ಬುಧವಾರ, ಅಕ್ಟೋಬರ್ 16, 2019
27 °C
ಅನುದಾನ ಕಡಿತ ಖಂಡಿಸಿ ವಿಧಾನಸೌಧ ಚಲೊ: ಸರ್ಕಾರಕ್ಕೆ ಎಚ್ಚರಿಕೆ

‘ಸಾವಿರಾರು ಕೋಟಿ ಲೂಟಿಯೇ ಸಾಧನೆ’- ಎಚ್‌.ಡಿ.ಕುಮಾರಸ್ವಾಮಿ

Published:
Updated:
Prajavani

ಬೆಂಗಳೂರು: ‘ಕುತಂತ್ರದ ರಾಜಕಾರಣದಿಂದ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ವರ್ಗಾವಣೆ ದಂಧೆ ನಡೆಸಿ ಸಾವಿರಾರು ಕೋಟಿ ಸಂಗ್ರಹ ಮಾಡಿದ್ದೇ ಈ ಸರ್ಕಾರದ ಎರಡು ತಿಂಗಳ ಸಾಧನೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ನೀಡಿದ್ದ ಅನುದಾನವನ್ನು ಕಡಿತ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಆಗಿದ್ದಾಗ ಹಲವು ತೊಡಕು ಇದ್ದರೂ ಬೆಂಗಳೂರು ನಗರದಲ್ಲಿ ವಾಸಿಸುವ ಜನರಿಗೆ 1 ಲಕ್ಷ ಮನೆ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದೆ.  ಹೆಬ್ಬಾಳ ಬಳಿ ಶಂಕುಸ್ಥಾಪನೆ ಸಹ ನೆರವೇರಿಸಿದ್ದೆ. ಹೊಸ ಸರ್ಕಾರ ಬಂದ ನಂತರ, ಆ ಯೋಜನೆ ಏನಾಯಿತು ಎಂಬುದು ಗೊತ್ತಾಗುತ್ತಿಲ್ಲ’ ಎಂದರು.

‘ದಾಸರಹಳ್ಳಿ ವಿಧಾಸಭಾ ಕ್ಷೇತ್ರಕ್ಕೆ ನೀಡಿದ್ದ ಅನುದಾನವಷ್ಟೇ ಅಲ್ಲದೇ ಮೈತ್ರಿ ಸರ್ಕಾರದ ಎಲ್ಲ ಯೋಜನೆಗಳ ಅನುದಾನವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಇಂಥ ಯಾವುದೇ ಕುತಂತ್ರದ ರಾಜಕಾರಣಕ್ಕೆ ನಾನು ತಲೆ ಬಗ್ಗಿಸುವುದಿಲ್ಲ. ಇಂದು ಮಾಡಿರುವುದು ಸಾಂಕೇತಿಕ ಪ್ರತಿಭಟನೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ಸರ್ಕಾರದ ಆಯಸ್ಸು ಎರಡು ತಿಂಗಳು ಮಾತ್ರ: ‘ರಾಜ್ಯ ಸರ್ಕಾರದ ಆಯಸ್ಸು ಕೇವಲ ಎರಡು ತಿಂಗಳು ಮಾತ್ರ. ಅಷ್ಟರಲ್ಲೇ ಏನಾಗುತ್ತದೆ ? ಹಾಗೂ ಬಿ.ಎಸ್. ಯಡಿಯೂರಪ್ಪ ಎಷ್ಟು ದಿನ ಸರ್ಕಾರ ನಡೆಸುತ್ತಾರೆ‌ ಎಂಬುದನ್ನು ಕಾದು ನೋಡಿ’ ಎಂದು ಹೇಳಿದರು.

‘ಬಿಬಿಎಂಪಿಯಲ್ಲಿ ಅಧಿಕಾರಕ್ಕೆ ಬಂದಿದ್ದೇವೆ ಎಂದು ಬಿಜೆಪಿಯವರು ಸಂಭ್ರಮಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಪಾಲಿಕೆಯಲ್ಲಿ ಏನಾಗಿತ್ತು ಎಂಬುದು ಇಡೀ ನಗರಕ್ಕೆ ಗೊತ್ತಿದೆ. ಪಾಲಿಕೆಯ ಕಡತಗಳಿಗೆ ಬೆಂಕಿ ಬಿದ್ದಿದ್ದು ಅವರ ಕಾಲದಲ್ಲೇ. ಅದರ ಸೂತ್ರಧಾರಿಗಳು ಈಗ ಅವರ ಜತೆಗೆ ಇದ್ದಾರೆ’ ಎಂದು ಟೀಕಿಸಿದರು.

ಶಾಸಕ ಆರ್.ಮಂಜುನಾಥ್, ‘ನನ್ನ ಕ್ಷೇತ್ರದ ಅಭಿವೃದ್ಧಿಗೆ ಸುಮಾರು ₹700 ಕೋಟಿ ನಿಗದಿ ಆಗಿತ್ತು. 110 ಹಳ್ಳಿಗಳ ಅಭಿವೃದ್ಧಿ ಕೆಲಸಕ್ಕೆ ಟೆಂಡರ್‌ ಸಹ ನೀಡಲಾಗಿತ್ತು. ಇಂದಿನ ಸರ್ಕಾರ ಸುಮಾರು ₹35 ಕೋಟಿಗೆ ಅನುದಾನ ಕಡಿತಗೊಳಿಸಿದೆ. ಆ ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ಕಿಡಿಕಾರಿದರು. 

‘ನಾನು ಆಸೆ ಆಮಿಷಗಳಿಗೆ ಒಳಗಾಗುವ ವ್ಯಕ್ತಿ ಅಲ್ಲ. ಆಸೆ ಇದ್ದಿದ್ದರೆ ಆಪರೇಷನ್‌ ಕಮಲಕ್ಕೆ ಒಳಗಾಗುತ್ತಿದ್ದೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಗುರಿ’ ಎಂದರು. ಪ್ರತಿಭಟನೆ ಅಂಗವಾಗಿ ಎಂ.ಇ.ಐ ಆಟದ ಮೈದಾನದಿಂದ ಜಾಲಹಳ್ಳಿ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು. 

‘ಸಂಬಂಧ ಹಾಳು ಮಾಡಲು ಯತ್ನ’

‘ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಸಂಕಷ್ಟ ಎಂದು ಸುದ್ದಿ ಮಾಡುತ್ತಾ ಇದ್ದಾರೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್‌ ಕದ್ದಾಲಿಕೆ ಮಾಡಿಸಿದ್ದೆ ಎಂಬುದಾಗಿಯೂ ಹೇಳಿ ನನ್ನ ಹಾಗೂ ಅವರ ನಡುವಿನ ಸಂಬಂಧವನ್ನು ಹಾಳು ಮಾಡಲು ಯತ್ನಿಸಲಾಗುತ್ತಿದೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಅವರ ಮಾರ್ಗದರ್ಶನದಲ್ಲೇ ಆಡಳಿತ ನಡೆಸಿದ್ದೆ ಎಂದರು.

Post Comments (+)