ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೇಸ್‌ಬುಕ್‌ ಕಮೆಂಟ್‌ಗಳ ಭ್ರಮೆಯಿಂದ ಹೊರಬನ್ನಿ’

ಕನ್ನಡ ಸಾಹಿತ್ಯದ ಹೊಸ ಲೇಖಕರ ತುಡಿತ ತಲ್ಲಣಗಳ ಪಕ್ಷಿನೋಟ ಕಟ್ಟಿಕೊಟ್ಟ ಗೋಷ್ಠಿ
Last Updated 21 ಜನವರಿ 2019, 3:15 IST
ಅಕ್ಷರ ಗಾತ್ರ

ಧಾರವಾಡ: ಹೊಸ ಲೇಖಕರು ರಚಿಸುತ್ತಿರುವ ಸಾಹಿತ್ಯ ಯಾವ ಬಗೆಯದು? ಅವರು ಕಟ್ಟಿಕೊಡುವ ಅನುಭವ ಲೋಕ ಎಂತಹದ್ದು? ಸಂಖ್ಯಾ ಬಾಹುಳ್ಯಕ್ಕೆ ಪೂರಕವಾಗಿ ಗುಣಮಟ್ಟವೂ ಹೊಸಬರ ಕೃತಿಗಳಲ್ಲಿ ಇವೆಯೇ? ಅವರು ಪರಂಪರೆಯಿಂದ ವಿಮುಖರಾಗುತ್ತಿದ್ದಾರೆಯೇ?

ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಕನ್ನಡ ಸಾಹಿತ್ಯ ಲೋಕದ ಹೊಸ ತಲೆಮಾರಿನ ಲೇಖಕರ ತುಡಿತ–ತಲ್ಲಣಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಭಾನುವಾರ ‘ಕನ್ನಡದ ಹೊಸಬೆಳೆ’ ಗೋಷ್ಠಿಯಲ್ಲಿ ನಡೆಯಿತು.

ಹಿರಿಯ ಲೇಖಕ ಬಾಳಾಸಾಹೇಬ ಲೋಕಾಪುರ, ‘ಹೊಸಬರು ನಿರ್ಭಯವಾಗಿ ಬರೆಯುತ್ತಿದ್ದಾರೆ. ಆದರೆ, ಇದು ಸಂವೇದನೆಗೆ ಮಂಕು ಕವಿದ ಕಾಲಘಟ್ಟ. ಟಿ.ವಿ.ಮಾಧ್ಯಮಗಳಿಂದಾಗಿ ಏಕಕಾಲದಲ್ಲಿ ಅನೇಕ ಅನುಭವಗಳನ್ನು ಪಡೆಯುವ ಸಂದರ್ಭದಲ್ಲಿ ಬರವಣಿಗೆಯಲ್ಲಿ ತೊಡಗಿರುವ ಹೊಸ ಲೇಖಕರು ಹೊಸ ರೀತಿಯ ಬಿಕ್ಕಟ್ಟು ಎದುರಿಸುತ್ತಿದ್ದಾರೆ’ ಎಂದರು.

‘ಹೊಸಬರು ಸಾಮಾಜಿಕ ಜಾಲತಾಣಗಳಲ್ಲಿ ಕಳೆದುಹೋಗುತ್ತಿದ್ದಾರೆ. ಫೇಸ್‌ಬುಕ್‌ ಕಮೆಂಟ್‌ಗಳ ಭ್ರಮೆಯಿಂದ ಅವರು ಮೊದಲು ಹೊರಗೆ ಬರಬೇಕು’ ಎಂದು ಕಿವಿಮಾತು ಹೇಳಿದರು.

‘ಯುವ ಲೇಖಕರ ಸಾಧಾರಣಾ ಕೃತಿಯನ್ನು ಉತ್ತಮ ಕೃತಿ ಎಂಬಂತೆ ಬಿಂಬಿಸಲಾಗುತ್ತಿದೆ. ಲೇಖಕರು ಅದನ್ನೇ ನಿಜ ಎಂದು ನಂಬಿಕೊಂಡಿದ್ದಾರೆ. ಇದು ಆತಂಕಕಾರಿ. ಇತ್ತೀಚೆಗೆ ರಾಷ್ಟ್ರಮಟ್ಟದ್ದು ಎಂದು ಕರೆಸಿಕೊಳ್ಳುವ ಆ ಪ್ರಶಸ್ತಿಗಳು ತಾಲ್ಲೂಕು ಮಟ್ಟದ್ದೂ ಆಗಿರುವುದಿಲ್ಲ’ ಎಂದರು.

ವಿಮರ್ಶಕಿ ತಾರಿಣಿ ಶುಭದಾಯಿನಿ, ‘21ನೇ ಶತಮಾನದ ಸಾಹಿತ್ಯ ಅನೇಕ ಗ್ರಹಿಕೆಗಳನ್ನು ಒಡೆದು ಹಾಕಿದೆ. ಯುವ ತಲೆಮಾರು ಆಲೋಚನೆಗಳನ್ನು ತಲುಪಿಸಲು ಮುದ್ರಣ ಮಾಧ್ಯಮವೊಂದನ್ನೇ ನೆಚ್ಚಿ ಕುಳಿತಿಲ್ಲ. ದೃಶ್ಯ ಹಾಗೂ ಕೇಳಿಸುವಿಕೆಯ ಅಭಿವ್ಯಕ್ತಿಯ ಸಾಧನಗಳನ್ನೂ ಬಳಸುತ್ತಿದೆ. ಸಾಹಿತ್ಯದ ಸಂಖ್ಯಾ ಬಾಹುಳ್ಯದಿಂದಾಗಿ ಎಲ್ಲ ಬರಹಗಾರರು ಓದಿನ ವ್ಯಾಪ್ತಿಗೆ ನಿಲುಕುತ್ತಿಲ್ಲ’ ಎಂದರು.

‘20ನೇ ಶತಮಾನದ ಆಧುನಿಕತೆ ಬಿಡುಗಡೆಯನ್ನು ತಂದುಕೊಟ್ಟರೆ, 21ನೇ ಶತಮಾನದ ಆಧುನಿಕತೆಯಲ್ಲಿ ಅನುಭವ ಲೋಕ ಮತ್ತಷ್ಟು ವಿಸ್ತಾರಗೊಂಡಿದೆ. ಅನುಭವದ ಮೂಲ ದೃವ್ಯವನ್ನೇ ಪ್ರಶ್ನಿಸಬೇಕಾದ ಸಂದಿಗ್ಧತೆಯಲ್ಲಿ ಯುವ ಬರಹಗಾರರು ಇದ್ದಾರೆ. ಅದು ಸಂಕಟ ಅಲ್ಲ. ಸತ್ಯೋತ್ತರ ಕಾಲಘಟ್ಟದಲ್ಲಿ ಅವರು ಕಟ್ಟಕಡೆಯ ಸತ್ಯವನ್ನು ತಲುಪುವ ಹಾಗೂ ವಾಸ್ತವದ ಋಜುತ್ವದ ಶೋಧದಲ್ಲಿ ತೊಡಗಿದ್ದಾರೆ. ಅವರು ಹೊಸ ಜಿಗಿತಕ್ಕೆ ಕಾಯುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಸುಧಾ’ ವಾರಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ., ‘ಸಾಹಿತ್ಯವೇನಿದ್ದರೂ ವಿಶ್ವವಿದ್ಯಾಲಯಗಳ ಚೌಕಟ್ಟಿನೊಳಗೆ ಇರಬೇಕು ಎಂಬ ಮಿಥ್ಯೆಯನ್ನು ಹೊಸ ತಲೆಮಾರಿನ ಲೇಖಕರು ಒಡೆದಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಸಾಹಿತ್ಯಕ್ಕೆ ವಿಭಿನ್ನ ಕೊಡುಗೆ ನೀಡುತ್ತಿದ್ದಾರೆ. ಹೊಸ ಪ್ರಯೊಗಗಳನ್ನೂ ಮಾಡುತ್ತಿದ್ದಾರೆ. ಆದರೆ, ಸಾಹಿತ್ಯ ಕೃಷಿಯ ಗುಣಮಟ್ಟವನ್ನು ನೋಡಿದರೆ ನಿರಾಸೆಯೇ ಕಾಣಿಸುತ್ತಿದೆ. ಅವರ ಕೃತಿಗಳಲ್ಲಿ ಪರಂಪರೆಯ ಗೈರು ಹಾಜರಿ ಮುಖ್ಯ ಕೊರತೆ’ ಎಂದರು.

‘ಸಾಹಿತ್ಯ ಕೃತಿಗಳು ಸಾವಧಾನವನ್ನು ಬೇಡುತ್ತವೆ. ತಕ್ಷಣ ಪ್ರಕಟಿಸುವ ಹಂಬಲದಿಂದ ಲೇಖಕರು ಅಲ್ಪತೃಪ್ತಿಗೆ ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ. ಸಮಕಾಲೀನ ಬೆಳವಣಿಗೆಗಳಿಗೆ ನೀಡುವ ಪ್ರತಿಕ್ರಿಯೆಗಳಿಗೆ ಕಲೆಯ ರೂಪ ಕೊಡುವಲ್ಲಿ ಸೋಲುತ್ತಿದ್ದಾರೆ. ಆದರೆ, ವಿ.ಎಂ. ಮಂಜುನಾಥ ಅವರ ‘ಅಸ್ಪೃಶ್ಯ ಗುಲಾಬಿ’ ಹಾಗೂ ಗುರುಪ್ರಸಾದ್‌ ಕಂಟಲಗೆರೆ ಅವರ ‘ಗೋವಿನ ಜಾಡು’ವಿನಂತಹ ಕೃತಿಗಳು ಇದಕ್ಕೆ ಅಪವಾದ’ ಎಂದರು.

ಲೇಖಕ ವಿಕ್ರಮ ವಿಸಾಜಿ ಗೋಷ್ಠಿ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT