ಡಿ.ಕೆ.ಶಿವಕುಮಾರ್, ಎಚ್‌.ಡಿ.ರೇವಣ್ಣ ಕಮಿಷನ್‌ ಏಜೆಂಟ್‌ಗಳು: ಯಡಿಯೂರಪ್ಪ

7
ಬಿಜೆಪಿ ವಿಶೇಷ ಸಭೆ ಉದ್ಘಾಟಿಸಿ ಭಾಷಣ

ಡಿ.ಕೆ.ಶಿವಕುಮಾರ್, ಎಚ್‌.ಡಿ.ರೇವಣ್ಣ ಕಮಿಷನ್‌ ಏಜೆಂಟ್‌ಗಳು: ಯಡಿಯೂರಪ್ಪ

Published:
Updated:

ಬೆಂಗಳೂರು: ಸಚಿವರಾದ ಡಿ.ಕೆ.ಶಿವಕುಮಾರ್ ಮತ್ತು ಎಚ್‌.ಡಿ.ರೇವಣ್ಣ ಕಮಿಷನ್‌ ಏಜೆಂಟ್‌ಗಳು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ವಿಶೇಷ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಕಾಮಗಾರಿಗಳಿಗೂ ಈಗ ಶೇ 8ರಿಂದ 10ರಷ್ಟು ಕಮಿಷನ್‌ ನೀಡಬೇಕು ಎಂದು ಈ ಸಚಿವರು ಒತ್ತಡ ಹೇರುತ್ತಿದ್ದಾರೆ. ಇಲ್ಲದಿದ್ದರೆ ಹಣ ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದೊಂದು ಕಮಿಷನ್‌ ಸರ್ಕಾರ’ ಎಂದು ಜರಿದರು.

‘ಇದೊಂದು ತುಘಲಕ್‌ ಸರ್ಕಾರ. ಜನಹಿತವನ್ನು ಸಂಪೂರ್ಣ ಮರೆತಿದೆ. ನಾಲ್ಕು ತಿಂಗಳಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ. 15–20 ದಿನಗಳು ಬಿಟ್ಟು ಬಿಜೆಪಿ ಮುಖಂಡರು ರಾಜ್ಯ ಪ್ರವಾಸ ಮಾಡಿ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲಿದ್ದಾರೆ’ ಎಂದರು.

‘ಎಚ್.ಡಿ.ರೇವಣ್ಣ ಭೂಕಬಳಿಕೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಎ.ಮಂಜು ಆರೋಪ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

‘ದೇವೇಗೌಡರ ಕುಟುಂಬದ ಭೂಕಬಳಿಕೆ ವಿರುದ್ಧ ಬಿಜೆಪಿ ಈ ಹಿಂದೆ ಪುಸ್ತಕವೊಂದನ್ನು ಪ್ರಕಟಿಸಿತ್ತು. ಗೌಡರ ಕುಟುಂಬ ಅನೇಕ ಹಗರಣಗಳಲ್ಲಿ ಭಾಗಿಯಾಗಿದೆ. ಅದರ ಬಗ್ಗೆಯೂ ಪಕ್ಷ ಬೆಳಕು ಚೆಲ್ಲಲಿದೆ’ ಎಂದರು.

‘ರೈತರ ಸಾಲ ಮನ್ನಾ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ರೈತರ ಆತ್ಮಹತ್ಯೆ ನಿಂತಿಲ್ಲ. ಸಹಕಾರ ಸಂಘಗಳಿಗೆ ಸಾಲ ಮನ್ನಾದ ಕಂತಿನ ಹಣ ತಲುಪಿಲ್ಲ. ರೈತರಿಗೆ ನೋಟಿಸ್‌ ನೀಡುವುದನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು ನಿಲ್ಲಿಸಿಲ್ಲ. ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ. ಈ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದರೆ ಕುಮಾರಸ್ವಾಮಿ ಉಡಾಫೆ ಉತ್ತರ ನೀಡುತ್ತಾರೆ’ ಎಂದು ಅವರು ಕಿಡಿಕಾರಿದರು.

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !