ಶುಕ್ರವಾರ, ನವೆಂಬರ್ 22, 2019
19 °C

ತರಕಾರಿ, ಹಣ್ಣಿನ ದರ ಇಳಿಕೆ: ನಿಟ್ಟುಸಿರು ಬಿಟ್ಟ ಗ್ರಾಹಕರು

Published:
Updated:
Prajavani

ಬೆಂಗಳೂರು: ಗಣೇಶ ಚತುರ್ಥಿ ವೇಳೆ ಗಗನಕ್ಕೆ ಏರಿದ್ದ ತರಕಾರಿ ಹಾಗೂ ಹಣ್ಣಿನ ದರ ಈ ವಾರ ಕಡಿಮೆಯಾಗಿದೆ. ಇದರಿಂದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. 

ಕೆ.ಆರ್‌. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಪ್ರತಿ ಕೆ.ಜಿ.ಗೆ ₹100ರಿಂದ ₹120ರಂತೆ ಮಂಗಳವಾರ ಮಾರಾಟವಾಯಿತು. ₹200ರ ಗಡಿ ದಾಟಿದ್ದ ಶುಂಠಿ ಬೆಲೆ, ಕೆ.ಜಿ.ಗೆ ₹60ರಿಂದ ₹80ರಂತೆ ಮಾರಾಟವಾಗುತ್ತಿದೆ. ಬೀನ್ಸ್‌ ₹60, ಟೊಮೆಟೊ ₹30, ಈರುಳ್ಳಿ ₹30, ಹಸಿ ಮೆಣಸಿನಕಾಯಿ ₹20ರಂತೆ ಮಾರಾಟವಾಯಿತು. 

ಹಬ್ಬದ ವೇಳೆ ಕೆ.ಜಿ.ಗೆ ₹160 ಇದ್ದ ಸೇಬಿನ ಬೆಲೆ ₹100ಕ್ಕೆ ಇಳಿದಿದೆ. ದ್ರಾಕ್ಷಿ ₹200ರಿಂದ ₹120ಕ್ಕೆ ಇಳಿದಿದೆ. ದಾಳಿಂಬೆ ₹80, ಸಪೋಟ ₹60, ಕಿತ್ತಳೆ ₹60, ಸೀತಾಫಲ 50, ಮೂಸಂಬಿ ₹50ರಂತೆ ಬಿಕರಿಯಾಯಿತು.

‘ಹಬ್ಬದ ಸಮಯ ಮುಗಿದ ಬಳಿಕ ಹಣ್ಣುಗಳ ಬೆಲೆ ದಿಢೀರ್‌ ಇಳಿಮುಖವಾಗುತ್ತದೆ. ಹಣ್ಣು ಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗುತ್ತದೆ. ದ್ರಾಕ್ಷಿ, ಸೇಬು ಬಿಟ್ಟರೆ ಉಳಿದೆಲ್ಲಾ ಹಣ್ಣಿನ ದರ ತೀರಾ ಕಡಿಮೆಯಾಗಿದೆ. ಆದರೂ ಗ್ರಾಹಕರು ಬರುತ್ತಿಲ್ಲ’ ಎಂದು ಹಣ್ಣಿನ ವ್ಯಾಪಾರಿ ಹನುಮಂತ್ ತಿಳಿಸಿದರು.

‘ಮತ್ತೆ ಹಬ್ಬ ಬರುವವರೆಗೂ ಹಣ್ಣಿನ ದರ ಕಡಿಮೆ ಇರುತ್ತದೆ. ದಸರಾ ಹಬ್ಬಕ್ಕೆ ಹಣ್ಣಿನ ದರ ಏರಿಕೆಯಾಗುವ ಸಾಧ್ಯತೆ ಇದೆ’ ಎಂದರು.

‘ತರಕಾರಿ ನಿತ್ಯದ ಆಹಾರ ಸೇವನೆಗೆ ಅವಶ್ಯಕ. ಸಾಮಾನ್ಯ ದಿನಗಳಲ್ಲಿ ಕಡಿಮೆ ಇರುವ ತರಕಾರಿ ದರ ಹಬ್ಬದ ವೇಳೆ ದುಪ್ಪಟ್ಟಾಗುತ್ತದೆ. ಈಗಿನ ತರಕಾರಿ ದರ ಜನಸಾಮಾನ್ಯರಿಗೆ ಕೊಂಚ ಸಮಾಧಾನಕರವಾಗಿದೆ’ ಎನ್ನುತ್ತಾರೆ ಆರ್‌.ಟಿ.ನಗರ ನಿವಾಸಿ ಸ್ಪಂದನ.

 

ಪ್ರತಿಕ್ರಿಯಿಸಿ (+)