಲಾ ವಿದ್ಯಾರ್ಥಿಗಳು ಅತ್ಯಂತ ಶಿಸ್ತುಬದ್ಧವಾಗಿ ಪ್ರಭಾತ್ ಪೇರಿ ನಡೆಸುತ್ತಾ, ದೇಶಭಕ್ತಿಯ ಘೋಷಣೆಗಳನ್ನು ಮೊಳಗಿಸುತ್ತ ಸಾಲಾಗಿ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಇಡೀ ಜಿಲ್ಲಾ ಕ್ರೀಡಾಂಗಣ ವಿದ್ಯಾರ್ಥಿಗಳಿಂದ ತುಂಬಿ ತುಳುಕಿತು. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಸ್ವಾತಂತ್ರ್ಯೋತ್ಸವದಲ್ಲಿ ಅಪಾರ ಸಂಖ್ಯೆಯ ಚಿಣ್ಣರು ಪಾಲ್ಗೊಂಡಿದ್ದರು.

ರಾಷ್ಟ್ರೀಯ ಹಬ್ಬಕ್ಕೆ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಕಳೆ ಕಟ್ಟಿದವು. ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ, ಸಾಮೂಹಿಕ ಕವಾಯತು, ಪಥ ಸಂಚಲನಾ ತಂಡಗಳಿಂದ ನಡೆದ ಆಕರ್ಷಕ ಪಥ ಸಂಚಲನ ನೋಡುಗರ ಗಮನ ಸೆಳೆಯಿತು.

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಐಆರ್‌ಬಿ ಪೊಲೀಸ್ ಪಡೆ, ನಾಗರಿಕ ಪೊಲೀಸ್ ಪಡೆ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಗೃಹ ರಕ್ಷಕ ದಳ, ಮಾಜಿ ಸೈನಿಕರು, ಸರ್ಕಾರಿ ಕಿರಿಯರ ಬಾಲಮಂದಿರ, ಕವಲಗಿಯ ಸಂಗನಬಸವ ಅಂತರರಾಷ್ಟ್ರೀಯ ಶಾಲೆ ಸೇರಿದಂತೆ ಹಲ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪೊಲೀಸ್ ವಾದ್ಯವೃಂದದಿಂದ ಮೊಳಗಿದ ಹಿಮ್ಮೇಳನ ಪಥಸಂಚಲನಕ್ಕೆ ವಿಶೇಷ ಮೆರುಗು ನೀಡಿತು.

ಉಂಡೆ ಸವಿದ ಚಿಣ್ಣರು:

ನಸುಕಿನಲ್ಲೇ ಒಂದೆಡೆ ಯುವಕರು, ಚಿಣ್ಣರು ದೇಶಾಭಿಮಾನದ ಪ್ರತೀಕವಾಗಿ ರಾಷ್ಟ್ರಧ್ವಜವನ್ನು ಹಿಡಿದು ಕ್ರೀಡಾಂಗಣದತ್ತ ಹೆಜ್ಜೆ ಹಾಕಿದರೆ; ಹೆಂಗೆಳೆಯರು, ಗೃಹಿಣಿಯರು ಪೂಜಾ ಸಾಮಗ್ರಿ, ನೈವೇದ್ಯ ಹಿಡಿದು ದೇಗುಲಗಳತ್ತ ತಂಡೋಪ ತಂಡವಾಗಿ ಚಿಕ್ಕಮಕ್ಕಳೊಂದಿಗೆ ನಾಗರ ಪಂಚಮಿ ಆಚರಣೆಗಾಗಿ ಹುತ್ತ ಅರಸಿ, ನಗರದ ಹೊರ ವಲಯ, ದೇಗುಲಗಳತ್ತ ಹೆಜ್ಜೆ ಹಾಕಿದ್ದು ಗೋಚರಿಸಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !