ಪರಿಸರದ ಬಗ್ಗೆ ಸಂವೇದನೆ ಬೆಳೆಸಿಕೊಳ್ಳಿ: ನಾಗೇಶ ಹೆಗಡೆ

7

ಪರಿಸರದ ಬಗ್ಗೆ ಸಂವೇದನೆ ಬೆಳೆಸಿಕೊಳ್ಳಿ: ನಾಗೇಶ ಹೆಗಡೆ

Published:
Updated:

ಹುಬ್ಬಳ್ಳಿ: ಅಭಿವೃದ್ಧಿ ಬೇಕು ಆದರೆ ಸರ್ವನಾಶದ ಅಭಿವೃದ್ಧಿ ಬೇಡ ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಹೇಳಿದರು.

ನೇಚರ್ ಕ್ಲಬ್ ಹುಬ್ಬಳ್ಳಿ ನಗರದ ಐಎಂಎಸ್ಆರ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಪರಿಸರ; ವಿದ್ಯಾರ್ಥಿಗಳ ಜವಾಬ್ದಾರಿ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ‘ಪರಿಸರ ಹಾಗೂ ಜೀವ ಸಂಕುಲದ ಬಗ್ಗೆ ನಾವು ಅಸೂಕ್ಷ್ಮರಾಗಿದ್ದೇವೆ. ಮನುಷ್ಯ ನಿರ್ಮಾಣ ಮಾಡಿದ್ದನ್ನು ಪರಿಸರ ಕೆಡವಿದರೆ ಅದನ್ನು ವಿಧ್ವಸಕ ಎನ್ನುತ್ತೇವೆ, ಅದೇ ಮನುಷ್ಯ ಪ್ರಕೃತಿಯನ್ನು ನಾಶ ಮಾಡಿದರೆ ಅಭಿವೃದ್ಧಿ ಎಂಬ ಹೆಸರು ಕೊಡುತ್ತೇವೆ’ ಎಂದರು.

‘ಪರಿಸರಕ್ಕೆ ಹಾನಿಯಾಗದಂತಹ ಸುಸ್ಥಿರ ಪ್ರಗತಿಯ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕು. ವೈದ್ಯ, ಎಂಜಿನಿಯರ್, ಸಾಹಿತಿ, ಶಿಕ್ಷಕ ಸೇರಿದಂತೆ ಎಲ್ಲ ವಿಭಾಗದವರು ಪರಿಸರದ ಬಗ್ಗೆ ಸಂವೇದನೆ ಬೆಳೆಸಿಕೊಳ್ಳಬೇಕು. ಮಕ್ಕಳು ಸಹಜವಾಗಿಯೇ ಪರಿಸರದ ಬಗ್ಗೆ ಪ್ರೀತಿ ಹೊಂದಿರುತ್ತಾರೆ. ಆದರೆ ಅವರನ್ನು ಪರಿಸರದಿಂದ ಬೇರೆ ಮಾಡಲಾಗುತ್ತಿದೆ. ಶಿಕ್ಷಣ ಪಡೆದ ಹಾಗೆ ಅವರು ನಿಸರ್ಗದಿಂದ ದೂರ ಆಗುತ್ತಿದ್ದಾರೆ. ಪರಿಸ್ಥಿತಿ ಬದಲಾವಣೆ ಆಗಬೇಕು, ಅದು ಮನೆಯಿಂದಲೇ ಆರಂಭವಾಗಬೇಕು’ ಎಂದು ಹೇಳಿದರು.

ಧಾರವಾಡ ವಲಯದ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಟಿ.ವಿ. ಮಂಜುನಾಥ್ ಮಾತನಾಡಿ, ‘ಸರ್ಕಾರದಲ್ಲಿ ಸುಮಾರು 150 ಇಲಾಖೆಗಳಿದ್ದರೆ, ಅವುಗಳಲ್ಲಿ 149 ಮನುಷ್ಯರಿಗಾಗಿ ಕೆಲಸ ಮಾಡುತ್ತಿವೆ. ಪ್ರಾಣಿ, ಪರಿಸರಕ್ಕೆ ಇರುವ ಒಂದೇ ಇಲಾಖೆ ಎಂದರೆ ಅದು ಅರಣ್ಯ ಇಲಾಖೆ. ಆದರೆ ಅಭಿವೃದ್ಧಿಯ ವಿರೋಧಿಗಳು ಎಂದು ಅರಣ್ಯಾಧಿಕಾರಿಗಳನ್ನು ದೂರಲಾಗುತ್ತದೆ. ಪರಿಸರದ ಸಂಪನ್ಮೂಲಗಳು ಅನಿಯಮಿತ ಎಂಬ ತಪ್ಪು ಕಲ್ಪನೆಯಲ್ಲಿದ್ದೇವೆ. ಪರಿಸರದ ನಮ್ಮ ಕೊನೆಯ ಆದ್ಯತೆಯಾಗಿದೆ’ ಎಂದರು.

‘ಪ್ರತ್ಯಕ್ಷವಾಗಿ ಮಾತ್ರವಲ್ಲದೆ, ಪರೋಕ್ಷವಾಗಿಯೂ ನಾವೆಲ್ಲರೂ ಪರಿಸರ ವಿರೋಧಿ ಕೆಲಸದಲ್ಲಿ ತೊಡಗಿದ್ದೇವೆ. 7 ಸಾವಿರ ಕೃಷ್ಣಮೃಗಗಳಿಗಾಗಿ ರಾಣೆ ಬೆನ್ನೂರಿನಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ಅಭಯಾರಣ್ಯ ಇದೆ. ಆದರೆ ಅಲ್ಲಿ 50 ಸಾವಿರ ಕುರಿಗಳನ್ನು ಮೇಯಿಸಲಾಗುತ್ತಿದೆ. ಒಂದು ಕುರಿಗೆ ₹10 ಸಾವಿರ ಎಂದರೂ ₹50 ಕೋಟಿಯ ವಹಿವಾಟು ನಡೆಯುತ್ತದೆ. ಮಟನ್ ಬಿರಿಯಾನಿ ತಿನ್ನೋದು ಬಿಟ್ಟರೆ ಕುರಿಗೆ ಬೇಡಿಕೆ ಇರುವುದಿಲ್ಲ, ಆಗ ಅರಣ್ಯದೊಳಗೆ ಅವುಗಳನ್ನು ಬಿಡುವ ಪ್ರಮೇಯ ಇರುವುದಿಲ್ಲ. ದಂತಕ್ಕೆ ಬೇಡಿಕೆ ಇದ್ದಿದ್ದರಿಂದಲೇ ವೀರಪ್ಪನ್ ಆನೆಯನ್ನು ಕೊಲ್ಲುತ್ತಿದ್ದ’ ಎಂದರು.

ಮಕ್ಕಳಿಗೆ ಪರಿಸರ, ಗಾಳಿ, ನೀರು, ಪ್ರಾಣಿ ಸಂಕುಲದ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ. ಪಠ್ಯಪುಸ್ತಕದಲ್ಲಿ ಈ ವಿಷಯಗಳನ್ನು ಸೇರಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ಐಎಂಎಸ್ಆರ್ ನಿರ್ದೇಶಕ ಡಾ. ಪ್ರಸಾದ್ ರೂಢಗಿ, ಸ್ವರ್ಣ ಗ್ರೂಪ್‌ನ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ್, ನೇಚರ್ ಕ್ಲಬ್ ವ್ಯವಸ್ಥಾಪಕ ಎಂ.ಆರ್. ಮಂಜುನಾಥ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !