ಪೈಪೋಟಿಯ ವಹಿವಾಟಿನಲ್ಲಿ ಲಾಭ ಕಡಿಮೆ..!

7
ಜಿಎಸ್‌ಟಿಗೆ ಒಗ್ಗಿಕೊಂಡ ಬಟ್ಟೆ ವರ್ತಕರ ಸಮೂಹ; ಗ್ರಾಹಕರನ್ನು ಇಂದಿಗೂ ಕಾಡುತ್ತಿರುವ ಮಾಹಿತಿ ಕೊರತೆ

ಪೈಪೋಟಿಯ ವಹಿವಾಟಿನಲ್ಲಿ ಲಾಭ ಕಡಿಮೆ..!

Published:
Updated:
Deccan Herald

ವಿಜಯಪುರ: ಬಜಾರ್‌ನ ಬಟ್ಟೆ ವ್ಯಾಪಾರದಲ್ಲಿ ವಿಪರೀತ ಪೈಪೋಟಿಯಿದೆ. ವರ್ಷದಿಂದೀಚೆಗೆ ನಿಖರ ವಹಿವಾಟು ಖಡಕ್‌ ಆಗಿ ಅನುಷ್ಠಾನಗೊಂಡಿದ್ದರಿಂದ ಸಹಜವಾಗಿಯೇ ಲಾಭಾಂಶ ಕುಸಿದಿದೆ... ಆದರೇ ಜಿಎಸ್‌ಟಿ ಜಾರಿಯಿಂದ ಏನ್ ಪರ್ಕ್‌ ಬಿದ್ದಿಲ್ಲ...

ಏಕರೂಪ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಂಡ 13 ತಿಂಗಳ ಬಳಿಕ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಬಟ್ಟೆ ಬಜಾರ್‌ನಲ್ಲಿನ ಅಂಗಡಿ ಮಾಲೀಕರನ್ನು ಜಿಎಸ್‌ಟಿ ಕುರಿತಂತೆ ಮಾತಿಗೆಳೆಯುತ್ತಿದ್ದಂತೆ, ಬಹುತೇಕರು ಮೇಲಿನಂತೆ ಪ್ರತಿಕ್ರಿಯಿಸಿದರು.

‘ಆರಂಭದ ದಿನಗಳಲ್ಲಿ ಮಾತ್ರ ಕೊಂಚ ಕಸಿವಿಸಿಯಿತ್ತು. ದಿನ ಕಳೆದಂತೆ ಎಲ್ಲವೂ ಮಾಮೂಲಿಯಾಗಿದೆ. ಮೊದಲು ನಾವು ಸಹ ವ್ಯಾಟ್‌ ಜತೆಗೆ ಎಕ್ಸೈಜ್‌ ಡ್ಯೂಟಿ ಸೇರಿದಂತೆ ಇನ್ನಿತರೆ ತೆರಿಗೆ ಪಾವತಿಸಬೇಕಿತ್ತು. ಹೊರ ರಾಜ್ಯಗಳಿಂದ ಬಟ್ಟೆ ತರುವಾಗ ಧೂಳಖೇಡದಲ್ಲಿದ್ದ ವಾಣಿಜ್ಯ ಇಲಾಖೆಯ ಚೆಕ್‌ಪೋಸ್ಟ್‌ನಲ್ಲೂ ತಪಾಸಣೆ ಮಾಡಿಸಬೇಕಿತ್ತು.

ಇದೀಗ ಈ ಯಾವ ರಗಳೆಯಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆದಿದೆ. ಹಲ ತೆರಿಗೆ ಬದಲು ಒಂದೇ ತೆರಿಗೆ ಪಾವತಿಸುತ್ತಿದ್ದೇವೆ. ವ್ಯಾಪಾರಿ ಸಮೂಹ ಸಹ ಹೊಸ ವ್ಯವಸ್ಥೆಗೆ ಹೊಂದಿಕೊಂಡು ತಮ್ಮ ವಹಿವಾಟು ನಡೆಸಲಾರಂಭಿಸಿದೆ’ ಎಂದು ಜಿಲ್ಲೆಯ ಬೃಹತ್ ಜವಳಿ ಉದ್ಯಮಿ, ಚಡಚಣ ಪಟ್ಟಣದಲ್ಲಿನ ಬಾಹುಬಲಿ ಎನ್.ಮುತ್ತಿನ ಕ್ಲಾಥ್‌ ಸೆಂಟರ್‌ನ ಮಾಲೀಕ ಅಜಿತ್‌ ಮುತ್ತಿನ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಎಸ್‌ಟಿ ಜಾರಿಗೆ ಮುನ್ನ ಕೆಲ ಅಂಗಡಿಗಳವರು ನೆರೆಯ ಮಹಾರಾಷ್ಟ್ರದಿಂದ ತೆರಿಗೆ ಪಾವತಿಸದೇ ಬಟ್ಟೆ ಖರೀದಿಸಿ; ಇಲ್ಲಿಗೆ ತಂದು ಮಾರಾಟ ಮಾಡಿ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದರು. ಇದೀಗ ಇಂತಹ ವಹಿವಾಟಿಗೆ ಪರ್ಕ್‌ ಬಿದ್ದಿದೆ. ಇದರಿಂದ ಲಾಭ ಕಡಿಮೆಯಾಗಿದೆ ಎಂದು ಹೇಳುವವರೇ ಹೆಚ್ಚಾಗಿದ್ದಾರೆ. ಅಕ್ಷರಶಃ ಉದ್ಯಮ, ವಹಿವಾಟಿಗೆ ಇದೀಗ ಯಾವ ಹೊಡೆತವೂ ಬೀಳುತ್ತಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆದಿದೆ’ ಎಂದು ಅವರು ಹೇಳಿದರು.

‘ಈ ಹಿಂದಿನ ವ್ಯಾಟ್‌ ಪದ್ಧತಿಗಿಂತ ಜಿಎಸ್‌ಟಿ ಚಲೋ ವ್ಯವಸ್ಥೆ. ಎಲ್ಲವೂ ಲೆಕ್ಕಾಚಾರದಡಿಯೇ ನಡೆಯುತ್ತಿವೆ. ನಿಖರ, ಪಾರದರ್ಶಕ ವಹಿವಾಟು ಜಿಎಸ್‌ಟಿಯಿಂದ ಜಾರಿಗೊಂಡಿದೆ. ಇನ್ನಷ್ಟು ಕಠಿಣವಾಗಿ ಅನುಷ್ಠಾಗೊಳಿಸಬೇಕು. ಆದರೆ ಗ್ರಾಹಕರಿಗೆ ಇಂದಿಗೂ ಇದು ಅರ್ಥವಾಗಿಲ್ಲ. ಅದರ ಪರಿಣಾಮ ಇನ್ನೂ ಅತೃಪ್ತಿ ಕಂಡು ಬರುತ್ತಿದೆ’ ಎಂದು ವಿಜಯಪುರ ನಗರದ ಬಟ್ಟೆ ವ್ಯಾಪಾರಿ ಶ್ರೀಕಾಂತ ಹಂಚಾಟೆ ತಿಳಿಸಿದರು.

‘ಜಿಎಸ್‌ಟಿ ಮೂಲಕ ಸಂಗ್ರಹಗೊಂಡ ತೆರಿಗೆ ದೇಶದ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂಬುದೇ ನಮಗೆ ಖುಷಿಯ ವಿಚಾರ. ಜಿಎಸ್‌ಟಿ ಅನುಷ್ಠಾನದಿಂದ ಬಟ್ಟೆ ಖರೀದಿಯಲ್ಲಿ ಹೇಳಿಕೊಳ್ಳುವಂತಹ ಬದಲಾವಣೆ ನಡೆದಿಲ್ಲ. ಅಂಗಡಿಯ ಮಾಲೀಕ ಹೇಳಿದ ದರಕ್ಕೆ ಇಂದು ಖರೀದಿ ನಡೆದಿದೆ. ಬಟ್ಟೆಯ ಮೂಲ ಬೆಲೆ ನಮ್ಮ ಅರಿವಿಗೆ ಇದೂವರೆಗೂ ಬಾರದಾಗಿದೆ’ ಎಂದು ಗ್ರಾಹಕ, ವಿಜಯಪುರದ ಸಿದ್ಧಾರ್ಥ ಕಲಾಲ್‌ ವಹಿವಾಟಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !